ದೋಸ್ತಿಗಳು - ಬಿಜೆಪಿ ನಡುವೆ ಡೆಡ್ ಲೈನ್ ಜಟಾಪಟಿ : ಯಾರಿಗೆ ಶಾಕ್..?

By Web DeskFirst Published Oct 17, 2018, 7:35 AM IST
Highlights

ಮೂರು ಗಂಟೆ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಕಿತ್ತಾಟ ಶುರುವಾಗಲಿದೆ, ರಾಜ್ಯ ರಾಜಕೀಯದಲ್ಲಿ ಏರುಪೇರು ಆಗಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು :  ರಾಜ್ಯ ಲೋಕಸಭೆ, ವಿಧಾನಸಭೆ ಉಪ ಚುನಾವಣೆಗಳಿಗೆ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ನಡುವಿನ ವಾಕ್ಸಮರ ತೀವ್ರಗೊಂಡಿದೆ. ಮಂಗಳವಾರ ಮೂರು ಗಂಟೆ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಕಿತ್ತಾಟ ಶುರುವಾಗಲಿದೆ, ರಾಜ್ಯ ರಾಜಕೀಯದಲ್ಲಿ ಏರುಪೇರು ಆಗಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಬಹುಶಃ ಭವಿಷ್ಯ ನುಡಿಯುತ್ತಾರೆ, ಸರ್ಕಾರ ಪತನವಾಗುತ್ತೆ ಎಂದು ಅವರು ಹೇಳಿಕೆ ನೀಡುತ್ತಲೇ ಇದ್ದಾರೆ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಅವರ ಮಾತಿಗೆ ಕಿಮ್ಮತ್ತು ನೀಡಬೇಡಿ ಎಂದು ವ್ಯಂಗ್ಯವಾಡಿದ್ದಾರೆ. ಏತನ್ಮಧ್ಯೆ, ಯಡಿಯೂರಪ್ಪ ಮಾತ್ರ ತಾವು ಆ ರೀತಿ ಹೇಳಿಕೆ ನೀಡೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಭವಿಷ್ಯ ನುಡಿಯುತ್ತಾರೆ ಬಿಎಸ್‌ವೈ: ನಾಮಪತ್ರ ಸಲ್ಲಿಕೆ ಬಳಿಕ ರಾಜ್ಯದಲ್ಲಿ ಏನೇನೋ ಆಗುತ್ತದೆ, ಫಲಿತಾಂಶದ ಬಳಿಕ ಇನ್ನೇನೋ ಆಗುತ್ತದೆ ಎಂದು ಬಿಜೆಪಿ ರಾಜ್ಯ ನಾಯಕರು ಹೇಳುತ್ತಿದ್ದಾರೆ. ಪದೇ ಪದೇ ಡೆಡ್‌ಲೈನ್‌ ನೀಡುತ್ತಾರೆ. ಯಡಿಯೂರಪ್ಪ ಬಹುಶಃ ಭವಿಷ್ಯ ನುಡಿಯುವಂತೆ ಕಾಣುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬಿಜೆಪಿಯವರ ಕೀಳು ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಯಾವ ಸಮಸ್ಯೆಯೂ ಇಲ್ಲ. ಅದು ಇನ್ನಷ್ಟುಗಟ್ಟಿಯಾಗುತ್ತಲೇ ಇದೆ. ಸಮ್ಮಿಶ್ರ ಸರ್ಕಾರಕ್ಕೆ ಶಾಕ್‌ ಕೊಡುವ ಯಾವ ಸುದ್ದಿಯೂ ಇಲ್ಲ, ಎಲ್ಲವೂ ಯಡಿಯೂರಪ್ಪನವರ ಕಲ್ಪನೆಯಲ್ಲಿ ಇರಬಹುದು. ಎಲ್ಲಾ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಪಕ್ಷಗಳ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಳ್ಳುಗಾರ ಬಿಎಸ್‌ವೈ: ನಾಮಪತ್ರ ಸಲ್ಲಿಕೆ ಪೂರ್ಣಗೊಂಡ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಕಚ್ಚಾಟ ಶುರುವಾಗಲಿದೆ ಎನ್ನುವ ಯಡಿಯೂರಪ್ಪ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಯಡಿಯೂಪ್ಪ ಒಬ್ಬ ಸುಳ್ಳುಗಾರ. ಅವರ ಮಾತಿಗೆ ಕಿಮ್ಮತ್ತು ನೀಡುವ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಸ್‌ವೈ ಅವರಿಂದ ಏನೂ ಆಗಲ್ಲ. ಈಗಾಗಲೇ ಅನೇಕ ಬಾರಿ ಶಾಕ್‌ ನೀಡುವ ಮಾತನ್ನು ಅವರು ಆಡಿದ್ದಾರೆ. ಇಷ್ಟುದಿನ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಲೇ ಇದ್ದರೂ, ಸರ್ಕಾರ ಬಿತ್ತಾ ಎಂದು ಸಿದ್ದು ಪ್ರಶ್ನಿಸಿದರು.

