ರಾಜ್ಯದ ಐಸಿಸ್‌ ಬಾಸ್‌ ಅರೆಸ್ಟ್‌! ಭರ್ಜರಿ ಉಗ್ರ ಬೇಟೆ

By Kannadaprabha NewsFirst Published Jan 17, 2020, 7:17 AM IST
Highlights

ಶಂಕಿತ ISIS ಉಗ್ರ ಮೆಹಬೂಬ್‌ ಪಾಷಾ ಹಾಗೂ ಆತನ ನಂಬಿಕಸ್ಥ ಬಂಟ ಮನ್ಸೂರ್‌ ಖಾನ್‌ನನ್ನು ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರು ಅಪರಾಧ ವಿಭಾಗ (ಸಿಸಿಬಿ) ಹಾಗೂ ರಾಜ್ಯ ಆಂತರಿಕ ಭದ್ರತೆ ವಿಭಾಗ (ಐಎಸ್‌ಡಿ)ದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬೆಂಗಳೂರು [ಜ.17]:  ರಾಜ್ಯದಲ್ಲಿ ರಕ್ತಪಿಪಾಸು ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಹೊಸ ಸದಸ್ಯರ ನೇಮಕಾತಿಯ ಹೊಣೆಗಾರಿಕೆ ಹೊತ್ತಿದ್ದ ಶಂಕಿತ ಉಗ್ರ ಮೆಹಬೂಬ್‌ ಪಾಷಾ ಹಾಗೂ ಆತನ ನಂಬಿಕಸ್ಥ ಬಂಟ ಮನ್ಸೂರ್‌ ಖಾನ್‌ನನ್ನು ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರು ಅಪರಾಧ ವಿಭಾಗ (ಸಿಸಿಬಿ) ಹಾಗೂ ರಾಜ್ಯ ಆಂತರಿಕ ಭದ್ರತೆ ವಿಭಾಗ (ಐಎಸ್‌ಡಿ)ದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ತನ್ನ ಇತರ ಸಹಚರರ ಬಂಧನದ ಬಳಿಕ ತಲೆಮರೆಸಿಕೊಂಡಿದ್ದ ಮೆಹಬೂಬ್‌ ಪಾಷಾ ಹಾಗೂ ಆತನ ಸಹಚರ ಮನ್ಸೂರ್‌ನನ್ನು ಬೆಂಗಳೂರಿನ ಜಯನಗರದ ಸಮೀಪ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಇದರೊಂದಿಗೆ ಕರ್ನಾಟಕವೊಂದರಲ್ಲೇ ‘ಜಿಹಾದಿ ಗ್ಯಾಂಗ್‌’ನ 9 ಸದಸ್ಯರು ಬಂಧಿತರಾದಂತಾಗಿದೆ. ಇತ್ತೀಚೆಗೆ ಬೆಂಗಳೂರಲ್ಲಿ 3, ಕೋಲಾರ ಹಾಗೂ ಉಡುಪಿಯಲ್ಲಿ ತಲಾ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ದೇಶಾದ್ಯಂತ ಒಟ್ಟು 18 ಜನರು ಭದ್ರತಾ ಪಡೆಗಳ ಬಲೆಗೆ ಬಿದ್ದಂತಾಗಿದೆ.

ಜಿಹಾದಿ ಗ್ಯಾಂಗ್‌:

ದಕ್ಷಿಣ ಭಾರತದಲ್ಲಿ ಐಸಿಸ್‌ ಸಂಘಟನೆ ಬಲವರ್ಧನೆಗೆ ಇತ್ತೀಚೆಗೆ ಬಂಧಿತನಾದ ತಮಿಳುನಾಡಿನ ಖಾಜಾ ಮೊಯಿದ್ದೀನ್‌ ಯೋಜಿಸಿದ್ದ. ಆಗ ಆತನಿಗೆ ಕೋಲಾರದ ಸಲೀಂ ಮೂಲಕ ಮೆಹಬೂಬ್‌ ಪಾಷಾ ಪರಿಚಯವಾಗಿದೆ. ಬಳಿಕ ಸದ್ದುಗುಂಟೆಪಾಳ್ಯದಲ್ಲಿರುವ ಪಾಷಾನ ಮನೆಯನ್ನು ಸಂಘಟನೆಯ ತಾತ್ಕಾಲಿಕ ಕಾರ್ಯಸ್ಥಾನ ಮಾಡಿಕೊಂಡ ಖಾಜಾ, ಪಾಷಾನನ್ನು ಕರ್ನಾಟಕದ ಐಸಿಸ್‌ ಸಂಘಟನೆಗೆ ಹೊಸ ಸದಸ್ಯರ ನೇಮಕಾತಿಗೆ ಪ್ರಮುಖನಾಗಿ ನಿಯೋಜಿಸಿದ್ದ. ಇದಕ್ಕಾಗಿ ಅಲ್‌ ಹಿಂದ್‌ ಎಂಬ ಟ್ರಸ್ಟ್‌ ಅನ್ನು ಪಾಷಾ ಆರಂಭಿಸಿದ್ದ ಎಂದು ಮೂಲಗಳು ತಿಳಿಸಿವೆ.

