ಚಿನ್ನಯ್ಯ ತಂದ ಬುರುಡೆ ಮೂಲ ಸೌಜನ್ಯಳ ಮಾವ ವಿಠಲಗೌಡ?

Kannadaprabha News   | Kannada Prabha
Published : Sep 07, 2025, 05:49 AM IST
Dharmasthala Burude Gang

ಸಾರಾಂಶ

ಚಿನ್ನಯ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಬುರಡೆಯನ್ನು ನೇತ್ರಾವತಿ ಸ್ನಾನಘಟ್ಟ ಸಮೀಪದ ಅರಣ್ಯದ ಬಂಗ್ಲೆಗುಡ್ಡದಿಂದ ತಾನೇ ತೆಗೆದುಕೊಂಡು ಹೋಗಿ ಹೋರಾಟಗಾರ ಗಿರೀಶ್‌ ಮಟ್ಟಣ್ಣವರ್‌ಗೆ ಕೊಟ್ಟಿದ್ದೆ ಎಂದು ಸೌಜನ್ಯ ಮಾವ ವಿಠಲಗೌಡ ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ದೂರುದಾರ ಚಿನ್ನಯ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಬುರಡೆಯನ್ನು ನೇತ್ರಾವತಿ ಸ್ನಾನಘಟ್ಟ ಸಮೀಪದ ಅರಣ್ಯದ ಬಂಗ್ಲೆಗುಡ್ಡದಿಂದ ತಾನೇ ತೆಗೆದುಕೊಂಡು ಹೋಗಿ ಹೋರಾಟಗಾರ ಗಿರೀಶ್‌ ಮಟ್ಟಣ್ಣವರ್‌ಗೆ ಕೊಟ್ಟಿದ್ದೆ ಎಂದು ಸೌಜನ್ಯ ಮಾವ ವಿಠಲಗೌಡ ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಆತನನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಸಂಜೆ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅರಣ್ಯಕ್ಕೆ ವಿಠಲ ಗೌಡ ಹಾಗೂ ಹೋರಾಟಗಾರ ಜಯಂತ್‌ ಅವರೊಂದಿಗೆ ಬಂದ‌ ಎಸ್ಐಟಿ, ತಲೆಬುರುಡೆ ಸ್ಥಳದ ಮಹಜರು ನಡೆಸಿತು. ಈ ವೇಳೆ ಬಂಗ್ಲೆಗುಡ್ಡಕ್ಕೆ ವಿಠಲ ಗೌಡನನ್ನು ಎಸ್ಐಟಿ ತಂಡ ಕರೆದೊಯ್ದಿದೆ. ಗಿರೀಶ್ ಮಟ್ಟಣ್ಣವರ್‌ಗೆ ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತೆಗೆದುಕೊಟ್ಟಿದ್ದೆ. ಬಂಗ್ಲೆಗುಡ್ಡೆ ಕಾಡಿನ ಮಣ್ಣಿನ ಮೇಲ್ಭಾಗದಿಂದ ಬುರುಡೆ ತೆಗೆದಿದ್ದೆ ಎಂದು ವಿಠಲಗೌಡನೇ ತನಿಖಾ ತಂಡದ ಎದುರು ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ವಿಠಲ ಗೌಡನ ಪ್ರಮುಖ ಪಾತ್ರ:

ಬುರುಡೆ ಟೀಂಗೆ ಚಿನ್ನಯ್ಯನ ಪರಿಚಯಿಸಿದ್ದೇ ಸೌಜನ್ಯ ಮಾವ ವಿಠಲಗೌಡ. ಚಿನ್ನಯ್ಯನ ಪರಿಚಯಿಸಿ ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ಕೂಡ ತಂದುಕೊಟ್ಟಿದ್ದ. ಬುರುಡೆಯು ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಸ್ಥಿಪಂಜರದ ಅವಶೇಷವಾಗಿದೆ. ಬುರುಡೆ ಗ್ಯಾಂಗ್‌ಗೂ ಮೊದಲೇ ವಿಠಲಗೌಡನಿಗೆ ಚಿನ್ನಯ್ಯ ಪರಿಚಿತನಾಗಿದ್ದ. ವಿಠಲಗೌಡ ನೇತ್ರಾವತಿ ಬಳಿ ಹಲವು ವರ್ಷಗಳ ಹಿಂದೆ ಹೋಟೆಲ್ ಹೊಂದಿದ್ದ. ಸೌಜನ್ಯ ಪ್ರಕರಣದ ಬಳಿಕ ಬೇರೆಡೆ ಹೋಟೆಲ್ ಸ್ಥಳಾಂತರಿಸಿದ್ದ. ನೇತ್ರಾವತಿ ಬಳಿ ಹೋಟೆಲ್‌ ಇದ್ದಾಗ ಚಿನ್ನಯ್ಯ ಬಂದು ಹೋಗುತ್ತಿದ್ದ. ಚಿನ್ನಯ್ಯ ಅನಾಥ ಶವ ಹಾಗೂ ಯುಡಿಆರ್ ಕೇಸ್‌ನ ಶವಗಳನ್ನು ದಫನ್‌ ಮಾಡುವುದನ್ನು ವಿಠಲಗೌಡ ಅರಿತಿದ್ದ. ಅದರಂತೆ ಗಿರೀಶ್ ಮಟ್ಟಣ್ಣವರ್ ರೂಪಿಸಿದ ಪ್ಲಾನ್‌ಗೆ ಚಿನ್ನಯ್ಯ ಪಾತ್ರಧಾರಿಯಾಗಬೇಕಾಯಿತು ಎನ್ನಲಾಗಿದೆ.

