
ಬೆಂಗಳೂರು (ಮಾ.4): ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದಾಗಿ ಪ್ರವಾಸಕ್ಕೆ ಹೋಗಿದ್ದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹನುಮಂತನಗರದ ನಿವಾಸಿಗಳಾದ ಎಂಟು ಮಂದಿ ಹಿರಿಯ ಸ್ನೇಹಿತರು ಹೋಗಿ ಈಗ ಕತಾರ್‌ನ ದೋಹಾ ಬಂದರಿನಲ್ಲಿ ಸಿಲುಕಿಕೊಂಡಿದ್ದಾರೆ.
ನಿವೃತ್ತಿಯ ನಂತರದ ದಿನಗಳನ್ನು ಸಂಭ್ರಮದಿಂದ ಕಳೆಯಲು ಪ್ಲಾನ್ ಮಾಡಿದ್ದ ಈ ಎಂಟು ಮಂದಿ ಸ್ನೇಹಿತರು ಈಗ ಅಕ್ಷರಶಃ ಸಂಕಷ್ಟದಲ್ಲಿದ್ದಾರೆ. ಬೆಂಗಳೂರಿನ ಬಸವನಗುಡಿ ಮತ್ತು ಹನುಮಂತನಗರದ ನಿವಾಸಿಗಳಾದ ಮುರುಳಿ ಕೃಷ್ಣ, ವಿಜಯ್ ಕುಮಾರ್, ಶ್ರೀಧರ್, ಅಶೋಕ್ ಕುಮಾರ್, ಆದರ್ಶ ಆನಂದ್ ಕುಮಾರ್, ಬಾಲಾಜಿ, ಸುರೇಶ್ ಬಾಬು ಮತ್ತು ಮುರಳಿ ಅವರು ಕತಾರ್‌ನ ದೋಹಾ ಬಂದರಿನಲ್ಲಿರುವ ಕ್ರೂಸ್ ಶಿಪ್‌ನಲ್ಲಿ ಕಳೆದ ಐದು ದಿನಗಳಿಂದ ಸಿಲುಕಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದಿಂದಾಗಿ ಸಮುದ್ರ ಮಾರ್ಗಗಳು ಅಸ್ತವ್ಯಸ್ತಗೊಂಡಿವೆ. ಕತಾರ್, ಬಹರೈನ್ ಮತ್ತು ಯುಎಇ ಸುತ್ತಾಡಲು ತೆರಳಿದ್ದ ಇವರ ಕ್ರೂಸ್ ಶಿಪ್, ಯುದ್ಧದ ಭೀತಿಯಿಂದಾಗಿ ಕಳೆದ ಫೆಬ್ರವರಿ 28 ರಿಂದ ದೋಹಾ ಬಂದರಿನಲ್ಲಿಯೇ ಲಂಗರು ಹಾಕಿದೆ. ಸಮುದ್ರದ ನಡುವೆ ಸುರಕ್ಷಿತವಾಗಿರಲು ಹಡಗು ನಿಂತಲ್ಲೇ ನಿಂತಿದ್ದು, ಪ್ರವಾಸಿಗರು ಹಡಗಿನಿಂದ ಹೊರಬರಲಾರದೆ ಕಂಗಾಲಾಗಿದ್ದಾರೆ.
ಅಚ್ಚರಿಯ ವಿಷಯವೆಂದರೆ, ಅದೇ ಶಿಪ್‌ನಲ್ಲಿದ್ದ ಖಜಾಕಿಸ್ತಾನ್‌ನ 100ಕ್ಕೂ ಹೆಚ್ಚು ಪ್ರವಾಸಿಗರನ್ನು ಅವರ ದೇಶವು ತಕ್ಷಣವೇ ರಕ್ಷಿಸಿ ಸುರಕ್ಷಿತವಾಗಿ ಕರೆಸಿಕೊಂಡಿದೆ. ಆದರೆ ಭಾರತದ ಕೇವಲ ಎಂಟು ಮಂದಿಯನ್ನು ರಕ್ಷಿಸಲು ಸರ್ಕಾರ ವಿಳಂಬ ಮಾಡುತ್ತಿರುವುದು ಅಲ್ಲಿರುವ ಕನ್ನಡಿಗರ ಆತಂಕವನ್ನು ಹೆಚ್ಚಿಸಿದೆ. 'ಬೇರೆ ದೇಶಗಳು ತಮ್ಮ ಜನರನ್ನು ಕರೆದೊಯ್ಯುತ್ತಿವೆ, ನಮಗೆ ಯಾಕೆ ಈ ವಿಳಂಬ?' ಎಂಬ ಪ್ರಶ್ನೆ ಪ್ರವಾಸಿಗರನ್ನು ಕಾಡುತ್ತಿದೆ.
ಸದ್ಯಕ್ಕೆ ಎಲ್ಲರೂ ಸುರಕ್ಷಿತ: ಮನೆಮಂದಿಯ ಆತಂಕ
ಕ್ರೂಸ್‌ನಲ್ಲಿ ಸಿಲುಕಿರುವ ಎಂಟು ಮಂದಿಗೂ ಸದ್ಯಕ್ಕೆ ಯಾವುದೇ ಪ್ರಾಣಾಪಾಯವಿಲ್ಲ ಮತ್ತು ಅಗತ್ಯ ಸೌಲಭ್ಯಗಳು ದೊರೆಯುತ್ತಿವೆ. ಆದರೂ, ಯುದ್ಧದ ವಾತಾವರಣ ಮತ್ತು ಐದು ದಿನಗಳಿಂದ ಒಂದೇ ಕಡೆ ಇರುವುದು ಅವರನ್ನು ಮಾನಸಿಕವಾಗಿ ದಣಿಸಿದೆ. ಹನುಮಂತನಗರದಲ್ಲಿರುವ ಅವರ ಕುಟುಂಬಸ್ಥರು ಪ್ರಧಾನಿ ಕಚೇರಿ ಹಾಗೂ ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದು, ಕೂಡಲೇ ಅವರನ್ನು ಏರ್ ಲಿಫ್ಟ್ ಅಥವಾ ರಸ್ತೆ ಮಾರ್ಗದ ಮೂಲಕ ರಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