ಟ್ರಸ್ಟ್‌ ಮೂಲಕ ಧಾರ್ಮಿಕ ಬೋಧನೆ ಹಾಗೂ ಸಾಮಾಜಿಕ ಕಾರ್ಯಗಳನ್ನು ಆಯೋಜಿಸಿ ಯುವ ಸಮೂಹವನ್ನು ಸೆಳೆಯಲು ಪಾಷಾ ಮುಂದಾದ. ಆ ಮೂಲಕ ಕಾರು ಚಾಲಕರಾದ ಮನ್ಸೂರ್‌ ಖಾನ್‌, ನಾಯಂಡಹಳ್ಳಿಯ ಇಮ್ರಾನ್‌ ಖಾನ್‌, ಗುರಪ್ಪನಪಾಳ್ಯದ ಮೊಹಮ್ಮದ್‌ ಹನೀಫ್‌, ಹುಸೇನ್‌, ಚನ್ನಪಟ್ಟಣದ ಅನೀಸ್‌, ರಾಮನಗರದ ಅಜರ್‌ ಪಾಷಾ, ಜಬೀವುಲ್ಲಾ ಹಾಗೂ ಮುಸಾವೀರ್‌ ಹುಸೈನ್‌ನನ್ನು ಸಂಘಟನೆಗೆ ಮೆಹಬೂಬ್‌ ನೇಮಿಸಿಕೊಂಡಿದ್ದ. ನಂತರ ಖಾಜಾ ಸೂಚನೆ ಮೇರೆಗೆ ಪಾಷಾ, ತಮಿಳುನಾಡಿನ ಅಬ್ದುಲ್‌ ಸಮದ್‌, ತೌಸಿಫ್‌, ಸೈಯದ್‌ ಅಲಿ ನವಾಜ್‌, ಜಾಫರ್‌ ಅಲಿ, ಅಬ್ದುಲ್‌ ಶಮೀಮ್‌ ಜತೆ ಸಂಪರ್ಕ ಬೆಳೆಸಿದ್ದ. ಕಾನೂನುಬಾಹಿರ ಚಟುವಟಿಕೆಗಳ ಮಾಹಿತಿ ಹಿನ್ನೆಲೆಯಲ್ಲಿ ಖಾಜಾನನ್ನು ತಮಿಳುನಾಡು ಪೊಲೀಸರು ಬೆನ್ನುಹತ್ತಿದ್ದರು. ಬಂಧನ ಭೀತಿಗೊಳಗಾಗಿದ್ದ ಖಾಜಾನ ಸಹಚರರಿಗೆ ಬೆಂಗಳೂರಿನಲ್ಲಿ ಪಾಷಾ ಆಶ್ರಯ ಕಲ್ಪಿಸಿದ್ದ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಖಾಜಾ ಸಹಚರರ ಇರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಕೇಂದ್ರ ಗುಪ್ತದಳ ಹಾಗೂ ತಮಿಳುನಾಡು ಪೊಲೀಸರು, ಸಿಸಿಬಿ ನೆರವು ಪಡೆದು ಗುರಪ್ಪನಪಾಳ್ಯದಲ್ಲಿ ಆತನ ಮೂವರು ಬೆಂಬಲಿಗರನ್ನು ಸೆರೆ ಹಿಡಿದರು. ಅಷ್ಟರಲ್ಲಿ ನಗರದಿಂದ ತಪ್ಪಿಸಿಕೊಂಡಿದ್ದ ತೌಸಿಫ್‌ ಹಾಗೂ ಶಮೀಮ್‌ ಉಡುಪಿಯಲ್ಲಿ ಸಿಕ್ಕಿಬಿದ್ದರು. ಈ ಇಬ್ಬರೂ ತಮಿಳುನಾಡಿನ ಸ್ಪೆಷಲ್‌ ಸಬ್‌ ಇನ್ಸ್‌ಪೆಕ್ಟರ್‌ ವಿಲ್ಸನ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಹೀಗೆ ಒಬ್ಬೊಬ್ಬರಾಗಿ ಸಹಚರರು ಖಾಕಿ ಬಲೆಗೆ ಬೀಳುತ್ತಿದ್ದಂತೆ ಭಯಗೊಂಡ ಪಾಷಾ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಕೊನೆಗೂ ಸಿಸಿಬಿ ಆತನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ಹೇಳಿವೆ.

