ಇನ್ವೆಸ್ಟ್‌ ಕರ್ನಾಟಕ: 72000 ಕೋಟಿ ರೂ ಹೂಡಿಕೆ ಒಪ್ಪಂದ!

By Kannadaprabha News  |  First Published Feb 15, 2020, 8:21 AM IST

ಇನ್ವೆಸ್ಟ್‌ ಕರ್ನಾಟಕ: 72000 ಕೋಟಿ ರೂ ಹೂಡಿಕೆ ಒಪ್ಪಂದ! ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಮೊದಲ ಇನ್ವೆಸ್ಟ್‌ ಕರ್ನಾಟಕ ಸಮಾವೇಶ, 51 ಕಂಪನಿಗಳಿಂದ ಹೂಡಿಕೆ ಒಪ್ಪಂದ | ಒಟ್ಟು 90 ಸಾವಿರ ಉದ್ಯೋಗ ಸೃಷ್ಟಿನಿರೀಕ್ಷೆ , ರಾಜೇಶ್‌ ಎಕ್ಸ್‌ಪೋರ್ಟ್‌ ಸಂಸ್ಥೆಯೊಂದರಿಂದಲೇ 50 ಸಾವಿರ ಕೋಟಿ ರೂ ಹೂಡಿಕೆ


ಹುಬ್ಬಳ್ಳಿ (ಫೆ. 15): ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಶುಕ್ರವಾರ ಇಲ್ಲಿ ನಡೆದ ಒಂದು ದಿನದ ‘ಇನ್ವೆಸ್ಟ್‌ ಕರ್ನಾಟಕ- ಹುಬ್ಬಳ್ಳಿ-2020’ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಉದ್ಯಮಿಗಳಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದ್ದು, ಬರೊಬ್ಬರಿ 72 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಒಲವು ತೋರಿದ್ದಾರೆ.

ಸಮಾವೇಶದ ಉದ್ಘಾಟನಾ ಸಮಾರಂಭದಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬೃಹತ್‌ ಕೈಗಾರಿಕೆ ಸಚಿವ ಜಗದಿಶ್‌ ಶೆಟ್ಟರ್‌ ಸಮ್ಮುಖದಲ್ಲಿ ಸರ್ಕಾರ ಮತ್ತು 51 ಕಂಪನಿಗಳ ಮಧ್ಯೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಲಾಗಿದೆ.

Latest Videos

undefined

ಈ ಕಂಪನಿಗಳು ಒಟ್ಟು .72 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿ, 90 ಸಾವಿರ ಜನರಿಗೆ ಉದ್ಯೋಗ ನೀಡುವ ವಾಗ್ದಾನ ಮಾಡಿವೆ. ವಿದ್ಯುತ್‌ ಚಾಲಿತ ವಾಹನಗಳ ತಯಾರಿಕಾ ಘಟಕ ಸ್ಥಾಪನೆಗಾಗಿ ಬೆಂಗಳೂರು ಮೂಲದ ರಾಜೇಶ್‌ ಎಕ್ಸ್‌ಪೋರ್ಟ್‌ವೊಂದೇ 50 ಸಾವಿರ ಕೋಟಿ ಹೂಡಲು ಆಸಕ್ತಿ ತೋರಿದೆ.

Invest Karnataka 2020: ಉತ್ತರಕ್ಕೆ ಹರಿಯುವುದೇ ಬಂಡವಾಳ?

ಅಮೆರಿಕ, ಕೆನಡಾ ಮತ್ತಿತರ ದೇಶಗಳು ಮತ್ತು ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಿಂದ 1000 ಕ್ಕೂ ಹೆಚ್ಚು ಉದ್ಯಮಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

ಸಮಾವೇಶದಲ್ಲೇ 51 ಕಂಪನಿಗಳು ಹೂಡಿಕೆ ಮಾಡಿದ್ದು, ಉಳಿದವರು ಸ್ಥಳ ಇತ್ಯಾದಿಗಳ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಿದ್ದಾರೆ. ಭಾಗವಹಿಸಿದವರಲ್ಲೂ ಅನೇಕರು ರಾಜ್ಯದಲ್ಲಿ ಹೂಡಿಕೆ ಮಾಡುವ ಆಸಕ್ತಿ ತೋರ್ಪಡಿಸಿದ್ದಾರೆ.

