ಸಿದ್ದರಾಮಯ್ಯ ಕಾಂಗ್ರೆಸ್ಸಿನ ಕೊನೆಯ ಮುಖ್ಯಮಂತ್ರಿ. ಇದೇ ಕಾಂಗ್ರೆಸ್ಸಿನ ಕೊನೆಯ ಸರ್ಕಾರವಾಗಲಿದೆ. ಮುಂದೆ ಕಾಂಗ್ರೆಸ್ ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಟೀಕಿಸಿದ್ದಾರೆ.
ಹುಬ್ಬಳ್ಳಿ (ಫೆ.26): ಸಿದ್ದರಾಮಯ್ಯ ಕಾಂಗ್ರೆಸ್ಸಿನ ಕೊನೆಯ ಮುಖ್ಯಮಂತ್ರಿ. ಇದೇ ಕಾಂಗ್ರೆಸ್ಸಿನ ಕೊನೆಯ ಸರ್ಕಾರವಾಗಲಿದೆ. ಮುಂದೆ ಕಾಂಗ್ರೆಸ್ ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಟೀಕಿಸಿದ್ದಾರೆ.
ಬಿಜೆಪಿ ಸೇರ್ಪಡೆ ಬಳಿಕ ಇದೇ ಮೊದಲ ಬಾರಿಗೆ ಸಿದ್ದು, ಡಿಕೆಶಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶೆಟ್ಟರ, ಮುಂದಿನ 9 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇರುತ್ತದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆಗೆ ತಿರುಗೇಟು ನೀಡಿದರು. ಡಿಕೆಶಿಯವರು ಭ್ರಮೆಯಲ್ಲಿದ್ದಾರೆ. ಯಾರು ಬೇಕಾದರೂ ಬಂದು ಕಾಂಗ್ರೆಸ್ ಸೇರಿ ಅಂತ ಡಿಕೆಶಿ ಹೇಳುತ್ತಾರೆ. ಆದರೆ, ಆ ಪಕ್ಷಕ್ಕೆ ಹೋಗುವವರು ಯಾರಿದ್ದಾರೆ?. ಅನೇಕ ಮೂಲ ಕಾಂಗ್ರೆಸ್ಸಿಗರೇ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬೇರೆ, ಬೇರೆ ರಾಜ್ಯಗಳಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ಸಿಗೆ ಹೋಗುವವರು ಯಾರು ಇಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 27 ಸ್ಥಾನಗಳಲ್ಲಿ ಬಿಜೆಪಿ ಗೆಲುವು: ಜಗದೀಶ್ ಶೆಟ್ಟರ್
ರಾಜ್ಯದ ಬಿಜೆಪಿ ನಾಯಕರು ಮೋದಿ ಮುಂದೆ ಕೊಲೇ ಬಸವನ ತರಹ ತಲೆ ಅಲ್ಲಾಡಿಸುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿ, ಒಂದು ಕಾಲದಲ್ಲಿ ಕಾಂಗ್ರೆಸ್ಸಿನಲ್ಲಿ ಇಂದಿರಾಗಾಂಧಿ ಒಬ್ಬರೇ ಗಂಡಸರಿದ್ದರು ಎಂಬ ಮಾತಿತ್ತು. ಸಿದ್ದರಾಮಯ್ಯ ಕೆಲವು ವರ್ಷಗಳ ಹಿಂದೆಯಷ್ಟೇ ಕಾಂಗ್ರೆಸ್ಸಿಗೆ ಹೋಗಿದ್ದಾರೆ. ಅವರು ಮೊದಲು ಕಾಂಗ್ರೆಸ್ಸಿನ ಇತಿಹಾಸ ತೆಗೆದು ನೋಡಲಿ ಎಂದರು.
ಕೆಟ್ಟ ಹೆಸರು ತರಲು ಯತ್ನ:
ಲೋಕಸಭಾ ಚುನಾವಣೆ(Loksabha election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್ ಅನುದಾನ ರಾಜಕಾರಣ ಮಾಡುತ್ತಿದೆ. ಪ್ರಧಾನಿ ಮೋದಿ(PM Narendra Modi) ಅವರ ನಾಯಕತ್ವ, ಜನಪ್ರಿಯತೆಯನ್ನು ಸಹಿಸಲು ಕಾಂಗ್ರೆಸ್‌ನವರಿಗೆ ಆಗುತ್ತಿಲ್ಲ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ 2 ತಿಂಗಳಿಂದಲೂ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಧರಣಿ ಮಾಡಿ ಕೇಂದ್ರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ. ಇದನ್ನು ಜನತೆ ನಂಬುವುದಿಲ್ಲ. ಕಾಂಗ್ರೆಸ್ ದಿನದಿಂದ ದಿನಕ್ಕೆ ಇಬ್ಭಾಗವಾಗುತ್ತಿದೆ. ಎಷ್ಟೋ ಜನ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.
ಬಿಜೆಪಿ ಪಕ್ಷ ನನ್ನ ಮನೆ ಇದ್ದಂತೆ, ಹಾಗಾಗಿ ಕಾಂಗ್ರೆಸ್‌ನಿಂದ ವಾಪಸ್ಸು ಬಂದೆ: ಜಗದೀಶ್ ಶೆಟ್ಟರ್
ಮೋದಿಗೆ ಎರಡು ನಾಲಿಗೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ, ಅಂದು ಗುಜರಾತಿಗೆ ಏನು ಅನ್ಯಾಯ ಆಗಿತ್ತು. ಅದನ್ನು ಹೇಳುವ ಪ್ರಯತ್ನವನ್ನು ಅವರು ಮಾಡಿದ್ದರು. ಎಲ್ಲ ಸಂದರ್ಭದಲ್ಲೂ ಅದು ಅನ್ವಯಿಸುವುದಿಲ್ಲ. ಯುಪಿಎ ಸರ್ಕಾರ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಿದ್ದರೆ?. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.