
ಬೆಂಗಳೂರು(ಮೇ.13): ಪರಿಶಿಷ್ಟಜಾತಿ ಮತ್ತು ಪಂಗಡ ವರ್ಗದವರು ದೌರ್ಜನ್ಯದಿಂದ ಮೃತಪಟ್ಟಲ್ಲಿ ಅಂತಹ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಸರ್ಕಾರಿ ನೌಕರರು ಕರ್ತವ್ಯನಿರತರಾಗಿದ್ದ ವೇಳೆ ಸಾವನ್ನಪ್ಪಿದರೆ ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಲಾಗುತ್ತದೆ. ಅದೇ ಮಾದರಿಯಲ್ಲಿ ಎಸ್‌ಸಿ/ಎಸ್‌ಟಿ ವರ್ಗಗಳ ವ್ಯಕ್ತಿಗಳು ದೌರ್ಜನ್ಯದಿಂದ ಮೃತಪಟ್ಟರೆ ಆ ವ್ಯಕ್ತಿಯ ಅವಲಂಬಿತರಿಗೆ ಅನುಕಂಪದ ಅಧಾರದ ಮೇಲೆ ಸರ್ಕಾರಿ ಕೆಲಸ ನೀಡಲಾಗುತ್ತದೆ ಎಂದು ಹೇಳಿದರು.
ಗೃಹ ಸಚಿವರ ತವರು ಕ್ಷೇತ್ರದಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಯತ್ನ!
ಇನ್ನು, ಬಸವಕಲ್ಯಾಣ ಅನುಭವ ಮಂಟಪ ನಿರ್ಮಾಣಕ್ಕೆ ಮೊದಲಿಗೆ 500 ಕೋಟಿ ರು. ವೆಚ್ಚ ನಿಗದಿಯಾಗಿತ್ತು. ಸಿಮೆಂಟ್, ಸ್ಟೀಲ್ ಹೆಚ್ಚಳ ಹಿನ್ನೆಲೆಯಲ್ಲಿ 112 ಕೋಟಿ ರು. ಹೆಚ್ಚುವರಿ ಅನುದಾನ ಒದಗಿಸಲು ಅನುಮತಿ ನೀಡಲಾಗಿದೆ. ಬಗರ್ ಹುಕುಂ ಅರ್ಜಿಗಳನ್ನು ಪಡೆಯಲು ಆರು ತಿಂಗಳ ಕಾಲ ಅವಕಾಶ ನೀಡುವ ಭೂ ಕಂದಾಯ(ತಿದ್ದುಪಡಿ) ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಕೈಗೆತ್ತಿಕೊಂಡಿರುವ ಉಗ್ರಾಣಗಳ ಮತ್ತು ಮೂಲಭೂತ ಸೌಲಭ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲು 862.37 ಕೋಟಿ ರು. ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಸಚಿವ ಸಂಪುಟದ ಇತರೆ ತೀರ್ಮಾನಗಳು:
* ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಲ್ಲೂರ ಗ್ರಾಮದಲ್ಲಿ ಸಿಪೆಟ್ ಸಂಸ್ಥೆಯ ಕೌಶಲ್ಯ ಮತ್ತು ತಾಂತ್ರಿಕ ನೆರವು ಕೇಂದ್ರವನ್ನು 89.94 ಕೋಟಿ ರು. ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ
* ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ/ಉನ್ನತೀಕರಣಗೊಳಿಸುವ 100 ಕೋಟಿ ರು. ವೆಚ್ಚದ ಯೋಜನೆಗೆ ಒಪ್ಪಿಗೆ
* ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಗ್ರಾಮಕ್ಕೆ ಒಂದು ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು. ಸಿಬ್ಬಂದಿ ಮತ್ತು ಉಪಕರಣಗಳನ್ನು ಒದಗಿಸಲು ಅನುಮೋದನೆ
ದಲಿತ ಸಿಎಂ ಕುಮಾರಸ್ವಾಮಿ ಎಲೆಕ್ಷನ್ ಗಿಮಿಕ್: ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ
* ಹಿಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಅಗತ್ಯ ಇರುವ ಆ್ಯಂಟಿ ಹಿಮೋಫೀಲಿಯಾ ಔಷಧಿಗಳನ್ನು 29 ಕೋಟಿ ರು. ಮೊತ್ತದಲ್ಲಿ ಖರೀದಿಸಲು ಒಪ್ಪಿಗೆ
* ಮೈಸೂರಿನಲ್ಲಿನ ಆಂಜನೇಯಸ್ವಾಮಿ ದೇವಾಲಯವನ್ನು ಉತ್ತರಾದಿ ಮಠಕ್ಕೆ ದೀರ್ಘಾವಧಿಗೆ ಗುತ್ತಿಗೆ ನೀಡಲು ಸಹಮತ
* ಬೆಂಗಳೂರಿನ ಬಸವನಗುಡಿಯ ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ ಜಾಗದಲ್ಲಿ ಶೃಂಗೇರಿ ಶಾರದಾ ಪೀಠದವರ ಸಹಭಾಗಿತ್ವದಲ್ಲಿ ಕಲ್ಯಾಣಮಂಟಪ ನಿರ್ಮಾಣ ಪೂರ್ಣಗೊಳಿಸಲು ಅನುಮತಿ
* ಭದ್ರಾ ಮೇಲ್ದಂಡೆಯಿಂದ ಪೈಪ್‌ಲೈನ್ ಮೂಲಕ ನೀರು ತರಲು 1300 ಕೋಟಿ ರು. ಅನುದಾನಕ್ಕೆ ಒಪ್ಪಿಗೆ. ಚಿಕ್ಕಮಗಳೂರಿನ 146 ಹಳ್ಳಿಗಳು, ತರಿಕೇರಿಯ 156 ಹಳ್ಳಿಗಳು, ಅಜ್ಜಂಪುರ, ಹೊಸದುರ್ಗದ 346 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಸಮ್ಮತಿ
* ಅಟಲ್ ನಗರ ಪುನರುತ್ಥಾನದಡಿ ಯುಜಿಡಿ ಕೆಲಸ. ಸುಮಾರು 287 ನಗರಗಳಲ್ಲಿ ಕಾರ್ಯ ನಡೆಯಲಿದ್ದು, 927 ಕೋಟಿ ರು. ಮೀಸಲಿಡಲು ಒಪ್ಪಿಗೆ
* ಹೊಸಪೇಟೆಯಲ್ಲಿನ ಹಳೆ ಮಾರುಕಟ್ಟೆಸ್ಥಳದಲ್ಲಿ ಹೊಸದಾಗಿ ನಿರ್ಮಿಸಲು ಒಪ್ಪಿಗೆ
* ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿಯ ಲೋಕೋಪಯೋಗಿ ಜಾಗದಲ್ಲಿ ಪಿಪಿಎ ಮಾದರಿಯಲ್ಲಿ ಅವಳಿ ಗೋಪುರ ನಿರ್ಮಾಣಕ್ಕೆ ಅನುಮತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