ಪಿರಿಯಾಪಟ್ಟಣ ಕಾಂಗ್ರೆಸ್ ಮಾಜಿ ಶಾಸಕಗೆ ಐಟಿ ದಾಳಿ, ವೆಂಕಟೇಶ್, ಆಪ್ತನ ಮನೆ ಜಾಲಾಡಿದ ಅಧಿಕಾರಿಗಳು, ಮಂಗಳೂರು ಕಾಂಗ್ರೆಸ್ ಮುಖಂಡನ ಮನೆಗೂ ರೇಡ್.
ಪಿರಿಯಾಪಟ್ಟಣ/ಮಂಗಳೂರು(ಏ.16): ಕಾಂಗ್ರೆಸ್ಸಿನ ಮಾಜಿ ಶಾಸಕ ಹಾಗೂ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಕ್ಷೇತ್ರದ ಅಭ್ಯರ್ಥಿ ಕೆ.ವೆಂಕಟೇಶ್ ಮನೆ ಮೇಲೆ ಆದಾಯ ತೆರಿಗೆ (ಐ.ಟಿ.) ಇಲಾಖೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ. ಮತ್ತೊಂದೆಡೆ, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಸಂಯೋಜಕರಾಗಿರುವ ವಿವೇಕ್ ಪೂಜಾರಿ ಅವರ ಮಂಗಳೂರಿನ ನಿವಾಸದಲ್ಲೂ ತೆರಿಗೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ತನ್ಮೂಲಕ ವಿಧಾನಸಭೆ ಚುನಾವಣೆ ಪ್ರಚಾರ ತಾರಕಕ್ಕೇರುತ್ತಿರುವ ಸಂದರ್ಭದಲ್ಲಿ ತೆರಿಗೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆಗೆ ಇಳಿದಿರುವಂತಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮರದೂರಿನಲ್ಲಿ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಅವರ ಆಪ್ತ ಕೆ.ಹೊಲದಪ್ಪನವರ ಮನೆಯ ಮೇಲೆ ಶನಿವಾರ ಮಧ್ಯಾಹ್ನ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು. ಬೆಂಗಳೂರಿನಿಂದ ಖಾಸಗಿ ವಾಹನದಲ್ಲಿ ಆಗಮಿಸಿದ ಅಧಿಕಾರಿಗಳು, ವೆಂಕಟೇಶ್ ಅವರ ಮರದೂರು ತೋಟದ ಮನೆ ಹಾಗೂ ಅವರ ಆಪ್ತ ಕೆ.ಹೊಲದಪ್ಪನವರ ಮನೆ ಮೇಲೆ ದಾಳಿ ನಡೆಸಿದರು. ದಾಳಿ ನಡೆದಾಗ ಶಾಸಕ ಕೆ.ವೆಂಕಟೇಶ್ ಅವರ ಧರ್ಮಪತ್ನಿ ಭಾರತಿ ವೆಂಕಟೇಶ್ ಮನೆಯಲ್ಲಿದ್ದರು. ಮನೆಯಲ್ಲಿ 2.5 ಲಕ್ಷ ಹಣ ಸಿಕ್ಕಿದ್ದು, ಇದಕ್ಕೆ ಸೂಕ್ತ ದಾಖಲೆ ತೋರಿಸಿದ್ದರಿಂದ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.
undefined
Belagavi:ಕಾಂಗ್ರೆಸ್ ಮುಖಂಡನ ಒಡೆತನದ ಬ್ಯಾಂಕ್‌ಗೆ ಐಟಿ ದಾಳಿ, 262 ಲಾಕರ್ ಮಾಹಿತಿಗೆ ಅಪ್ಪ-ಮಗನ ತೀವ್ರ ವಿಚಾರಣೆ
ಮಂಗಳೂರಲ್ಲಿ ದಾಳಿ:
ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ವಿವೇಕ್ ಪೂಜಾರಿ ಮನೆಗೆ ಬೆಳ್ಳಂಬೆಳಗ್ಗೆ 2 ಕಾರುಗಳಲ್ಲಿ ಆಗಮಿಸಿದ 8 ಮಂದಿ ತೆರಿಗೆ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿದೆ. ಪನಾಮಾ ಸಂಸ್ಥೆಯ ಮಾಲೀಕರಾಗಿರುವ ವಿವೇಕ್ ಪೂಜಾರಿ, ಈಗ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್‌ನ ಸಂಯೋಜಕರಾಗಿದ್ದಾರೆ. ಐಟಿ ಅಧಿಕಾರಿಗಳು ಮುಂಜಾನೆಯಿಂದಲೇ ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದು, ದಾಳಿ ಮುಂದುವರಿದಿದೆ.