ಬಿಬಿಎಂಪಿ ವಾರ್ಡ್‌ ಸಂಖ್ಯೆ 250ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಜಂಟಿ ಸಮಿತಿ ಶಿಫಾರಸು

By Kannadaprabha NewsFirst Published Sep 23, 2020, 8:09 AM IST
Highlights

ಕಳೆದ ಮಾರ್ಚ್‌ ತಿಂಗಳಲ್ಲಿ ನಡೆದ ಅಧಿವೇಶನದಲ್ಲಿ ಬಿಬಿಎಂಪಿ ವಿಧೇಯಕ ಮಂಡನೆ| ಆಡಳಿತ ಪಕ್ಷದವರಿಂದಲೇ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಂಟಿ ಪರಿಶೀಲನಾ ಸಮಿತಿ ರಚನೆ| ವಿಧೇಯಕದಲ್ಲಿನ ಅಂಶಗಳ ಬಗ್ಗೆ ಸವಿಸ್ತಾರವಾಗಿ ಪರಿಶೀಲಿಸಿ ಸಮಿತಿಯು ಚರ್ಚಿಸಿದ ಬಳಿಕ ಸದನದಲ್ಲಿ ಮಂಡನೆ| 

ಬೆಂಗಳೂರು(ಸೆ.23): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 198 ವಾರ್ಡ್‌ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಳ ಮಾಡುವಂತೆ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸದನದಲ್ಲಿ ಮಂಗಳವಾರ ಸಮಿತಿ ಅಧ್ಯಕ್ಷ ಎಸ್‌.ರಘು ವಿಶೇಷ ವರದಿಯನ್ನು ಮಂಡಿಸಿದರು. 2020ನೇ ಸಾಲಿನ ಬಿಬಿಎಂಪಿ ವಿಧೇಯಕವನ್ನು ಸಮಿತಿಯು ಪರಿಶೀಲನೆ ನಡೆಸಿ ಸಿದ್ಧಪಡಿಸಿದ ವರದಿ ಮಂಡಿಸಲಾಯಿತು. 198 ವಾರ್ಡ್‌ಗಳನ್ನು 250ಕ್ಕೆ ಹೆಚ್ಚಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಕಳೆದ ಮಾರ್ಚ್‌ ತಿಂಗಳಲ್ಲಿ ನಡೆದ ಅಧಿವೇಶನದಲ್ಲಿ ಬಿಬಿಎಂಪಿ ವಿಧೇಯಕ ಮಂಡನೆ ಮಾಡಲಾಗಿತ್ತು. ಆದರೆ, ಆಡಳಿತ ಪಕ್ಷದವರಿಂದಲೇ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಂಟಿ ಪರಿಶೀಲನಾ ಸಮಿತಿ ರಚನೆ ಮಾಡಲಾಯಿತು. ವಿಧೇಯಕದಲ್ಲಿನ ಅಂಶಗಳ ಬಗ್ಗೆ ಸವಿಸ್ತಾರವಾಗಿ ಪರಿಶೀಲಿಸಿ ಸಮಿತಿಯು ಚರ್ಚಿಸಿದೆ. ಬಳಿಕ ಸದನದಲ್ಲಿ ಮಂಡಿಸಲಾಗಿದೆ.

ಬಿಬಿಎಂಪಿ ವಾರ್ಡ್‌ ಸಂಖ್ಯೆ 225ಕ್ಕೆ ಹೆಚ್ಚಿಸಲು ಶಿಫಾರಸು

ವರದಿ ಮಂಡಿಸಿದ ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷ ಎಸ್‌.ರಘು, ಬಿಬಿಎಂಪಿ ವಿಧೇಯಕದಲ್ಲಿನ ಅಂಶಗಳ ಕುರಿತು ವಿಸ್ತೃತವಾಗಿ ಚರ್ಚಿಸಿ ವರದಿ ನೀಡಲಾಗಿದೆ. ಬಿಬಿಎಂಪಿ ಚುನಾಯಿತ ಅವಧಿಯು ಮುಕ್ತಾಯಗೊಂಡಿದೆ. ಚುನಾವಣೆಯನ್ನು ನಡೆಸಬೇಕಾಗಿರುತ್ತದೆ. ಹೀಗಾಗಿ ಈ ವಿಶೇಷ ವರದಿಯನ್ನು ಸೆ.16ರಂದು ನಡೆದ ಸಮಿತಿ ಸಭೆಯಲ್ಲಿ ಅಂಗೀಕರಿಸಿ ಸಭಾಧ್ಯಕ್ಷರಿಗೆ ಸಲ್ಲಿಸುವ ತೀರ್ಮಾನ ಕೈಗೊಳ್ಳಲಾಯಿತು. ಬಿಬಿಎಂಪಿಗೆ ಚುನಾವಣೆ ನಡೆಸಬೇಕಾಗಿದೆ. ಆದರೆ, ಪ್ರಸ್ತುತ ವಿದ್ಯಮಾನಗಳು ಬೆಂಗಳೂರು ಮಹಾನಗರದಲ್ಲಿ ಹೆಚ್ಚಳವಾದ ಜನಸಂಖ್ಯೆ ಮತ್ತು ವಿಸ್ತಾರವಾದ ಪ್ರದೇಶಗಳನ್ನು ಗಮನಿಸಿರುವ ಸಮಿತಿಯು 1976ನೇ ಸಾಲಿನ ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ ಪ್ರಕರಣ-7ಕ್ಕೆ ತಿದ್ದಪಡಿ ತರುವಂತೆ ಶಿಫಾರಸು ಮಾಡಿದೆ ಎಂದರು.

ಬಳಿಕ ವರದಿ ಮಂಡನೆ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಹೊಸ ಪ್ರದೇಶಗಳನ್ನು ಸೇರಿಸಿ ಬಿಬಿಎಂಪಿ ವಾರ್ಡ್‌ಗಳನ್ನು ಮರುವಿಂಗಡಣೆ ಮಾಡುವ ಚಿಂತನೆ ಇದೆ. 198 ವಾರ್ಡ್‌ನಿಂದ ಒಟ್ಟು 250 ವಾರ್ಡ್‌ಗಳನ್ನು ಮಾಡುವ ಬಗ್ಗೆ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
 

click me!