ಉಸಿರಾಟದ ತೊಂದರೆಯಿಂದ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತ| ಜೀವ ಬಿಡುವುದಕ್ಕೂ ಮುನ್ನ ತನ್ನ ಫೋನ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಪತ್ರಕರ್ತ| ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಆ ಮೂಲಕ ಕೊರೋನಾ ಸೋಂಕಿನಿಂದ ಪಾರಾಗಬೇಕು ಎಂದು ಸಲಹೆ ನೀಡಿದ್ದ ಪತ್ರಕರ್ತ|
ಬೆಂಗಳೂರು(ಆ.15): ಕೊರೋನಾ ಸೋಂಕಿತ ಪತ್ರಕರ್ತರೊಬ್ಬರು ಮೃತ ಪಡುವುದಕ್ಕೂ ಮುನ್ನ ಪತ್ನಿ ಮತ್ತು ಮಕ್ಕಳಿಂದ ದೂರ ಉಳಿಯುವುದರಿಂದ ಆಗುವ ಮಾನಸಿಕ ನೋವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಒಂದು ವಾರದ ಹಿಂದೆ ಉಸಿರಾಟದ ತೊಂದರೆಯಿಂದ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತ ಶುಕ್ರವಾರ ಮೃತಪಟ್ಟಿದ್ದಾರೆ.
ಕೊರೋನಾ ಕಾಟ: ಕಂಟೈನ್ಮೆಂಟ್ ಕೈಬಿಡಲು ಪ್ರಸ್ತಾವನೆ
ಜೀವ ಬಿಡುವುದಕ್ಕೂ ಮುನ್ನ ತನ್ನ ಫೋನ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿರುವ ಅವರು, ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ, ಮಾನಸಿಕ ನೆಮ್ಮದಿ ಇಲ್ಲ. ಮಕ್ಕಳನ್ನು ನೋಡಬೇಕು ಎಂದು ಮನಸ್ಸು ಕಾಡುತ್ತಿದೆ. ಆದರೆ, ಸಾಧ್ಯವಾಗದೆ ನೋವಿನಲ್ಲಿ ಕಾಲ ಕಳೆಯುತ್ತಿದ್ದೇನೆ. ಈ ಪರಿಸ್ಥಿತಿ ಮತ್ಯಾರಿಗೂ ಬರಬಾರದು. ಮಕ್ಕಳು ಮತ್ತು ಪತ್ನಿಯನ್ನು ಪೋಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಕಡ್ಡಾಯವಾಗಿ ಸ್ಯಾನಿಟೈಸರ್ ಮತ್ತು ಮಾಸ್ಕ್‌ನ್ನು ಧರಿಸಬೇಕು. ಜೊತೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆ ಮೂಲಕ ಕೊರೋನಾ ಸೋಂಕಿನಿಂದ ಪಾರಾಗಬೇಕು ಎಂದು ಸಲಹೆ ನೀಡಿದ್ದಾರೆ.