Delimitation 2026: ಕ್ಷೇತ್ರ ಮರುವಿಂಗಡಣೇಲಿ ದಕ್ಷಿಣ ಭಾರತಕ್ಕೆ ಅನ್ಯಾಯವೇ? ಕಾಂಗ್ರೆಸ್‌ ವಾದವೇ ಪೂರ್ವಾಗ್ರಹಪೀಡಿತ!

Kannadaprabha News   | Kannada Prabha
Published : Apr 17, 2026, 05:29 AM IST
Delimitation 2026

ಸಾರಾಂಶ

'ನಾರಿ ಶಕ್ತಿ ವಂದನ್ ಅಧಿನಿಯಮ'ದ ಜೊತೆಗೆ ಲೋಕಸಭೆ ಹಾಗೂ ವಿಧಾನಸಭೆಗಳ ಸದಸ್ಯಬಲ ಹೆಚ್ಚಳದ ಪ್ರಸ್ತಾಪವು ಚರ್ಚೆಯಲ್ಲಿದೆ. 1971ರ ಜನಗಣತಿಯ ಆಧಾರದ ಮೇಲೆ ಇಂದಿರಾ ಗಾಂಧಿಯವರಿಂದ ಸ್ಥಗಿತಗೊಂಡಿದ್ದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ವಿಕಾಸ್ ಪುತ್ತೂರು, ಬಿಜೆಪಿ ಮುಖಂಡರು, ‘ಸಂವಿಧಾನ ಬದಲಾಯಿಸಿದ್ದು ಯಾರು’ ಕೃತಿ ಲೇಖಕ

ಸಂಸತ್ತಿನ ಕಲಾಪವು ಇದೀಗ ಹೆಚ್ಚುವರಿಯಾಗಿ ಪ್ರಾರಂಭವಾಗಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಶೇ.33 ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿ ‘ನಾರಿ ಶಕ್ತಿ ವಂದನ್ ಅಧಿನಿಯಮ’ಕ್ಕೆ ತಿದ್ದುಪಡಿ ತರುವುದು ಹಾಗೂ ಉಭಯ ಸದನಗಳ ಸಂಖ್ಯಾಬಲವನ್ನು ಹೆಚ್ಚಿಸುವ ಕಾನೂನು ರೂಪಿಸುವುದು ಈ ಅಧಿವೇಶನದ ಉದ್ದೇಶ ಎಂಬುದು ಮಂಡನೆಯಾದ ಪ್ರಸ್ತಾವನೆಗಳಿಂದ ದೇಶದ ಗಮನಕ್ಕೆ ಬಂದಿದೆ.

ಪ್ರಧಾನಿ ಮೋದಿ ಅವರೂ ತಮ್ಮ ಭಾಷಣದಲ್ಲಿ, ‘ಸದನದ ಸಂಖ್ಯಾಬಲ ವೃದ್ಧಿಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ’ ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಪ್ರಧಾನಿಗಳ ಈ ಹೇಳಿಕೆಯ ಬೆನ್ನಲ್ಲೇ ಪೂರ್ವಾಗ್ರಹಪೂರಿತ ಪ್ರತಿಕ್ರಿಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದಿಯಾಗಿ ಪ್ರತಿಪಕ್ಷಗಳು ಸಾಲುಸಾಲಾಗಿ ನೀಡಿರುವುದು ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಂಬೇಡ್ಕರ್‌ ಅವರು ರೂಪಿಸಿದ್ದ ಸೂತ್ರ

ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತದ ಜನಸಂಖ್ಯೆ ಸುಮಾರು 40 ಕೋಟಿಯಷ್ಟು ಇರಬಹುದೆಂಬ ಲೆಕ್ಕಾಚಾರದಲ್ಲಿ ಹಾಗೂ ಮುಂದುವರಿದ ರಾಷ್ಟ್ರಗಳು ತಮ್ಮ ಸದನಗಳ ಸದಸ್ಯಬಲ ನಿಶ್ಚಯಿಸಲು ಅನುಸರಿಸುತ್ತಿದ್ದ ‘ಜನಸಂಖ್ಯೆ-ಜನಪ್ರತಿನಿಧಿಗಳ ಅನುಪಾತ’ವನ್ನು ಆಧರಿಸಿ ಬಾಬಾಸಾಹೇಬರು 1949ರ ಮೇ 19 ಹಾಗೂ ಜೂ.3ರಂದು ನಡೆದ ಸಂವಿಧಾನ ರಚನಾ ಸಭೆಯಲ್ಲಿ ಒಂದು ಸೂತ್ರವನ್ನು ಅಂತಿಮಗೊಳಿಸಿದರು. ಅದರಂತೆ ಕನಿಷ್ಠ 5 ಲಕ್ಷ ಹಾಗೂ ಗರಿಷ್ಠ 7.5 ಲಕ್ಷ ಜನರಿಗೊಬ್ಬರಂತೆ ಲೋಕಸಭಾ ಸದಸ್ಯರು ಆಯ್ಕೆಯಾಗುವ ಹಾಗೆ ಹಾಗೂ ಅದಕ್ಕನುಗುಣವಾಗಿಯೇ ಲೋಕಸಭೆಯ ಒಟ್ಟು ಸದಸ್ಯಬಲ 500 ಮೀರದಂತೆ ಅನುಚ್ಛೇದ 81ರ ಅಡಿಯಲ್ಲಿ ನೀತಿ ರೂಪಿಸಲಾಯಿತು. ಹಾಗೆಯೇ ಪ್ರತಿ 75 ಸಾವಿರ ಜನರಿಗೊಬ್ಬರು ವಿಧಾನಸಭಾ ಸದಸ್ಯರು ಆಯ್ಕೆಯಾಗುವಂತೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿಯೂ ಕನಿಷ್ಠ 60 ಹಾಗೂ ಗರಿಷ್ಠ 500 ಸದಸ್ಯ ಬಲವಿರುವಂತೆ ಅನುಚ್ಛೇದ 170ರ ಅಡಿಯಲ್ಲಿ ನೀತಿ ನಿರೂಪಿಸಲಾಯಿತು. ಅಷ್ಟೇ ಅಲ್ಲದೆ, ಪ್ರತಿ ದಶವಾರ್ಷಿಕ ಜನಗಣತಿಯ ಬಳಿಕ ಲೋಕಸಭೆ ಹಾಗೂ ವಿಧಾನಸಭೆಗಳ ಕ್ಷೇತ್ರ ಮರುವಿಂಗಡಣೆಯ ಕಾರ್ಯವನ್ನು ಕಡ್ಡಾಯವಾಗಿ ಜರುಗಿಸಬೇಕೆಂಬ ನಿಯಮವನ್ನೂ ಬಾಬಾಸಾಹೇಬರು ರೂಪಿಸಿದ್ದರು.

ಇಂದಿರಾ ಗಾಂಧಿ ಮಾಡಿದ್ದು ಏನು?

ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ನಿಗದಿಪಡಿಸಲಾಗಿದ್ದ ಜನಸಂಖ್ಯೆಯ ಕೆಳಮಿತಿ ಹಾಗೂ ಮೇಲು ಮಿತಿಯನ್ನು 1952 ಹಾಗೂ 1956ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ತೆಗೆದುಹಾಕಲಾಯಿತು. ನೆಹರೂ ಕಾಲದ ಈ ತಿದ್ದುಪಡಿಗಳಿಂದ ಮತಕ್ಷೇತ್ರಗಳಿಗೆ ಜನಸಂಖ್ಯೆಯ ಇತಿ-ಮಿತಿ ಇಲ್ಲದಂತಾಯಿತಾದರೂ, ಕ್ಷೇತ್ರ ಮರುವಿಂಗಡಣೆಯ ಕಾರ್ಯ ಮಾತ್ರ ಬಾಬಾಸಾಹೇಬರು ನಿಗದಿಪಡಿಸಿದಂತೆಯೇ ಪ್ರತಿ ದಶವಾರ್ಷಿಕ ಜನಗಣತಿಯ ಬಳಿಕ ಜರುಗುತ್ತಿತ್ತು. 1961ರ ಜನಗಣತಿಯ ಆಧಾರದ ಮೇಲೆ 1963ರಲ್ಲಿ ಜರುಗಿದ ಎರಡನೇ ಮರುವಿಂಗಡಣೆಯಂತೆ ಲೋಕಸಭೆಗೆ 522 ಕ್ಷೇತ್ರಗಳು ಹಾಗೂ ಕರ್ನಾಟಕ ವಿಧಾನಸಭೆಗೆ 216 ಕ್ಷೇತ್ರಗಳೆಂದು ನಿಶ್ಚಯವಾದವು. ಮುಂದೆ 1971ರ ಜನಗಣತಿ ಆಧಾರದ ಮೇಲೆ 1973ರಲ್ಲಿ ಜರುಗಿದ ಮೂರನೇ ವಿಂಗಡಣೆಯಂತೆ ಲೋಕಸಭಾ ಕ್ಷೇತ್ರಗಳು 543ಕ್ಕೆ ವೃದ್ಧಿಯಾದರೆ, ಕರ್ನಾಟಕ ವಿಧಾನಸಭೆಗೆ 224 ಕ್ಷೇತ್ರಗಳೆಂದು ನಿಶ್ಚಯವಾದವು. ಅದೇ ಕೊನೆ. ಸದನದ ಸದಸ್ಯಬಲವು ಅಷ್ಟಕ್ಕೇ ಸಿಲುಕಿಕೊಂಡು ಇಂದಿಗೂ ಸ್ತಬ್ಧವಾಗಿದೆ!

