ನಿವೃತ್ತ ಅಧಿಕಾರಿ ನೇತೃತ್ವದಲ್ಲಿ ಅರ್ಜುನ ಸಾವಿನ ತನಿಖೆ: ಸಚಿವ ಈಶ್ವರ ಖಂಡ್ರೆ

By Kannadaprabha NewsFirst Published Dec 11, 2023, 8:38 PM IST
Highlights

ಅರ್ಜುನ ಸಾವಿನ ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ನಿವೃತ್ತ ಅಧಿಕಾರಿ ನೇತೃತ್ವದ ತನಿಖಾ ಸಮಿತಿ ರಚಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. 

ಸಕಲೇಶಪುರ (ಡಿ.11): ಅರ್ಜುನ ಸಾವಿನ ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ನಿವೃತ್ತ ಅಧಿಕಾರಿ ನೇತೃತ್ವದ ತನಿಖಾ ಸಮಿತಿ ರಚಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ಅರ್ಜುನ ಆನೆ ಮೃತಪಟ್ಟ ತಾಲೂಕಿನ ಯಸಳೂರು ಹೋಬಳಿಯ ದಬ್ಬಳ್ಳಿಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ, ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ಒಂದೇ ವಾರದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಹಿನ್ನೆಲೆ ಕಾಡಾನೆ ಸೆರೆಗೆ ಒತ್ತಾಯ ಕೇಳಿ ಬಂದಿತು. ಆದ್ದರಿಂದ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ನ.೨೪ ರಿಂದ ಆರಂಬಿಸಲಾಗಿತ್ತು. 

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅಗತ್ಯವಿರುವ ಎಲ್ಲ ಪೂರ್ವ ತಯಾರಿಗಳನ್ನು ನಡೆಸಲಾಗಿದೆ. ಆದರೂ ಅರ್ಜುನನ ಸಾವು ತೀವ್ರ ನೋವು ತಂದಿದೆ. ಅರ್ಜುನ ಆನೆ ಅಂತ್ಯಸಂಸ್ಕಾರದ ವೇಳೆ ಬಾಹ್ಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಎಲ್ಲೂ ಗುಂಡು ತಗುಲಿರುವ ಗುರುತು ಪತ್ತೆಯಾಗಿಲ್ಲ. ಆದರೂ ಅರ್ಜುನ ಆನೆ ಸಾವಿನ ಬಗ್ಗೆ ಹಲವು ಅನುಮಾನ ಹಾಗೂ ಅಪಸ್ವರಗಳು ಎದ್ದಿರುವುದರಿಂದ ಈಗಾಗಲೇ ರಚನೆಯಾಗಿರುವ ತನಿಖಾ ಸಮಿತಿ ಸದಸ್ಯರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ವರದಿ ಬಂದ ನಂತರ ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಖಂಡಿತವಾಗಿಯೂ ಆಗಲಿದೆ ಎಂದರು.

ಕೊಬ್ಬರಿಗೆ ಬೆಂಬಲ ಬೆಲೆಗಾಗಿ ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ: ಎಚ್‌ಡಿಕೆ

ಕಾಡಾನೆ ಸೆರೆ ಕಾರ್ಯಾಚರಣೆಗಾಗಿ ಅರವಳಿಕೆ ತಜ್ಞರಿಗೆ ಸರ್ಕಾರದಿಂದ ತರಬೇತಿ ನೀಡಲಾಗುವುದು. ಮುಂದಿನ ಕಾಡಾನೆ ಸೆರೆ ಕಾರ್ಯಾಚರಣೆಗೆ ದಿನಾಂಕವನ್ನು ಅಧಿಕಾರಿಗಳು ಹಾಗೂ ತಜ್ಞರ ಸಮ್ಮುಖದಲ್ಲಿ ಚರ್ಚಿಸಿದ ನಂತರ ಪ್ರಕಟಿಸಲಾಗುವುದು. ಈ ವೇಳೆ ದ್ರೋಣ ಆನೆಯ ಬಳಕೆಯ ಬಗ್ಗೆ ಚಿಂತಿಸಲಾಗುತ್ತಿದೆ. ೬೫ ವರ್ಷ ಮೆಲ್ಪಟ್ಟ ಆನೆಗಳನ್ನು ಕಾರ್ಯಾಚರಣೆಯಲ್ಲಿ ಬಳಸದಂತೆ ಕೇಂದ್ರ ಸರ್ಕಾರದ ನಿಯಮವಿದೆ. ಆದರೆ, ನನ್ನ ವೈಯಕ್ತಿಕ ಅಭಿಪ್ರಾಯದಂತೆ ೬೦ ವರ್ಷ ಮೇಲ್ಪಟ್ಟ ಆನೆಗಳನ್ನು ಕಾರ್ಯಾಚರಣೆಗೆ ಇಳಿಸದಿರುವುದು ಸೂಕ್ತ ಎಂದರು.

ಉಡುಪಿ ಶ್ರೀಕೃಷ್ಣನ ನೈವೇದ್ಯಕ್ಕೆ ಶುದ್ಧ ಸಾವಯವ ಭತ್ತ ಅಭಿಯಾನ!

ಅರ್ಜುನ ಮೃತಪಟ್ಟ ದಬ್ಬಳ್ಳಿ ಕಟ್ಟೆಯಲ್ಲಿ ಸ್ಮಾರಕ ನಿರ್ಮಿಸುವ ಮೂಲಕ ಅರ್ಜುನ ಆನೆಯ ಶೌರ್ಯವನ್ನು ಅಲ್ಲಿ ಕೆತ್ತಿಸಲಾಗುವುದು ಎಂದರು. ಈ ವೇಳೆ ಸಿಸಿಎಫ್ ರವಿಶಂಕರ್ಜಿ, ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿ ಮಹಮ್ಮದ್ ಸುಜೀತಾ, ಡಿಎಫ್‌ಒ ಮೋಹನ್‌ಕುಮಾರ್ ಉಪಸ್ಥಿತರಿದ್ದರು. ಅರ್ಜುನ ಆನೆ ಮೃತಪಟ್ಟ ದಬ್ಬಳ್ಳಿ ಕಟ್ಟೆ ಪ್ರದೇಶಕ್ಕೆ ಅರಣ್ಯಸಚಿವ ಈಶ್ವರಖಂಡ್ರೆ ಭೇಟಿ ನೀಡಿ ಪೂಜೆಸಲ್ಲಿಸಿದ್ದರು.ಸಿಸಿಎಫ್ ರವಿಶಂಕರ್ಜಿ, ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿ ಮಹಮ್ಮದ್ ಸುಜೀತಾ, ಡಿಎಫ್‌ಒ ಮೋಹನ್‌ಕುಮಾರ್ ಉಪಸ್ಥಿತರಿದ್ದರು.

click me!