2014ರಲ್ಲಿ ಧರ್ಮಸ್ಥಳ ಬಿಟ್ಟಿದ್ದ ಚಿನ್ನಯ್ಯನ ಬಗ್ಗೆ ವಿಠಲಗೌಡನ ಬಳಿ ಇದ್ದ ಮಾಹಿತಿಯಂತೆ ಬುರುಡೆ ಟೀಂ ಹುಡುಕಾಟ ನಡೆಸಿತ್ತು. ಕೊನೆಗೆ ಚಿನ್ನಯ್ಯ ಸಿಕ್ಕ ಬಳಿಕ ಉಜಿರೆಯ ಹೋಟೆಲ್‌ನಲ್ಲಿ ಭೇಟಿ ಮಾಡಿದ್ದರು. ಅಲ್ಲಿ ಗಿರೀಶ್ ಮಟ್ಟಣ್ಣವರ್, ಚಿನ್ನಯ್ಯ ಹಾಗೂ ವಿಠಲಗೌಡ ಸಭೆ ನಡೆಸಿ ತಂತ್ರ ರೂಪಿಸಿದ್ದರು. ಬಳಿಕ ವಿಠಲಗೌಡ ಬುರುಡೆ ಕಥೆಯಲ್ಲಿ ನೇಪಥ್ಯಕ್ಕೆ ಸರಿದಿದ್ದ. ಇದೀಗ ಶನಿವಾರ ಸಂಜೆ ವಿಠಲಗೌಡನನ್ನು ಎಸ್ಐಟಿ ಬಂಗ್ಲೆ ಗುಡ್ಡೆಗೆ ಕರೆದುಕೊಂಡು ಹೋಗಿ ಅಲ್ಲಿ ಬುರುಡೆ ಸಿಕ್ಕ ಸ್ಥಳದ ಮಹಜರು ನಡೆಸಿದೆ.

ಇಡೀ ಪ್ರಕರಣದಲ್ಲಿ ಈ ಬುರುಡೆಯ ಸುತ್ತ ಹಲವು ಕತೆಗಳನ್ನು ಹೆಣೆಯಲಾಗಿತ್ತು. ಆದರೆ ಅದೆಲ್ಲದಕ್ಕೂ ಇದೀಗ ಕೊನೆಯಾಗಿದ್ದು ತಲೆಬುರುಡೆಯನ್ನು ಇದೇ ಸ್ಥಳದಿಂದ ತೆಗೆದಿರುವುದು ತನಿಖೆಯಿಂದ‌ ಬಹಿರಂಗಗೊಂಡಿದೆ. ಈ ಪ್ರಕರಣದಲ್ಲಿ ಬುರುಡೆಯನ್ನು ಮೊದಲು‌ ನೋಡಿರುವ ವಿಠಲಗೌಡ ಹಾಗೂ ಜಯಂತ್ ಅವರೊಂದಿಗೆ ಸ್ಥಳಕ್ಕೆ ತೆರಳಿದ‌ ಎಸ್ಐಟಿ ಅಧಿಕಾರಿಗಳು ಸ್ಥಳ‌ ಮಹಜರು ನಡೆಸಿದ್ದಾರೆ. ಈ ಪ್ರಕರಣದ ಸತ್ಯ ಹೊರಗೆ ಬಂದಿರುವುದರಿಂದ ವಿಠಲ ಗೌಡನನ್ನು ಬಂಧಿಸುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