ದೇಶದ ಮೇಲೆ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ ಹಲವು ಬಾರಿ ಸಂವಿಧಾನದ ಮೇಲೆ ಪ್ರಹಾರ ಮಾಡಿದ ಇಂದಿರಾ ಗಾಂಧಿಯವರು, ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಕ್ಷೇತ್ರ ಮರುವಿಂಗಡಣೆಯನ್ನೂ ಸ್ತಬ್ಧಗೊಳಿಸಿದರು. ಕ್ಷೇತ್ರ ಮರುವಿಂಗಡಣೆಯನ್ನು ಮುಂದಿನ 25 ವರ್ಷಗಳ ಕಾಲ, ಅಂದರೆ 2000ನೇ ಇಸವಿಯವರೆಗೂ ಮಾಡಬಾರದೆಂದೂ ಆನಂತರದ ಮರುವಿಂಗಡಣೆಯನ್ನು 2000ನೇ ಇಸವಿಯ ನಂತರ ಕೈಗೊಳ್ಳುವ ಮೊದಲ ಜನಗಣತಿಯ ಆಧಾರದ ಮೇಲೆ ಮಾಡಬೇಕೆಂದೂ ನಿಯಮ ರೂಪಿಸಲಾಯಿತು. ಅಲ್ಲಿಯವರೆಗೂ 1971ರ ಜನಗಣತಿಯ ಆಧಾರದಲ್ಲಿರುವ ಕ್ಷೇತ್ರ ವಿಂಗಡಣೆಯನ್ನೇ ಅನುಸರಿಸುವಂತೆ ಅನುಚ್ಛೇದ 81 ಹಾಗೂ 170 ಅನ್ನು ಬದಲಿಸಲಾಯಿತು.

2001ರಲ್ಲಿ ಸಹಜ ಪರಿಷ್ಕರಣೆಗೆ ಬಂದ ಈ ವಿಧೇಯಕವನ್ನು ಬಾಬಾಸಾಹೇಬರ ಆಶಯದ ಮೂಲಸ್ವರೂಪಕ್ಕೆ ಹಿಂದಿರುಗಿಸಲು ಅಂದಿನ ಬಿಜೆಪಿ ಸರ್ಕಾರಕ್ಕೆ ಸಹಮತ ಸಿಗಲಿಲ್ಲ. ಪ್ರಾದೇಶಿಕ ಪಕ್ಷಗಳ ಬೆಂಬಲದ ಮೇಲೆ ಅವಲಂಬಿತವಾಗಿದ್ದ ಸರ್ಕಾರವು, ಒಲ್ಲದ ಮನಸ್ಸಿನಿಂದ ಅವರ ಆಗ್ರಹಕ್ಕೆ ಮಣಿದು ಕ್ಷೇತ್ರ ಮರುವಿಂಗಡಣೆಯನ್ನು ಯಥಾವತ್ತಾಗಿ ಮುಂದಿನ 25 ವರ್ಷಗಳ ಕಾಲ, ಅಂದರೆ 2026ರವರೆಗೆ ಅನಿವಾರ್ಯವಾಗಿ ಮುಂದೂಡಿತು.

