ಡಿ.28, 29ಕ್ಕೆ ಬೆಂಗ​ಳೂ​ರಿ​ನಲ್ಲಿ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ

By Web DeskFirst Published Oct 16, 2018, 11:06 AM IST
Highlights

1996ರಲ್ಲಿ ಮೊದಲ ವಿಶ್ವ ಹವ್ಯಕ ಸಮ್ಮೇಳನ ಪುತ್ತೂರಿನಲ್ಲಿ ನಡೆದಿತ್ತು. 2ನೇ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಮಹಾಸಭಾಕ್ಕೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ, ವಿಭಿನ್ನವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಚರಿಸಲಾಗುತ್ತಿದೆ.

ಸಾಗರ: ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತ ಮಹೋತ್ಸವ ಕಾರ್ಯಕ್ರಮ ಡಿಸೆಂಬರ್‌ 28, 29 ಮತ್ತು 30ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಬೆಂಗಳೂರಿನ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ತಿಳಿಸಿದರು.

ಪಟ್ಟ​ಣ​ದಲ್ಲಿ ಸುದ್ದಿ​ಗೋ​ಷ್ಠಿ​ಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವ​ರು, 1996ರಲ್ಲಿ ಮೊದಲ ವಿಶ್ವ ಹವ್ಯಕ ಸಮ್ಮೇಳನ ಪುತ್ತೂರಿನಲ್ಲಿ ನಡೆದಿತ್ತು. 2ನೇ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಮಹಾಸಭಾಕ್ಕೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಅಂಗವಾಗಿ ವಿಶೇಷವಾದ 12 ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಪ್ರಮುಖವಾಗಿ ಹವ್ಯಕ ಸಮಾಜ ಎದುರಿಸುತ್ತಿರುವ ಸವಾಲುಗಳು, ಸಮಾಜ ನಡೆದು ಬಂದ ದಾರಿ, ಹವ್ಯಕರು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಕುರಿತು ಗೋಷ್ಠಿಗಳನ್ನು ಏರ್ಪಡಿಸಲಾಗಿದ್ದು, ತಜ್ಞರಿಂದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹವ್ಯಕ ಸಮುದಾಯದ ಲೇಖಕರು ಬರೆದ 75 ಕೃತಿಗಳ ಲೋಕಾರ್ಪಣೆ, 150 ಸಾಧಕರು, ವೈದಿಕರಿಗೆ ಸನ್ಮಾನ, ಅಡಕೆ ಕೃಷಿಯಲ್ಲಿ ಸಾಧನೆ ಮಾಡಿದ 75 ಬೆಳೆಗಾರರಿಗೆ ಸನ್ಮಾನ, ಆರ್ಥಿಕವಾಗಿ ಹಿಂದುಳಿದ ಹವ್ಯಕ ಜನಾಂಗದ 75 ಕುಟುಂಬಗಳಿಗೆ ದೇಶಿ ಗೋತಳಿ ದಾನ, ಕಳೆದ ಹತ್ತು ವರ್ಷಗಳಿಂದೀ​ಚೆ​ಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ವಿವಿಧ ಪರೀಕ್ಷೆಗಳಲ್ಲಿ ರ‍್ಯಾಂಕ್‌ ಪಡೆದ 75 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 75 ಮಾದರಿ ಯಜ್ಞಕುಂಡಗಳನ್ನು ತಯಾರಿಸಿ ಯಜ್ಞದ ಮಹತ್ವ ಸಾರುವ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಮ್ಮೇಳನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸುವ ನಿಟ್ಟಿನಲ್ಲಿ ವಿವಿಧ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹವ್ಯಕ ಲೇಖಕರು ಬರೆದ 5 ಸಾವಿರಕ್ಕೂ ಹೆಚ್ಚು ಕೃತಿಗಳ ಪ್ರದರ್ಶನ ಮತ್ತು ಮಾರಾಟ, ಹವ್ಯಕ ಖಾದ್ಯಗಳ ಪಾಕೋತ್ಸವ, 30 ದೇಶಿಯ ಗೋತಳಿಗಳ ನಿಜರೂಪ ದರ್ಶನ, ಅಡಕೆ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ, ಹವ್ಯಕ ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ರಂಗೋಲಿ ಸ್ಪರ್ಧೆ, ಪಾರಂಪರಿಕವಾಗಿ ಹವ್ಯಕರು ಬಳಸುವ ವಸ್ತುಗಳ ಪ್ರದರ್ಶನ ಮತ್ತು ಸ್ಪರ್ಧೆ, ಹವ್ಯಕ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿತ್ತರಿಸುವ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆ ಜೊತೆಗೆ ‘ಅಮೃತ ವರ್ಷಿಣಿ’ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆ​ಯ​ಲಿದೆ ಎಂದ​ರು.

ಹವ್ಯಕ ಮಹಾಸಭಾದಿಂದ ಜನಾಂಗದ ಅಭಿವೃದ್ಧಿ​ಗೆ ಬೇಕಾದ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ, ಬಹುತೇಕ ಅನುಷ್ಠಾನಕ್ಕೆ ತರಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ದೇಶ-ವಿದೇಶಗಳ ಗಣ್ಯರು ಪಾಲ್ಗೊಳ್ಳಲಿದ್ದು, ಜಿಲ್ಲೆಯ ಹವ್ಯಕ ಬಂಧುಗಳು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

click me!