ಬಿಬಿಎಂಪಿ ನಿರ್ಗಮಿತ ಸದಸ್ಯರಿಗೆ ಅದ್ಧೂರಿ ಬೀಳ್ಕೊಡುಗೆ: ಐಫೋನ್‌ ಗಿಫ್ಟ್‌!

By Kannadaprabha NewsFirst Published Sep 16, 2020, 9:08 AM IST
Highlights

ಅಧಿಕಾರಿಗಳಿಂದ ಮಾಜಿ ಕಾರ್ಪೊರೇಟರ್‌ಗಳಿ ಐಷಾರಾಮಿ ಹೋಟೆಲ್‌ನಲ್ಲಿ ಭರ್ಜರಿ ಸೆಂಡಾಫ್‌| ಸುಮಾರು 10ಕ್ಕೂ ಅಧಿಕ ಮಾಜಿ ಸದಸ್ಯರಿಗೆ ಸನ್ಮಾನ ಉಡುಗೊರೆ| ಉಡುಗೊರೆ ನೀಡುವುದಕ್ಕೆ ಬಳಕೆ ಮಾಡಿದ 15 ಲಕ್ಷಕ್ಕೂ ಅಧಿಕ ಹಣ ಎಲ್ಲಿಂದ ಬಂತು ಎಂಬುದು ಯಕ್ಷಪ್ರಶ್ನೆ| 

ಬೆಂಗಳೂರು(ಸೆ.16): ಅಧಿಕಾರ ಅವಧಿ ಪೂರ್ಣಗೊಳಿಸಿದ ಬಿಬಿಎಂಪಿ ಸದಸ್ಯರಿಗೆ ಪಾಲಿಕೆಯ ಅಧಿಕಾರಿಯೊಬ್ಬರು ಅದ್ಧೂರಿ ಕಾರ್ಯಕ್ರಮ ಆಯೋಜಿಸಿ, ಭಾರೀ ಉಡುಗೊರೆ ನೀಡಿ ಬೀಳ್ಕೊಡುಗೆ ನೀಡಿದ ಘಟನೆ ಯಲಹಂಕ ವಲಯದಲ್ಲಿ ನಡೆದಿದೆ.

ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಅಶೋಕ್‌ ಅವರು ತಮ್ಮ ವಲಯದ ವ್ಯಾಪ್ತಿಯ 11 ವಾರ್ಡ್‌ನ ಮಾಜಿ ಪಾಲಿಕೆ ಸದಸ್ಯರಿಗೆ ಕಳೆದ ಶುಕ್ರವಾರ ಅದ್ಧೂರಿ ಬೀಳ್ಕೊಡುಗೆ ನೀಡಿದ್ದಾರೆ.

ಯಲಹಂಕದ ಐಷರಾಮಿ ಹೋಟಲ್‌ ಒಂದರಲ್ಲಿ ಬೀಳ್ಕೋಡಿಗೆ ಸಮಾರಂಭ ನಡೆಸಲಾಗಿದೆ. ಈ ಸಮಾರಂಭದಲ್ಲಿ ಕೆಂಪೇಗೌಡ ವಾರ್ಡ್‌ನ ಮಾಜಿ ಸದಸ್ಯೆ ಚಂದ್ರಮ್ಮ ಕೆಂಪೇಗೌಡ, ಚೌಡೇಶ್ವರಿ ವಾರ್ಡ್‌ನ ಆರ್‌.ಪದ್ಮಾವತಿ ಅಮರನಾಥ್‌, ಅಟ್ಟೂರು ವಾರ್ಡ್‌ನ ನೇತ್ರಪಲ್ಲವಿ, ಯಲಹಂಕ ಉಪನಗರ ವಾರ್ಡ್‌ನ ಎಂ.ಸತೀಶ್‌, ಕುವೆಂಪುನಗರ ವಾರ್ಡ್‌ನ ಪಾರ್ತಿಬ ರಾಜನ್‌, ಕೊಡಿಗೆಹಳ್ಳಿ ವಾರ್ಡ್‌ನ ಕೆ.ಎಂ.ಚೇತನ್‌, ವಿದ್ಯಾರಣ್ಯಪುರ ವಾರ್ಡ್‌ನ ಎಚ್‌.ಕುಸುಮ, ದೊಡ್ಡಬೊಮ್ಮಸಂದ್ರ ವಾರ್ಡ್‌ನ ಜಯಲಕ್ಷ್ಮಮ್ಮ ಪಿಳ್ಳಪ್ಪ, ಥಣಿಸಂದ್ರ ವಾರ್ಡ್‌ನ ಕೆ.ಎಂ. ಮಮತಾ ಸೇರಿದಂತೆ ನಾಮ ನಿರ್ದೇಶಿತ ಮಾಜಿ ಸದಸ್ಯರಿಗೆ ವಲಯ ವಲಯದ ಜಂಟಿ ಆಯುಕ್ತ ಡಾ. ಅಶೋಕ್‌, ಮುಖ್ಯ ಎಂಜಿನಿಯರ್‌ ರಂಗನಾಥ ಸೇರಿದಂತೆ ಇಡೀ ವಲಯದ ಅಧಿಕಾರಿ ಸಿಬ್ಬಂದಿ ಶಾಲು, ಹಾರ, ಸ್ಮರಣಿಕೆ ಹಾಗೂ 90 ಸಾವಿರ ರು. ನಿಂದ 1 ಲಕ್ಷ ರು. ಮೊತ್ತದ ಐ ಫೋನ್‌ ಉಡುಗೊರೆ ನೀಡಿ ಸನ್ಮಾನಿಸಿದ್ದಾರೆ.

