
ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ನಡೆಯುತ್ತಿರುವ ಇಲಾಖಾ ತನಿಖೆ (Departmental Inquiry) ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಅವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ಮುಂದೆ ಸಲ್ಲಿಸಿದ ಅರ್ಜಿಯ ವಿಚಾರಣೆ ಮಹತ್ವದ ತಿರುವು ಪಡೆದುಕೊಂಡಿದೆ. ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ಈಗಾಗಲೇ 'ಬಿ ರಿಪೋರ್ಟ್' ಸಲ್ಲಿಸಿ ಯಾವುದೇ ಕ್ರಿಮಿನಲ್ ಪ್ರಕರಣ ಸ್ಥಾಪಿಸಲು ಸಾಧ್ಯವಿಲ್ಲವೆಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲಾಖಾ ತನಿಖೆಯನ್ನು ಕೈಬಿಡಲು ತೀರ್ಮಾನಿಸಿದ್ದರು. ಆದರೆ ಇಲಾಖಾ ವಿಚಾರಣೆ ಕೈಬಿಡುವ ಅಧಿಕೃತ ಆದೇಶ ಪ್ರಕಟವಾಗಿರಲಿಲ್ಲ.
ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಇಲಾಖಾ ವಿಚಾರಣೆಯನ್ನು ಮುಂದುವರಿಸಲು ನಿರ್ಧರಿಸಿತು. ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ನೀಡಲಾದ ನೋಟಿಸ್‌ನ್ನು ಪ್ರಶ್ನಿಸಿ ಅಲೋಕ್ ಕುಮಾರ್ CAT ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ವೇಳೆ, CAT ಸದಸ್ಯರಿಬ್ಬರಿಂದ ವಿಭಿನ್ನ ತೀರ್ಪು ನೀಡಲಾಗಿದೆ. ನ್ಯಾಯಮೂರ್ತಿ ಬಿ.ಕೆ. ಶ್ರೀವಾತ್ಸ ಅವರು, “ಅಲೋಕ್ ಕುಮಾರ್ ವಿರುದ್ಧ ನಡೆಯುತ್ತಿರುವ ಇಲಾಖಾ ತನಿಖೆ ರದ್ದಾಗಬೇಕು” ಎಂದು ತೀರ್ಪು ನೀಡಿದರು.
ಇನ್ನೊಂದು ಕಡೆ, ನ್ಯಾಯಮೂರ್ತಿ ಸಂತೋಷ್ ಮೆಹ್ರಾ ಅವರು, “ಅಲೋಕ್ ಕುಮಾರ್ ಅರ್ಜಿಯನ್ನು ವಜಾಗೊಳಿಸಬೇಕು” ಎಂದು ಅಭಿಪ್ರಾಯಪಟ್ಟರು.
ಸದಸ್ಯರಿಬ್ಬರ ತೀರ್ಪುಗಳಲ್ಲಿ ಒಮ್ಮತ ಮೂಡದ ಕಾರಣ, ಇದೀಗ ಈ ಪ್ರಕರಣವನ್ನು ಮೂರನೇ ನ್ಯಾಯಾಧೀಶರ ಮುಂದೆ ವರ್ಗಾಯಿಸಲಾಗಿದೆ. ಅಂತಿಮ ತೀರ್ಪು ಅವರ ನಿರ್ಧಾರಕ್ಕೆ ಅವಲಂಬಿತವಾಗಿದೆ.
ಇಲಾಖಾ ವಿಚಾರಣೆಯಿಂದಾಗಿ ಅಲೋಕ್ ಕುಮಾರ್ ಅವರ ಮುಂಬಡ್ತಿ (Promotion) ಕೂಡಾ ಬಾಕಿ ಉಳಿದಿದೆ. ಇಲಾಖಾ ವಿಚಾರಣೆ ಪೂರ್ಣಗೊಳ್ಳದೆ ಇರುವ ಕಾರಣ, ಅವರ ಸೇವಾ ಪ್ರಗತಿ ಸ್ಥಗಿತಗೊಂಡಿದೆ.
ಪ್ರಸ್ತುತ ಮಧ್ಯಂತರ ತಡೆಯಾಜ್ಞೆ ಮುಂದುವರಿದಿದ್ದು, ಇಲಾಖಾ ತನಿಖೆ ತಾತ್ಕಾಲಿಕವಾಗಿ ನಿಂತಿದೆ. ಪ್ರಕರಣವನ್ನು ಈಗ ಮೂರನೇ ನ್ಯಾಯಾಧೀಶರು ಪರಿಶೀಲಿಸಲಿದ್ದು, ಅಂತಿಮ ತೀರ್ಪು ಹೊರಬರುವವರೆಗೆ ನಿರೀಕ್ಷೆಯಾಗಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿದೆ.
ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಅವರು 2019ರ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ಎದುರಿಸುತ್ತಿದ್ದಾರೆ, ಈ ಪ್ರಕರಣದಲ್ಲಿ ಸಿಬಿಐ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಸಿಬಿಐ ವಿಚಾರಣೆ ನಂತರ ಅವರನ್ನು ವರ್ಗಾವಣೆ ಮಾಡಲಾಗಿತ್ತು. 2019ರಲ್ಲಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಫೋನ್ ಕದ್ದಾಲಿಕೆ ನಡೆದಿದೆ ಎಂಬ ಆರೋಪಗಳು ಕೇಳಿ ಬಂತು. ಈ ಪ್ರಕರಣದಲ್ಲಿ ಪ್ರಮುಖ ವ್ಯಕ್ತಿಗಳ ಫೋನ್ ಕದ್ದಾಲಿಕೆ ಮತ್ತು ಸಂಭಾಷಣೆಗಳ ಮಾಹಿತಿ ಸೋರಿಕೆ ನಡೆದಿತ್ತು ಎಂದು ಆರೋಪಿಸಲಾಗಿದೆ. ಸಿಬಿಐ ವಿಚಾರಣೆ ನಂತರ ಅಲೋಕ್ ಕುಮಾರ್‌ರನ್ನು ಹುದ್ದೆಯಿಂದ ವರ್ಗಾವಣೆ ಮಾಡಲಾಗಿತ್ತು. ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ದೂರವಾಣಿ ಕದ್ದಾಲಿಕೆಯಲ್ಲಿ ಅಂದಿನ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರ ಹೆಸರು ಕೇಳಿಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