ಉತ್ತರಕ್ಕಷ್ಟೇ ಸೀಮಿತ ಅಲ್ಲ!:

ಈ ಹಿಂದೆ ಕೈಗಾರಿಕೆ ಅಂದರೆ ಬೆಂಗಳೂರಿಗಷ್ಟೇ ಸೀಮಿತವಾಗಿದ್ದವು. ಇದರಿಂದಾಗಿ ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳು ಬಾರದೆ ನಿರುದ್ಯೋಗ ತಾಂಡವಾಡುತ್ತಿತ್ತು. ಈ ನಿಟ್ಟಿನಲ್ಲಿ ಇಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆ, ಪ್ರಾದೇಶಿಕ ಅಸಮಾನತೆ ನಿವಾರಣೆ ಪ್ರಯತ್ನದ ಭಾಗವಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಈ ಇನ್ವೆಸ್ಟ್‌ ಕರ್ನಾಟಕ-ಹುಬ್ಬಳ್ಳಿ ಸಮಾವೇಶವನ್ನು ಮುತುವರ್ಜಿ ವಹಿಸಿ ಆಯೋಜಿಸಿದ್ದರು.

ಬೆಂಗಳೂರಿನಿಂದ ಇದೇ ಮೊದಲ ಬಾರಿಗೆ ನಡೆದ ಈ ಸಮಾವೇಶ ಕೇವಲ ‘ಉತ್ತರ ಕರ್ನಾಟಕದ ಸಮಾವೇಶ’ ಎಂದೇ ಬಿಂಬಿತವಾಗಿತ್ತು. ಆದರೆ ತುಮಕೂರು, ಚಿತ್ರದುರ್ಗ, ಹಾಸನ ಜಿಲ್ಲೆಗಳಲ್ಲೂ ಉದ್ಯಮ ಸ್ಥಾಪಿಸಲು ಕೆಲ ಕಂಪನಿಗಳು ಮುಂದೆ ಬಂದು ಒಡಂಬಡಿಕೆ ಮಾಡಿಕೊಂಡಿದ್ದು ವಿಶೇಷ.

ಒಂದೇ ಕಂಪನಿಯಿಂದ 50 ಸಾವಿರ ಕೋಟಿ!:

ಸಮಾವೇಶದಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ರಾಜೇಶ್‌ ಎಕ್ಸ್‌ಪೋರ್ಟ್‌ ಸಂಸ್ಥೆ 50 ಸಾವಿರ ಕೋಟಿ ರೂ. ಬಂಡವಾಳ ಹೂಡಿ ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದಿರುವುದು ವಿಶೇಷ. ವಿದ್ಯುತ್‌ ಚಾಲಿತ ವಾಹನಗಳ ತಯಾರಿಕಾ ಘಟಕ ಆರಂಭಿಸುವ ಉದ್ದೇಶ ಈ ಕಂಪನಿಗಿದೆ. ಈ ಮೂಲಕ 10 ಸಾವಿರ ಜನರಿಗೆ ಉದ್ಯೋಗ ಲಭಿಸುವ ನಿರೀಕ್ಷೆ ಇದೆ.

ಇದನ್ನು ಹೊರತುಪಡಿಸಿದರೆ, ಸೋನಾಲಿ ಪವರ್‌ ಪ್ರೈವೇಟ್‌ ಲಿಮಿಟೆಡ್‌ .4,800 ಕೋಟಿ, ನ್ಯಾಟಕ್ಯಾಪ್‌ ಪವರ್‌ ಪ್ರೈವೇಟ್‌ ಲಿಮಿಟೆಡ್‌ .3 ಸಾವಿರ ಕೋಟಿ, ಜೆಟ್‌ವಿಂಗ್ಸ್‌ ಏರೋಸ್ಪೇಸ್‌ ಆ್ಯಂಡ್‌ ಏವಿಯೇಷನ್‌ .2060 ಕೋಟಿ, ಅಯಾನಾ ರಿನ್ಯುವೇಬಲ್‌ ಪವರ್‌ ಪ್ರೈವೇಟ್‌ ಲಿಮಿಟೆಡ್‌ .3 ಸಾವಿರ ಕೋಟಿ, ಲುಕ್ಸೋರ್‌ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ .1200 ಕೋಟಿ, ಕೆಎಲ್‌ಇ .600 ಕೋಟಿ ಸೇರಿದಂತೆ ಭಾಗಿರಥ ಕೆಮಿಕಲ್ಸ್‌, ಎಚ್‌ಪಿಸಿ, ಐಒಸಿ, ಪವರ್‌ ರಿನ್ಯೂ, ದೊಡ್ಲಾ, ಗುಜರಾತ್‌ನ ಅಂಬುಜಾ ಹೀಗೆ 51 ಕಂಪನಿಗಳು ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿವೆ.

