
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ಜಾರಿಗೆ ಮುಂದಾಗಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ 2025’ಕ್ಕೆ ಒಪ್ಪಿಗೆ ನೀಡದಂತೆ ಹಾಗೂ ರಾಜ್ಯದ ನೆರೆಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ನಾಯಕರ ನಿಯೋಗವು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಬುಧವಾರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ನೇತೃತ್ವದಲ್ಲಿ ಜೆಡಿಎಸ್ ನಾಯಕರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರೇಶ್ ಬಾಬು, ರಾಜ್ಯದಲ್ಲಿ ಪ್ರವಾಹವಾಗಿ ಸುಮಾರು 10 ಸಾವಿರ ಮನೆಗಳು, ಜಾನುವಾರುಗಳು, ಬೆಳೆಗಳು ನಾಶವಾಗಿವೆ. ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಆದರೆ, ಈವರೆಗೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಬಗ್ಗೆ ಸುದೀರ್ಘ ಚರ್ಚೆ ಮಾಡಲಾಯಿತು. ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸಲಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಈ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡಿದೆ. ಈ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಮಾಡದೇ ತರಾರುರಿಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಪಾಸ್ ಮಾಡಿದ್ದಾರೆ. ವಿರೋಧ ಪಕ್ಷಗಳು, ಮಾಧ್ಯಮಗಳು ಹಾಗೂ ಸೋಶಿಯಲ್ ಮಿಡಿಯಾಗಳಿಗೆ ಕಡಿವಾಣ ಹಾಕಲು ಈ ಮಸೂದೆ ತರಲು ಮುಂದಾಗಿದ್ದಾರೆ. ಇನ್ನು ರಾಜ್ಯದಲ್ಲಿ ಸುಮಾರು 40 ಸಾವಿರ ಜನರಿಗೆ ಮನೆ ಕೊಡಲು ಈ ಸರ್ಕಾರಕ್ಕೆ ಆಗುತ್ತಿಲ್ಲ. ಕೋಗಿಲು ಬಳಿ ಅಕ್ರಮ ಮನೆ ತೆರವುಗೊಳಿಸಿ ಈಗ ಮನೆ ಕೊಡಲು ಮುಂದಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ಈ ಸರ್ಕಾರ ರಾಜ್ಯದ ಜನರ ಹಿತಾಸಕ್ತಿ ಕಾಯುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೆ ಎಂಬುದು ಆತಂಕ ಶುರುವಾಗಿದೆ. ಕೋಗಿಲು ಅಕ್ರಮ ಮನೆಗಳ ತೆರವು ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸವಾಗುತ್ತಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ನಿಯೋಗ ಕಳುಹಿಸಿದ ಬಳಿಕ ಡಿಸಿಎಂ ಆಕ್ರೋಶದ ಮಾತುಗಳನ್ನಾಡಿದ್ದಾರೆ. ಈ ಸರ್ಕಾರ ಕುರ್ಚಿ ಕಾಳಗದಲ್ಲಿ ಮೈಮರೆತು ಮಲಗಿದೆ. ದೆಹಲಿಯಿಂದ ಸೂಪರ್ ಸಿಎಂ ನಿರ್ದೇಶನ ನೀಡಿದ ಬಳಿಕ ಕೋಗಿಲು ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಮನೆ ಕಳೆದುಕೊಂಡವರಿಗೆ ಮನೆ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಇದ್ದವರು ಕೇರಳ ಮುಸ್ಲಿಮರೋ ಅಥವಾ ಬಾಂಗ್ಲಾ ಅಥವಾ ಪಾಕಿಸ್ತಾನದ ಮುಸ್ಲಿಮರೋ ಗೊತ್ತಿಲ್ಲ, ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾಸನ, ಚಿಕ್ಕಮಗಳೂರು, ಬೆಳಗಾವಿ, ಕೊಡಗು, ರಾಯಚೂರು, ಕೊಪ್ಪಳ ಸೇರಿ ಮೊದಲಾದ ಜಿಲ್ಲೆಗಳಲ್ಲಿ ಮನೆ-ಮಠ ಕಳೆದುಕೊಂಡಿದ್ದಾರೆ. ಬೆಳೆಗಳು ನಾಶವಾಗಿವೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಈವರೆಗೂ ಹಾನಿ ಪ್ರದೇಶಕ್ಕೆ ತಿರುಗಿಯೂ ನೋಡಿಲ್ಲ. ಸೂಪರ್ ಸಿಎಂ ಸೂಚನೆ ಬೆನ್ನಲ್ಲೇ ಅಕ್ರಮ ವಲಸಿಗರಿಗೆ ಮನೆ ನೀಡಲು ಮುಂದಾಗಿರುವುದು ಎಷ್ಟು ಸರಿ? ಇದನ್ನು ಜೆಡಿಎಸ್ ಖಂಡಿಸಲಿದೆ ಎಂದು ಹೇಳಿದರು.
ಕೋಗಿಲು ಮನೆ ತೆರವು ವಿಚಾರದಲ್ಲಿ ಓಲೈಕೆ ರಾಜಕಾರಣ ಮಾಡಲಾಗುತ್ತಿದೆ. ಕಾಂಗ್ರೆಸ್ ಮುಖಂಡರೇ ಮನೆ ಕಟ್ಟಿಸುವುದು ಬಳಿಕ ತೆರವುಗೊಳಿಸಿ ಪರಿಹಾರ ಕೊಡಿಸುವ ದಂಧೆ ಮಾಡುತ್ತಿದ್ದಾರೆ. ಇವರಿಗೆ ಮನೆ ಕೊಡುವುದಾದರೆ, ಈ ಹಿಂದೆ ಬೆಂಗಳೂಉರ ನಗರ ಹಾಗೂ ರಾಜ್ಯದಲ್ಲಿ ಎಲ್ಲೆಲ್ಲಿ ಮನೆ ತೆರವುಗೊಳಿಸಲಾಗಿದೆಯೇ ಅಲ್ಲೆಲ್ಲಾ ಸಂತ್ರಸ್ತರಿಗೆ ಮನೆ ಕೊಡಬೇಕು. ಇಲ್ಲವಾದರೆ, ಜೆಡಿಎಸ್ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