ಕಾಂಗ್ರೆಸ್ ವಾದ ಮತ್ತು ವಾಸ್ತವ

ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆಯಾಗುವುದರಿಂದ, ಜನಸಂಖ್ಯೆಯನ್ನು ನಿಯಂತ್ರಿಸುತ್ತಿರುವ ದಕ್ಷಿಣದ ರಾಜ್ಯಗಳಿಗಿಂತ ಉಳಿದ ರಾಜ್ಯಗಳಿಗೆ ಲೋಕಸಭೆಯಲ್ಲಿ ಪ್ರಾತಿನಿಧ್ಯ ಹೆಚ್ಚು ದೊರೆಯಲಿದೆ ಆ ಕಾರಣಕ್ಕಾಗಿ ಕ್ಷೇತ್ರ ವಿಂಗಡಣೆಯನ್ನೇ ಸ್ಥಗಿತಗೊಳಿಸಬೇಕೆಂಬ ವಾದವನ್ನು ಐದು ದಶಕಗಳ ಕಾಲ ಕಾಂಗ್ರೆಸ್ ಪ್ರತಿಪಾದಿಸಿದೆ. ಈ ವಾದವನ್ನು ಇದೀಗ ಕಾಂಗ್ರೆಸ್ ಕೊಂಚ ಬದಲಿಸಿದಂತಿದೆ. ‘ದಕ್ಷಿಣದ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಏರಿಕೆಯಾಗಬಾರದೆಂದಲ್ಲ, ಆದರೆ ಅದು ಹೇಗೆ ಏರಿಕೆಯಾಗಲಿದೆ ಎಂಬುದು ನಮ್ಮ ಪ್ರಶ್ನೆ’ ಎಂದು ಸಿದ್ದರಾಮಯ್ಯನವರು ಕೇಳಿದ್ದಾರೆ.

ಸಿದ್ದರಾಮಯ್ಯನವರ ಈ ಪ್ರಶ್ನೆಯನ್ನು ಗಾಢವಾಗಿ ಅಧ್ಯಯನ ಮಾಡಿದಾಗ, ‘ಕ್ಷೇತ್ರಗಳನ್ನು ಹೆಚ್ಚಿಸುವುದಕ್ಕೆ’ ಅವರಿಗೆ ಮತ್ತು ಕಾಂಗ್ರೆಸ್‌ಗೆ ಮೊದಲಿದ್ದ ಆಕ್ಷೇಪ ಈಗ ಇಲ್ಲದಿರುವ ಸಕಾರಾತ್ಮಕ ಅಂಶ ಗೋಚರವಾಗುತ್ತದೆ.

ಎಲ್ಲಾ ರಾಜ್ಯಗಳಲ್ಲಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಲಿದೆ ಅದರಿಂದ ಬಿಜೆಪಿ ಆಡಳಿತವಿರುವ ಯು.ಪಿ., ಬಿಹಾರ, ಎಂ.ಪಿ., ರಾಜಸ್ಥಾನ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಲಾಭವಾಗಲಿದೆ ಎಂಬುದು ಅವರ ತಕರಾರು. ಕರ್ನಾಟಕ, ಕೇರಳ, ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಒಟ್ಟು 129 ಲೋಕಸಭಾ ಕ್ಷೇತ್ರಗಳಿದ್ದು, ಈ ಪ್ರಸ್ತಾವನೆಯಿಂದ ಸುಮಾರು 66 ಕ್ಷೇತ್ರಗಳು ಮಾತ್ರ ವೃದ್ಧಿಯಾಗಲಿವೆ ಇದನ್ನು ಭಾರತದ ಇತರ ರಾಜ್ಯಗಳಿಗೆ ತುಲನೆ ಮಾಡಿದಾಗ ಈ ಹೆಚ್ಚಳ ಕಡಿಮೆ ಮತ್ತು ದಕ್ಷಿಣದ ರಾಜ್ಯಗಳ ಒಟ್ಟು ಕ್ಷೇತ್ರಗಳ ಪ್ರಮಾಣ ಕೇವಲ ಶೇ.24ರಷ್ಟು ಮಾತ್ರ ಉಳಿಯಲಿದೆ ಎಂದು ಅವರು ವಾದಿಸುತ್ತಿದ್ದಾರೆ.