ಯಾವ್ಯಾವ ಜಿಲ್ಲೆಗೆ ಎಷ್ಟೆಷ್ಟು?:

ಜಿಲ್ಲಾವಾರು ನೋಡುವುದಾದರೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಯಾದಗಿರಿ ಜಿಲ್ಲೆಗಳು ಬಂಡವಾಳ ಹೂಡಿಕೆಯಲ್ಲಿ ಬಂಪರ್‌ ಹೊಡೆದಿವೆ. ಅತಿ ಹೆಚ್ಚು ಅಂದರೆ 17 ಉದ್ಯಮಿಗಳು ಧಾರವಾಡ ಜಿಲ್ಲೆಯಲ್ಲಿ ತಮ್ಮ ಉದ್ಯಮ ಪ್ರಾರಂಭಿಸಲು ಮುಂದೆ ಬಂದಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ 12 ಉದ್ಯಮಗಳ ಸ್ಥಾಪನೆಗೆ ಒಡಂಬಡಿಕೆ ಆಗಿದೆ. ಮೂರನೆಯ ಸ್ಥಾನ ಹೈದ್ರಾಬಾದ್‌ ಕರ್ನಾಟಕದ ಯಾದಗಿರಿ ಜಿಲ್ಲೆಯ ಕಡೆಚೂರು ಪಡೆದಿದೆ.

ಇಲ್ಲಿ 11 ಕೈಗಾರಿಕೆಗಳ ಪ್ರಾರಂಭಕ್ಕೆ ಒಪ್ಪಂದವಾಗಿದೆ. ಇನ್ನುಳಿದಂತೆ ವಿಜಯಪುರ, ದಾವಣಗೆರೆಗಳಲ್ಲಿ ತಲಾ ಒಂದು, ಹಾವೇರಿ, ಬೀದರ್‌ ಜಿಲ್ಲೆಗಳಲ್ಲಿ ತಲಾ 2 ಕೈಗಾರಿಕೆಗಳ ಸ್ಥಾಪನೆಗೆ ಕಂಪನಿಗಳು ಮುಂದಾಗಿವೆ. ಇನ್ನು ಈ ಸಮಾವೇಶದಲ್ಲಿ ಹಾಸನ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ತಲಾ 1, ಚಿತ್ರದುರ್ಗದಲ್ಲಿ 2 ಕೈಗಾರಿಕೆಗಳ ಪ್ರಾರಂಭಕ್ಕೆ ಒಡಂಬಡಿಕೆಯಾಗಿದೆ. ಈ ಮೂಲಕ ಸಮಾವೇಶ ಬರೀ ಉತ್ತರ ಕರ್ನಾಟಕಕ್ಕಷ್ಟೇ ಸೀಮಿತವಾಗಿರಲಿಲ್ಲ ಎಂಬುದನ್ನು ಸಾಬೀತು ಪಡಿಸಿತು.

ಸಮ್ಮೇಳನ ಮಾಡಿ ಸುಮ್ಮನಿರೋಲ್ಲ: ಈ ನಡುವೆ ಸಮಾವೇಶದ ಸಮಾರೋಪದ ಬಳಿಕ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಮಾಧ್ಯಮಗಳೊಂದಿಗೆ ಮಾತನಾಡಿ, ಸಮಾವೇಶಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಇಷ್ಟೊಂದು ಯಶಸ್ವಿಯಾಗುತ್ತೆ ಎಂಬ ನಿರೀಕ್ಷೆಯೂ ಇರಲಿಲ್ಲ. ಆದರೆ ಸರ್ಕಾರದ ನಿರೀಕ್ಷೆಗೂ ಮೀರಿ ಬಂಡವಾಳ ಹರಿದು ಬಂದಿದೆ. .72 ಸಾವಿರ ಕೋಟಿ ಹೂಡಿಕೆಯ ಒಪ್ಪಂದವಾಗಿದೆ.

ಈಗ ಒಪ್ಪಂದ ಮಾಡಿಕೊಂಡಿರುವ ಎಲ್ಲ ಕೈಗಾರಿಕೆಗಳನ್ನು ತಂದೇ ತರುತ್ತವೆ ಎಂದೇನೂ ಹೇಳುವುದಿಲ್ಲ. ಆದರೆ ಒಡಂಬಡಿಕೆ ಆಗಿರುವ ಶೇ.80ರಷ್ಟುಉದ್ಯಮಗಳನ್ನಾದರೂ ತಂದೇ ತೀರುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮಾಡುತ್ತೇವೆ. ಈ ಕೈಗಾರಿಕೆ ಬರಲು ಫಾಲೋಆಪ್‌ ಮುಖ್ಯ. ಆ ಹಿನ್ನೆಲೆಯಲ್ಲಿ ಈ ಕಾರ್ಯವನ್ನು ನಿರಂತರವಾಗಿ ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಪ್ರತಿವಿಭಾಗ ಮಟ್ಟದಲ್ಲಿ ಸಮಾವೇಶ