ಬೆಂಗಳೂರಿನ ಅರ್ಧದಷ್ಟು ವಾರ್ಡ್‌ಗಳಲ್ಲಿ ಇನ್ನೂ ಆಗ್ತಿಲ್ಲ ಕಸ ವಿಂಗಡನೆ

ಸಮಾರಂಭದ ಆದೇಶವಿಲ್ಲ:

ಅವಧಿ ಮುಕ್ತಾಯಗೊಂಡ ಸದಸ್ಯರಿಗೆ ಬೀಳ್ಕೊಡಿಗೆ ಸಮಾರಂಭ ನಡೆಸುವ ಬಗ್ಗೆ ಬಿಬಿಎಂಪಿ ಆಯುಕ್ತರು ಅಥವಾ ಆಡಳಿತಾಧಿಕಾರಿ ಯಾವುದೇ ಆದೇಶ ಮಾಡಿಲ್ಲ. ಆದರೂ ಯಲಹಂಕ ವಲಯದ ಜಂಟಿ ಆಯುಕ್ತರೇ ಮುಂದೆ ನಿಂತು ಬೀಳ್ಕೊಡುಗೆ ಸಮಾರಂಭ ಮಾಡಿದ್ದಾರೆ.

ಭಾರೀ ಉಡುಗೊರೆಗೆ ಹಣ ಎಲ್ಲಿಂದ ಬಂತು?

ಸುಮಾರು 10ಕ್ಕೂ ಅಧಿಕ ಮಾಜಿ ಸದಸ್ಯರಿಗೆ ಸನ್ಮಾನ ಉಡುಗೊರೆ ನೀಡಲಾಗಿದೆ. ಉಡುಗೊರೆ ನೀಡುವುದಕ್ಕೆ ಬಳಕೆ ಮಾಡಿದ 15 ಲಕ್ಷಕ್ಕೂ ಅಧಿಕ ಹಣ ಎಲ್ಲಿಂದ ಬಂತು ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

ಗುತ್ತಿಗೆದಾರರು ಆಯೋಜಿಸಿದ್ದ ಸಮಾರಂಭ

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಯಲಹಂಕ ವಲಯದ ಜಂಟಿ ಆಯುಕ್ತ ಡಾ. ಅಶೋಕ್‌, ಪಾಲಿಕೆ ಮಾಜಿ ಸದಸ್ಯರಿಗೆ ಸನ್ಮಾನ ಸಮಾರಂಭವನ್ನು ಗುತ್ತಿಗೆದಾರರು ಆಯೋಜನೆ ಮಾಡಿದ್ದರು. ಆ ಸಮಾರಂಭಕ್ಕೆ ಅಧಿಕಾರಿ- ಸಿಬ್ಬಂದಿಯನ್ನು ಆಹ್ವಾನಿಸಿದ್ದರು. ಹಾಗಾಗಿ, ಹೋಗಿದ್ದೆವು ಅಷ್ಟೇ. ಅಧಿಕಾರಿಗಳಿಂದ ಸದಸ್ಯರಿಗೆ ಸನ್ಮಾನ, ಉಡುಗೊರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಸನ್ಮಾನ ಸ್ವೀಕರಿಸಿದ ಸದಸ್ಯರು ಮಾತ್ರ ಜಂಟಿ ಆಯುಕ್ತರು ಪ್ರೀತಿಯಿಂದ ಸಮಾರಂಭ ಮಾಡಿ ಸನ್ಮಾನಿಸಿದ್ದಾರೆ. ಜಂಟಿ ಆಯುಕ್ತರು ಮತ್ತು ಅಧಿಕಾರಿಗಳೇ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದು ಎನ್ನುತ್ತಾರೆ.
 

click me!