ದಕ್ಷಿಣಕ್ಕೆ ಅನ್ಯಾಯವಾದಂತೆ ಕಾಣುವುದಿಲ್ಲ

ಕ್ಷೇತ್ರ ವಿಂಗಡಣೆಯ ಮಾನದಂಡಗಳನ್ನಾಗಲಿ ಅಥವಾ ಅವುಗಳ ಏರಿಕೆಯ ಪ್ರಮಾಣದ ಬಗ್ಗೆಯಾಗಲಿ ಕೇಂದ್ರ ಸರ್ಕಾರ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಹೀಗಿದ್ದರೂ ಸಿದ್ದರಾಮಯ್ಯನವರು ಕೆಲವು ಅಂಕಿ-ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳನ್ನೇ ಆಧಾರವಾಗಿಟ್ಟು ನೋಡಿದರೂ ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವಂತೆ ಕಾಣುವುದಿಲ್ಲ. ಭಾರತದ ದಕ್ಷಿಣದ ರಾಜ್ಯಗಳನ್ನು ಒಂದು ವಿಭಾಗದಂತೆ ಹಾಗೂ ಇನ್ನುಳಿದ ಸಂಪೂರ್ಣ ಭಾರತವನ್ನು ಮತ್ತೊಂದು ವಿಭಾಗದಂತೆ ನೋಡುವುದು ಪೂರ್ವಾಗ್ರಹ ಪೀಡಿತವಾಗುತ್ತದೆ.

ಭೌಗೋಳಿಕ ಹಾಗೂ ಆಡಳಿತಾತ್ಮಕ ದೃಷ್ಟಿಕೋನದಿಂದ ನೋಡಿದಾಗ ಭಾರತದಲ್ಲಿ ಕನಿಷ್ಠ ಐದು ವಿಭಾಗಗಳು ಕಂಡುಬರುತ್ತವೆ. ಕನ್ನಡಿಗರಾದ ನಮ್ಮನ್ನು ಉತ್ತರಭಾಗದವರು ಎಂದು ಯಾರಾದರೂ ಕರೆದಾಗ ನಮಗೆ ಹೇಗೆ ಒಪ್ಪಲು ಸಾಧ್ಯವಿಲ್ಲವೋ, ಅದೇ ರೀತಿ ಪಶ್ಚಿಮ, ಪೂರ್ವ ಮತ್ತು ಮಧ್ಯ ಭಾಗದ ಭಾರತೀಯರು ಕೂಡ ತಮ್ಮನ್ನು ‘ಉತ್ತರ ಭಾಗದವರು’ ಎಂದು ಕರೆಸಿಕೊಳ್ಳಲು ಒಪ್ಪಲಾರರು. ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ನಮ್ಮದಲ್ಲದ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಹಾಕುವ ಮೂಲಕ ಸಿದ್ದರಾಮಯ್ಯನವರು ದೇಶದ ಒಕ್ಕೂಟ ವ್ಯವಸ್ಥೆಯ ಸಾರಕ್ಕೆ ಧಕ್ಕೆ ತರುತ್ತಿದ್ದಾರೆಯೇ?

ಜನರ ದಾರಿ ತಪ್ಪಿಸಿದಂತಾಗುವುದಿಲ್ಲವೇ

ಅಂದಹಾಗೆ 5 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳು ಭಾರತದ ದಕ್ಷಿಣಕ್ಕಿದ್ದು, ಅವು ಶೇ.24ರಷ್ಟು ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ. ಹಾಗೆಯೇ 6 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳು ಭಾರತದ ಉತ್ತರಕ್ಕಿದ್ದು, ಅವು ಶೇ.23ರಷ್ಟು ಕ್ಷೇತ್ರಗಳನ್ನು ಹೊಂದಿವೆ. ಭಾರತದ ಮಧ್ಯಭಾಗ, ಪಶ್ಚಿಮ ಹಾಗೂ ಪೂರ್ವಗಳು ಕ್ರಮವಾಗಿ 5, 4 ಹಾಗೂ 9 ರಾಜ್ಯಗಳನ್ನು ಮತ್ತು ಶೇ.18, 13 ಹಾಗೂ 22ರಷ್ಟು ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ.