ಈ ಸಮಾವೇಶಕ್ಕೆ ಸಿಕ್ಕಿರುವ ಯಶಸ್ಸಿನಿಂದ ಉತ್ತೇಜನಗೊಂಡಿರುವ ಸಚಿವ ಜಗದೀಶ್‌ ಶೆಟ್ಟರ್‌ ಅವರು ಮುಂದಿನ ದಿನಗಳಲ್ಲಿ ಪ್ರತಿ ವಿಭಾಗ ಮಟ್ಟದಲ್ಲಿ ಇನ್ವೆಸ್ಟ್‌ ಕರ್ನಾಟಕ ಸಮಾವೇಶ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಟೈರ್‌-2 ಹಾಗೂ ಟೈರ್‌-3 ನಗರಗಳಿಗೆ ಕೈಗಾರಿಕೆಗಳನ್ನು ತರುವ ಪ್ರಯತ್ನ ಈ ಮೂಲಕ ಮುಂದುವರಿಯಲಿದೆ. ಇದರೊಂದಿಗೆ ಹೊಸ ಕೈಗಾರಿಕಾ ನೀತಿಯಲ್ಲೂ ಈ ವಿಷಯ ಪ್ರಸ್ತಾಪವಾಗಲಿದೆ. ಹಿಂದೆ ಎಂದೂ ಮಾಡದ ಸಾಹಸ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದೇನೆ. ಅದನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.

ಟಾಪ್‌ 5 ಹೂಡಿಕೆ ಒಪ್ಪಂದಗಳು

ಯಾವ್ಯಾವ ಕಂಪನಿಗಳು? ಎಷ್ಟುಹೂಡಿಕೆ? ಎಲ್ಲಿ ಹೂಡಿಕೆ?

1 ರಾಜೇಶ್‌ ಎಕ್ಸ್‌ಪೋರ್ಟ್‌ 50,000 ಕೋಟಿ ಧಾರವಾಡ

2 ಸೋನಾಲಿ ಪವರ್‌ ಪ್ರೈವೆಟ್‌ ಲಿ. 4,800 ಕೋಟಿ ದಾವಣಗೆರೆ

3 ನ್ಯಾಟಕ್ಯಾಪ್‌ ಪವರ್‌ ಪ್ರೈವೇಟ್‌ ಲಿ. 3000 ಕೋಟಿ ಹುಬ್ಬಳ್ಳಿ

4 ಅಯಾನಾ ರಿನ್ಯುವೆಬಲ್‌ ಪವರ್‌ ಪ್ರೈವೇಟ್‌ ಲಿ. 3000 ಕೋಟಿ ಧಾರವಾಡ

5 ಜೆಟ್‌ವಿಂಗ್ಸ್‌ ಏರೋಸ್ಪೇಸ್‌ ಆ್ಯಂಡ್‌ ಏವಿಯೇಷನ್‌ 2060 ಕೋಟಿ ಧಾರವಾಡ

ಒಟ್ಟು ಎಷ್ಟು ಕಂಪನಿಗಳಿಂದ ಒಪ್ಪಂದ? - 51

ಸಮಾವೇಶದಲ್ಲಿ ಎಷ್ಟುಉದ್ಯಮಿಗಳು ಭಾಗಿ?- 1000

ಧಾರವಾಡದಲ್ಲಿ ಆಸಕ್ತಿ ತೋರಿರುವ ಉದ್ಯಮಗಳೆಷ್ಟು?- 17

ಎಲ್ಲೆಲ್ಲಿ ಬಂಡವಾಳ ಹೂಡಿಕೆ?

ಜಿಲ್ಲೆ - ಎಷ್ಟುಕೈಗಾರಿಕೆ

ಹುಬ್ಬಳ್ಳಿ-ಧಾರವಾಡ- 17

ಬೆಳಗಾವಿ- 12

ಯಾದಗಿರಿ- 11

ಹಾವೇರಿ- 2

ಬೀದರ್‌-2

ಚಿತ್ರದುರ್ಗ-2

ವಿಜಯಪುರ-1

ದಾವಣಗೆರೆ-1

ಹಾಸನ-1

ತುಮಕೂರು-1

ಮೈಸೂರು-1

click me!