ಅದೇ ರೀತಿ ಗುಂಡ್ಲುಪೇಟೆ ತಾಲೂಕಿನಲ್ಲಿ ಐಸಿಸ್‌ನ ಹೊಸ ಸದಸ್ಯರಿಗೆ ತರಬೇತಿ ಸಲುವಾಗಿ ತರಬೇತಿ ಶಿಬಿರ ಸ್ಥಾಪನೆಗೆ ಭೂಮಿ ಖರೀದಿಗೆ ಪಾಷಾ ಯತ್ನಿಸಿದ್ದ. ಇದಕ್ಕಾಗಿ ಆತ ಮನ್ಸೂರ್‌ನನ್ನು ನಿಯೋಜಿಸಿದ್ದ. ಈ ಸುಳಿವು ಪಡೆದು ಬೆನ್ನುಹತ್ತಿದ್ದ ಪೊಲೀಸರು, ಮನ್ಸೂರ್‌ನನ್ನು ಸಹ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

"

ಯಾರು ಈ ಪಾಷಾ?

ಬೆಂಗಳೂರಿನ ಸದ್ದುಗುಂಟೆಪಾಳ್ಯದ ನಿವಾಸಿ ಮೆಹಬೂಬ್‌ ಪಾಷಾ. ದಕ್ಷಿಣ ಭಾರತದಲ್ಲಿ ಐಸಿಸ್‌ ಸಂಘಟನೆ ಹೊಣೆ ಹೊತ್ತಿದ್ದ, ಇತ್ತೀಚೆಗೆ ಬಂಧಿತನಾದ ತಮಿಳುನಾಡಿನ ಖಾಜಾ ಮೊಯಿದೀನ್‌ ಎಂಬಾತ ಪಾಷಾನನ್ನು ಕರ್ನಾಟಕದಲ್ಲಿ ಐಸಿಸ್‌ ಜಾಲ ವಿಸ್ತರಿಸಲು ನೇಮಿಸಿದ್ದ. ಅದರಂತೆ, ಅಲ್‌ ಹಿಂದ್‌ ಟ್ರಸ್ಟ್‌ ಎಂಬ ಸಂಸ್ಥೆ ಆರಂಭಿಸಿದ್ದ ಪಾಷಾ, ಸದಸ್ಯರ ನೇಮಕ, ಉಗ್ರ ತರಬೇತಿ ನೀಡಲು ಜಮೀನು ಖರೀದಿ ಮತ್ತಿತರ ಯೋಜನೆಗಳಲ್ಲಿ ತೊಡಗಿಕೊಂಡಿದ್ದ. ಇದಕ್ಕಾಗಿ ತನ್ನ ಆಪ್ತ, ಬೆಂಗಳೂರಿನ ಗುರಪ್ಪನಪಾಳ್ಯ ನಿವಾಸಿ ಮನ್ಸೂರ್‌ ಖಾನ್‌ನನ್ನು ನಿಯೋಜಿಸಿದ್ದ. ಇತ್ತೀಚೆಗೆ ತಮಿಳುನಾಡು, ಕರ್ನಾಟಕ, ದೆಹಲಿ, ಗುಜರಾತ್‌ನಲ್ಲಿ ತಮ್ಮ ಗ್ಯಾಂಗ್‌ ಸದಸ್ಯರ ಬಂಧನವಾಗುತ್ತಿದ್ದಂತೆ ಇಬ್ಬರೂ ತಲೆಮರೆಸಿಕೊಂಡಿದ್ದರು. ಇದೀಗ ಕರ್ನಾಟಕ ಪೊಲೀಸರು ಇಬ್ಬರನ್ನೂ ಸೆರೆ ಹಿಡಿದಿದ್ದಾರೆ.

click me!