ಗುಂಡ್ಲುಪೇಟೆ, ಶಿವನಸಮುದ್ರದಲ್ಲಿ ಐಸಿಸ್‌ ಉಗ್ರ ಶಿಬಿರ!

By Kannadaprabha NewsFirst Published Oct 4, 2020, 7:25 AM IST
Highlights

ಗುಂಡ್ಲುಪೇಟೆ, ಶಿವನಸಮುದ್ರದಲ್ಲಿ ಐಸಿಸ್‌ ಉಗ್ರ ಶಿಬಿರ| ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಬೇರೂರಲು ಸಂಚು ಮಾಡಿದ್ದ ಐಸಿಸ್‌| ಗುಂಡ್ಲುಪೇಟೆ, ಶಿವನಸಮುದ್ರ ಅರಣ್ಯದಲ್ಲಿ ತರಬೇತಿಗೆ ನಡೆದಿತ್ತು ಸಿದ್ಧತೆ| ಎನ್‌ಐಎ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಆತಂಕಕಾರಿ ಮಾಹಿತಿಗಳು| ಕೊಡಗು, ಕೋಲಾರ ಸೇರಿ ಹಲವು ಜಿಲ್ಲೆಗಳಲ್ಲಿ ಬೇರು ಬಿಡಲು ಯತ್ನ|  ಹಿಂದೂ ನಾಯಕರ ಹತ್ಯೆ ಬಳಿಕ ಕಾಡಲ್ಲಿ ತಲೆಮರೆಸಿಕೊಳ್ಳುವ ಪ್ಲಾನ್‌

ನವದೆಹಲಿ(ಅ.04): ಕೊಡಗು, ಕೋಲಾರ ಸೇರಿ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಒಳಗೊಂಡಂತೆ ದಕ್ಷಿಣ ಭಾರತದಲ್ಲಿ ತಮ್ಮ ಸಾಮ್ರಾಜ್ಯ ಕಟ್ಟಲು ಐಸಿಸ್‌ ಉಗ್ರ ಸಂಘಟನೆಯ ಭಾರತೀಯ ಮಾದರಿಯಾದ ಅಲ್‌ ಹಿಂದ್‌ ಭಾರೀ ಯೋಜನೆ ರೂಪಿಸಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಲ್ಲದೆ ಸಂಘಟನೆಗೆ ನೇಮಕವಾದ ಹೊಸ ಉಗ್ರರಿಗೆ ಮಂಡ್ಯ ಜಿಲ್ಲೆಯ ಶಿವನಸಮುದ್ರ ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಅರಣ್ಯ ತರಬೇತಿ ನೀಡಲು ಅಗತ್ಯ ಪರಿಕರಗಳನ್ನೂ ಉಗ್ರರು ಸಜ್ಜು ಮಾಡಿಟ್ಟುಕೊಂಡಿದ್ದರು ಎಂಬ ವಿಷಯ ಕೂಡ ಬೆಳಕಿಗೆ ಬಂದಿದೆ.

ಕಳೆದ ವರ್ಷ ಬೆಂಗಳೂರಿನ ಮೆಹಬೂಬ್‌ ಪಾಷಾ ಮತ್ತು ತಮಿಳುನಾಡಿನ ಕಡಲೂರಿನ ಖಾಜಾ ಮೊಯಿದ್ದೀನ್‌ ಎಂಬಿಬ್ಬರು ಅಲ್‌ ಹಿಂದ್‌ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಐ) ಬಂಧಿಸಿತ್ತು. ಅವರ ವಿಚಾರಣೆ ವೇಳೆ ಹಲವು ಮಾಹಿತಿಗಳು ಹೊರಬಿದ್ದಿದ್ದವು. ಈ ಬಗ್ಗೆ ಜುಲೈ 14ರಂದು 17 ಜನರ ವಿರುದ್ಧ ಆರೋಪಪಟ್ಟಿಯನ್ನು ಎನ್‌ಐಎ ಸಲ್ಲಿಸಿತ್ತು. ಅದರಲ್ಲಿನ ಮಾಹಿತಿಗಳು ತನಗೆ ಲಭ್ಯವಾಗಿದೆ ಎಂದು ದೆಹಲಿ ಮೂಲದ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

"

ಹಿಂದೂ ಧಾರ್ಮಿಕ ನಾಯಕರು, ರಾಜಕೀಯ ನಾಯಕರು, ಪೊಲೀಸ್‌ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಖ್ಯಾತನಾಮರನ್ನು ಹತ್ಯೆ ಮಾಡಿ ಬಳಿಕ ಅರಣ್ಯ ಪ್ರದೇಶದಲ್ಲಿ ಅವಿತುಕೊಳ್ಳಲು ಅಲ್‌ ಹಿಂದ್‌ ಉಗ್ರರು ಯೋಜಿಸಿದ್ದರು ಎಂದು ಎನ್‌ಐಎ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ.

