
ಬೆಂಗಳೂರು (ಜೂ.15): ಪ್ರಜಾಪ್ರಭುತ್ವದಲ್ಲಿ ಜಾಗೃತವಾಗಿರುವುದು ಎಷ್ಟು ಮುಖ್ಯವೋ ಜನ ಸಮುದಾಯದ ಪರ ಇರುವ ಕೆಲಸ ಮಾಡುವುದು ಅಷ್ಟೇ ಮುಖ್ಯ. ಅದನ್ನು ಪತ್ರಿಕೋದ್ಯಮ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ.ಕೂಡ್ಲಿ ಗುರುರಾಜ ಅವರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಖಾದ್ರಿ ಶಾಮಣ್ಣ ಸಿಡಿದೆದ್ದ ವ್ಯಕ್ತಿ. ಅತ್ಯಂತ ಸಮರ್ಥವಾಗಿ ಪತ್ರಿಕೋದ್ಯಮವನ್ನು ಮುನ್ನಡೆಸಿದ ಕೀರ್ತಿ ಶಾಮಣ್ಣ ಅವರಿಗೆ ಸಲ್ಲುತ್ತದೆ. ಕೆಲ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಖಾದ್ರಿ ಅವರು ಕೈಗೊಂಡ ನಿಲುವು ಸ್ಪಷ್ಟ ಮತ್ತು ಗಟ್ಟಿಯಾಗಿ ಉಳಿಯುವಂತ ನಿಲುವಾಗಿತ್ತು ಎಂದರು. ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವೆ ಅವಿನಾಭಾವ ಸಂಬಂಧವಿದೆ.
ರಾಜಕೀಯ ಸುದ್ದಿ ಇಲ್ಲದೆ ಪತ್ರಿಕೆಗಳಲ್ಲಿ ಆಕರ್ಷಣೆ ಇರುವುದಿಲ್ಲ. ಅದೇ ರೀತಿ ರಾಜಕಾರಣಿಯ ಸುದ್ದಿಗಳು ಪತ್ರಿಕೆಯಲ್ಲಿ ಬರದಿದ್ದರೆ ರಾಜಕಾರಣಿಗೆ ಅಸ್ತಿತ್ವವೇ ಇಲ್ಲ. ಪತ್ರಿಕೋದ್ಯಮ ಯಾವಾಗಲು ಸತ್ಯದ ಪರವಾಗಿ ನಿಲ್ಲಬೇಕು. ನಿಖರ ಮತ್ತು ಸತ್ಯನಿಷ್ಠ ವರದಿಗಳನ್ನು ಪ್ರಕಟ ಮಾಡಿದಾಗ ಮಾತ್ರ ಪತ್ರಿಕೋದ್ಯಮದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸ್ಪರ್ಧಾತ್ಮಕ ಉದ್ಯಮದಲ್ಲಿ ಉಳಿಯುವುದು ಕಷ್ಟ ಎಂದು ಹೇಳಿದರು.
ರಾಜ್ಯದಲ್ಲಿ ಸರ್ಕಾರ ಬದಲಾಗುವ ಚರ್ಚೆ ನಡೆಯುತ್ತಿತ್ತು. ನಾನು ದೆಹಲಿಯಲ್ಲಿ ಏಳು ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುಮತಿ ಪಡೆದಿದ್ದೆ. ಅದನ್ನು ಪತ್ರಕರ್ತರೊಬ್ಬರು ಸರ್ಕಾರ ಬೀಳುವ ಸಂದರ್ಭದಲ್ಲಿಯೂ ಈ ಸಚಿವರು ನೀರಾವರಿ ಯೋಜನೆಗಳಿಗೆ ಅನುಮತಿ ಪಡೆದಿದ್ದಾರೆ ಎಂದು ವಿಶ್ಲೇಷಣಾತ್ಮಕ ಲೇಖನ ಬರೆದಿದ್ದರು. ಒಳ್ಳೆಯ ಕೆಲಸ ಮಾಡಿದರೆ ಪತ್ರಿಕೆಗಳು ಗುರುತಿಸುತ್ತವೆ ಅನಿಸಿತು. ಹಾಗೆಯೇ ತುಂಗಭದ್ರಾ ಕಾಲುವೆ ಯೋಜನೆ ಜಾರಿಗೊಳಿಸಲು ಅನುಕೂಲವಾಯಿತು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ವೂಡೇ ಪಿ.ಕೃಷ್ಣ, ಆಸ್ಸಾಂ ಕೇಂದ್ರಿಯ ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ವಿ. ನಾಗರಾಜ, ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ, ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಎಚ್. ಆರ್. ಶ್ರೀಶ ಸೇರಿ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