ಕಲ್ಯಾಣ ಕರ್ನಾಟಕದಲ್ಲಿ ಜ್ಯುವೆಲ್ಲರಿ ಪಾಕ್೯ ಪ್ರಾರಂಭ. ಇದು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮತ್ತೊಂದು ದಿಟ್ಟ ನಿರ್ಧಾರ
ಬೆಂಗಳೂರು, (ಮಾ.20): ಹಿಂದುಳಿದ ಕಲ್ಯಾಣ ಕರ್ನಾಟಕವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಆಭರಣ ತಯಾರಿಕೆಯ ಘಟಕ ( ಜ್ಯುವೆಲರಿ ಪಾರ್ಕ್)ವನ್ನು ಪ್ರಾರಂಭಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ವಿಶೇಷವೆಂದರೆ ಎರಡು ದಿನಗಳ ಹಿಂದೆಯಷ್ಟೇ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರಕಾರಿ ಒಡೆತನದ ಆಭರಣ ಮಳಿಗೆಗಳನ್ನು (ಜ್ಯುವೆಲ್ಲರಿ ಶಾಪ್) ತೆರೆಯಲು ತೀರ್ಮಾನಿಸಿದ ಬೆನ್ನಲ್ಲೇ ,ಇಲಾಖೆ ಈ ದಿಟ್ಟ ಹೆಜ್ಜೆಯನ್ನು ಇಟ್ಟಿರುವುದು ಮಹತ್ವಪಡೆದುಕೊಂಡಿದೆ.
ಶನಿವಾರ ವಿಕಾಸಸೌಧದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು, ವಿವಿಧ ಚಿನ್ನಾಭರಣ ತಯಾರಿಕೆಯ ಸಂಘಟನೆಗಳ ಮುಖ್ಯಸ್ಥರ ಜೊತೆ ನಡೆಸಿದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.
ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಲಬುರಗಿ ಇಲ್ಲವೇ ಬೀದರ್ ಜಿಲ್ಲೆಯಲ್ಲಿ ಸುಮಾರು 50 ರಿಂದ 75 ಎಕರೆ ಜಮೀನಿನಲ್ಲಿ ಜ್ಯುವೆಲರಿ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಯಿತು.
ಬೆಂಗಳೂರಿನಲ್ಲಿ ಪಾರ್ಕ್ ನಿರ್ಮಾಣ ಮಾಡಬೇಕೆಂಬ ಆಭರಣ ತಯಾರಿಕಾ ಸಂಘಟನೆಗಳ ಮುಖಂಡರ ಬೇಡಿಕೆಯನ್ನು ಒಪ್ಪದ ಸಚಿವರು, ಕಲ್ಯಾಣ ಕರ್ನಾಟಕಕ್ಕೆ ಮೊದಲ ಆದ್ಯತೆ ಎಂಬ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಜ್ಯುವೆಲರಿ ಪಾರ್ಕ್ ಪ್ರಾರಂಭಿಸಲಿದ್ದು, ಗ್ರಾಹಕರು ಒಂದೇ ಸೂರಿನಡಿ ಆಭರಣಗಳನ್ನು ಖರೀದಿಸಲು ಇದರಿಂದ ಅನುಕೂಲವಾಗಲಿದೆ.
ಬೀದರ್ ಹಾಗೂ ಕಲಬುರಗಿಯಲ್ಲಿ
ವಿಮಾನ ನಿಲ್ದಾಣ ಹಾಗೂ ರೈಲ್ವೆ ಸಂಪರ್ಕ ಸಾಕಷ್ಟು ಉತ್ತಮವಾಗಿದೆ. ದೇಶ- ವಿದೇಶಗಳಿಂದ ಬಂದು ಹೋಗುವವರಿಗೆ ಎಲ್ಲಾ ಸೌಲಭ್ಯಗಳಿವೆ. ಜೊತೆಗೆ ರಾಜ್ಯ ಸರಕಾರ ಇನ್ನಷ್ಟು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಿದೆ ಎಂದು ಆಶ್ವಾಸನೆ ನೀಡಿದರು.
ತೆರಿಗೆ ವಿನಾಯ್ತಿ
ಬೆಂಗಳೂರಿನ ಹೊರ ಭಾಗದಲ್ಲಿ ಜ್ಯುವೆಲರಿ ಪಾರ್ಕ್ ಪ್ರಾರಂಭಿಸುವುದಾದರೆ ತಮಗೆ ತೆರಿಗೆ ವಿನಾಯ್ತಿ ನೀಡಬೇಕೆಂಬ ಸಂಘಟನೆಗಳ ಮನವಿಯನ್ನು ಪುರಸ್ಕರಿಸಿದ ಸಚಿವ ನಿರಾಣಿ ಅವರು, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಭರವಸೆ ನೀಡಿದರು.
ಶೀಘ್ರದಲ್ಲೇ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾಸೀತಾರಾಮನ್, ಕಾನೂನು ಮತ್ತು ಸಂಸದೀಯ ಹಾಗೂ ಗಣಿ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ತೆರಿಗೆ ವಿನಾಯ್ತಿ ನೀಡಬೇಕೆಂದು ಮನವರಿಕೆ ಮಾಡಲಾಗುವುದು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ನೆರವು ಒದಗಿಸುವುದಾಗಿ ಹೇಳಿದರು.
ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಹೆಸರು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ವಿಶ್ವದರ್ಜೆಯ ಆಭರಣ ತಯಾರಿಸಬೇಕು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನಾಭರಣಗಳನ್ನು ತಯಾರಿಸುವಂತೆ ಸಲಹೆ ಮಾಡಿದರು.
ಈಗಾಗಲೇ ತೀರ್ಮಾನಿಸಿರುವಂತೆ ರಾಜ್ಯದ ಐದು ಕಡೆ ಸರ್ಕಾರಿ ಒಡೆತನದ ಜ್ಯುವೆಲರಿ ಮಳಿಗೆಗಳನ್ನು ತೆರೆಯಬೇಕೆಂಬ ಚಿಂತನೆ ಇದೆ. ಆದಷ್ಟು ಶೀಘ್ರ ಇದು ಕಾರ್ಯಾರಂಭಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮದುವೆ, ಸಮಾರಂಭ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ನೀಡುವ ಚಿನ್ನದ ನಾಣ್ಯಗಳನ್ನು ಹೊರ ತರಲು ತೀರ್ಮಾನಿಸಿದ್ದೇವೆ. ಇದರ ಒಂದು ಭಾಗದಲ್ಲಿ ಗಂಡುಬೇರುಂಡ, ಮತ್ತೊಂದು ಭಾಗದಲ್ಲಿ ಕರ್ನಾಟಕದ ಸುಪ್ರಸಿದ್ದ ಐತಿಹಾಸಿಕ ಸ್ಥಳಗಳಾದ ಹಂಪಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಬೇಲೂರು, ಹಳೆಬೀಡು, ಮೈಸೂರು, ಜತೆಗೆ ಇತಿಹಾಸ ಪ್ರಸಿದ್ದ ಪುರುಷರ ಚಿತ್ರ ಒಳಗೊಂಡ ನಾಣ್ಯಗಳನ್ನು ಹೊರತರುವಂತೆ ಸೂಚಿಸಿದರು.
ಅದಿರು ತೆಗೆಯಲು ಖಾಸಗಿಯವರಿಗೆ ಚಿಂತನೆ
ದೇಶದಲ್ಲೇ ಚಿನ್ನ ಉತ್ಪಾದನೆ ಮಾಡುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದ ಹಟ್ಟಿ ಚಿನ್ನದ ಗಣಿಗಾರಿಕೆಯಲ್ಲಿ ಅದಿರು ತೆಗೆಯುವುದನ್ನು ಖಾಸಗಿಯವರಿಗೆ ನೀಡಲು ಚಿಂತನೆ ನಡೆದಿದೆ. ಪ್ರಸ್ತುತ ಸರ್ಕಾರವೇ ಇದನ್ನು ನಿರ್ವಹಿಸಲಿದ್ದು. ಜಮೀನು, ಆಡಳಿತ ಮಂಡಳಿಯನ್ನು ಸರ್ಕಾರವೇ ನೋಡಿಕೊಳ್ಳಲಿದೆ.ಈ ವರ್ಷಾಂತ್ಯಕ್ಕೆ 5 ಸಾವಿರ ಕೆಜಿ ಚಿನ್ನ ಉತ್ಪಾದನೆ ಮಾಡಬೇಕೆಂಬ ಗುರಿಯನ್ನು ಹಾಕಿಕೊಳ್ಳಲಾಗಿದೆ. ಭೂಮಿಯ ಆಳದಲ್ಲಿ ಅದಿರನ್ನು ತೆಗೆಯಲು ಖಾಸಗಿಯವರಿಗೆ ನೀಡಿದರೆ ಇದರ ನಿರ್ವಹಣೆ ಇನ್ನಷ್ಟು ಉತ್ತಮವಾಗಲಿದೆ. ಜೊತೆಗೆ ಉತ್ಪಾದನಾ ಸಾಮಥ್ಯ ೯ ವೂ ಹೆಚ್ಚಾಗಲಿದ್ದು, ಈಗಿರುವ ಕಾರ್ಮಿಕರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಬಹುದು. ಸರ್ಕಾರ ಹಾಗೂ ಖಾಸಗಿಯವರಿಗೂ ಇದರಿಂದ ಲಾಭ ಬರಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ನಮ್ಮ ನಿರೀಕ್ಷೆಗೆ ತಕ್ಕಂತೆ ಚಿನ್ನದ ಉತ್ಪಾದನಾ ಪ್ರಮಾಣ ಹೆಚ್ಚಳವಾಗಬೇಕಾದರೆ ಅದಿರು ತೆಗೆಯುವುದನ್ನು ಮಾತ್ರ ಖಾಸಗಿಯವರಿಗೆ ನೀಡುವ ಚಿಂತನೆ ಇದೆ ಎಂದರು.
ಸಭೆಯಲ್ಲಿ ಬೆಂಗಳೂರು ಜ್ಯುವೆಲರಿ ಅಸೋಸಿಯೇಷನ್, ಕರ್ನಾಟಕ ಜ್ಯುವೆಲರಿ ಫೆಡರೇಷನ್, ಜ್ಯುವೆಲರಿ ಅಸೋಸಿಯೇಷನ್‍ನ ಮುಖಂಡರು ಭಾಗವಹಿಸಿದ್ದರು.