ಏನೇನು ಸಂಚು?:

ಅಲ್‌ ಹಿಂದ್‌ ಉಗ್ರರು ಕರ್ನಾಟಕದ ಕೊಡಗು, ಕೋಲಾರ ಮತ್ತು ಇತರೆ ಕೆಲ ಪ್ರದೇಶಗಳು, ಕೇರಳ, ಮಹಾರಾಷ್ಟ್ರದ ರತ್ನಗಿರಿ, ಗುಜರಾತ್‌ನ ಜಂಬೂಸರ್‌, ಆಂಧ್ರದ ಚಿತ್ತೂರ್‌, ಪಶ್ಚಿಮ ಬಂಗಾಳದ ಬುದ್ರ್ವಾನ್‌ನಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿಕೊಳ್ಳಲು ಯೋಜಿಸಿದ್ದರು. ಜೊತೆಗೆ ಕರ್ನಾಟಕದ ಮಂಡ್ಯ ಜಿಲ್ಲೆಯ ಶಿವನಸಮುದ್ರ ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಅರಣ್ಯದಲ್ಲಿ ಜಂಗಲ್‌ ತರಬೇತಿಗೆ ಬೇಕಾದ ಎಲ್ಲಾ ಉಪಕರಣಗಳನ್ನು ಸಜ್ಜಗೊಳಿಸಿದ್ದರು. ಇದಕ್ಕಾಗಿ ಪಾಷಾ ಮತ್ತು ಮೊಯಿದ್ದೀನ್‌ ಯುವಕರನ್ನು ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಶಕ್ತಿಶಾಲಿ ಸ್ಫೋಟಕಗಳನ್ನು ತಯಾರಿಸಲು ಅಗತ್ಯವಾದ ವಸ್ತುಗಳನ್ನು ಖರೀದಿಸಿದ್ದರು. ಜೊತೆಗೆ ಈ ಇಬ್ಬರೂ ಡಾರ್ಕ್ವೆಬ್‌ ಮೂಲಕ ವಿದೇಶದಲ್ಲಿನ ಐಸಿಸ್‌ ನಾಯಕರ ಜೊತೆ ಸಂವಾದ ನಡೆಸುತ್ತಿದ್ದರು ಎಂದು ಆರೋಪಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆ.‌

ಯಾರಿಂದ ಮಾಹಿತಿ ಲಭ್ಯ?

ಬೆಂಗಳೂರಿನಲ್ಲಿ ಎನ್‌ಐಎಗೆ ಸೆರೆ ಸಿಕ್ಕಿದ್ದ ಮೆಹಬೂಬ್‌ ಪಾಷಾ ಮತ್ತು ್ತ ತಮಿಳುನಾಡಿನ ಕಡಲೂರಿನ ಖಾಜಾ ಮೊಯಿದ್ದೀನ್‌ ವಿಚಾರಣೆ ವೇಳೆ ಮಾಹಿತಿ ಬಯಲು

ಉಗ್ರರ ಸಂಚು ಏನು?

ಹಿಂದೂ ಧಾರ್ಮಿಕ ನಾಯಕರು, ರಾಜಕೀಯ ನಾಯಕರು, ಪೊಲೀಸ್‌ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಖ್ಯಾತನಾಮರನ್ನು ಹತ್ಯೆ ಮಾಡಿ ಬಳಿಕ ಅರಣ್ಯ ಪ್ರದೇಶದಲ್ಲಿ ಅವಿತುಕೊಳ್ಳಲು ಅಲ್‌ ಹಿಂದ್‌ ಉಗ್ರರು ಯೋಜಿಸಿದ್ದರು.

ಉಗ್ರರಿಂದ ಎಲ್ಲೆಲ್ಲಿ ಸಿದ್ಧತೆ?

ಕರ್ನಾಟಕದ ಕೊಡಗು, ಕೋಲಾರ, ಕೇರಳ, ಮಹಾರಾಷ್ಟ್ರದ ರತ್ನಗಿರಿ, ಗುಜರಾತ್‌ನ ಜಂಬೂಸರ್‌, ಆಂಧ್ರದ ಚಿತ್ತೂರ್‌, ಪಶ್ಚಿಮ ಬಂಗಾಳದ ಬುದ್ರ್ವಾನ್‌ನಲ್ಲಿ ನೆಲೆಯೂರಲು ಉಗ್ರರಿಂದ ಸಿದ್ಧತೆ.

click me!