ಮತ್ತೆ ಸಿಎಂ ಆಗುವ ಕನಸು: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕೂಡ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಶಾಕ್‌ ಅವರಿಗಾಗುತ್ತೋ, ನಮಗಾಗುತ್ತೋ ಎನ್ನುವುದನ್ನು ಕಾದು ನೋಡೋಣ. ಹಿರಿಯ ರಾಜಕಾರಣಿ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಅವರು ಎಷ್ಟೇ ಪ್ರಯತ್ನಿಸಿದರೂ ಮತ್ತೆ ಸಿಎಂ ಆಗಲ್ಲ ಎಂದು ಪರಮೇಶ್ವರ್‌ ಹೇಳಿದರು. ಜತೆಗೆ, ರಾಜ್ಯದಲ್ಲಿ ಅಸ್ವಿತ್ವಕ್ಕೆ ಬಂದಿರುವ ದೋಸ್ತಿ ಸರ್ಕಾರ ಐದು ವರ್ಷ ಪೂರೈಸಲಿದೆ. ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಹಂಬಲದಿಂದ ಅವರು ಈ ರೀತಿಯ ಹೇಳಿಕೆ ನೀಡುತ್ತಿರುತ್ತಾರೆ ಎಂದರು.

ನಾನೇನೂ ಹೇಳಿಲ್ಲ-ಬಿಎಸ್‌ವೈ: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ತಮ್ಮ ಹೇಳಿಕೆ ಆಡಳಿತಾರೂಢ ಪಕ್ಷಗಳ ಮುಖಂಡರ ತೀವ್ರ ಟೀಕೆಗೆ ಗುರಿಯಾಗುತ್ತಿದ್ದರೆ ಯಡಿಯೂರಪ್ಪ ಮಾತ್ರ ಆ ರೀತಿಯ ಹೇಳಿಕೆಯನ್ನು ತಾವು ನೀಡೇ ಇಲ್ಲ ಎಂದು ಹೇಳಿದ್ದಾರೆ.

ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಆ ರೀತಿ ಹೇಳಿಕೆ ನೀಡಿಲ್ಲ, ಯಾರು ಆ ರೀತಿ ಹೇಳಿದ್ದಾರೆಂಬುದು ನನಗೆ ಗೊತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಸೋಮವಾರ ಶಿವಮೊಗ್ಗದಲ್ಲಿ ಮಾತನಾಡಿದ್ದ ಯಡಿಯೂರಪ್ಪ ಅವರು, ಮಂಗಳವಾರ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಸಮ್ಮಿಶ್ರ ಸರ್ಕಾರದಲ್ಲಿ ಕಚ್ಚಾಟ ಶುರುವಾಗಲಿದೆ. ರಾಜಕಾರಣದಲ್ಲಿ ಏರುಪೇರಾಗಲಿದೆ ಎಂದು ಹೇಳಿದ್ದರು.

click me!