ಸಿದ್ದರಾಮಯ್ಯ ಅವರು ಹೇಳಿರುವ ಪ್ರಸ್ತಾವಿತ ಅಂಕಿ-ಅಂಶಗಳನ್ನು ಆಧರಿಸಿದರೂ, ಪ್ರಸ್ತುತವಿರುವ ಪ್ರಮಾಣದಲ್ಲಿಯೇ ಕ್ಷೇತ್ರಗಳ ಸಂಖ್ಯೆ ವೃದ್ಧಿಯಾಗಲಿದ್ದು, ದಕ್ಷಿಣದ ಪಾಲಿಗೆ ನ್ಯಾಯಯುತ ಪ್ರಾತಿನಿಧ್ಯ ಸಿಗಲಿದೆ. ಹೀಗಿರುವಾಗ ದಕ್ಷಿಣಕ್ಕೆ ಅನ್ಯಾಯವಾಗಲಿದೆ ಎನ್ನುವುದು ಜನರ ಹಾದಿ ತಪ್ಪಿಸಿದಂತಾಗುವುದಿಲ್ಲವೇ?

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿಯೂ ಕಾಂಗ್ರೆಸ್‌ಗೆ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲವೆಂಬುದನ್ನು ಅರಿತಿರುವ ಸಿದ್ದರಾಮಯ್ಯನವರು, ಈ ಮೂಲಕ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ. ಜನಬೆಂಬಲ ಸಿಗದ ಕಾರಣಕ್ಕೆ ಜನಪ್ರಾತಿನಿಧ್ಯವನ್ನೇ ಕುಂಠಿತಗೊಳಿಸುವುದು ಸೂಕ್ತವೆಂಬ ಕಾಂಗ್ರೆಸ್‌ನ ಈ ಒಳಸಂಚು ಲೋಕತಂತ್ರ ಮತ್ತು ಸಂವಿಧಾನದ ಆಶಯಗಳನ್ನು ಅಣಕಿಸುವಂತಿದೆ.

ಕಲಾಪ ಪ್ರಕ್ರಿಯೆ

ಸದನದಲ್ಲಿ ಕೇಂದ್ರ ಸರ್ಕಾರ ಮಂಡಸಿರುವ ನಾರಿಶಕ್ತಿ ವಂದನ ಅಧಿನಿಯಮವನ್ನು ಒಪ್ಪಲೇ ಬೇಕಾದ ನೈತಿಕ ಅನಿವಾರ್ಯತೆ ಪ್ರತಿಪಕ್ಷಗಳಿಗಿರುವುದರಿಂದ ಅದು ಜಾರಿಯಾಗುವುದು ಬಹುತೇಕ ನಿಶ್ಚಿತ. ಇದಾದ ಬಳಿಕ ಮುಂಬರುವ ಎಲ್ಲ ವಿಧಾನಸಭೆ ಹಾಗು ಲೋಕಸಭೆಯ ಚುನಾವಣೆಯಲ್ಲಿ ಶೇ.33ರಷ್ಟು ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗುತ್ತದೆ. ಕ್ಷೇತ್ರ ಮರುವಿಂಗಡಣೆಯ ಕುರಿತ ವಿಧೇಯಕವೂ ಸಾಂವಿಧಾನಕ ಅನಿವಾರ್ಯತೆಯಾಗಿರುವ ಕಾರಣ ಇದರ ಬೆನ್ನಲ್ಲೇ ಮಂಡನೆಯಾಗಿದೆ. ಇದರ ಕುರಿತು ಕೇಂದ್ರ ಸರ್ಕಾರದ ಪ್ರಸ್ತಾವನೆಗಿಂತಲೂ ಉತ್ತಮವಾದ ಪ್ರಸ್ತಾವನೆಯನ್ನು ಕಾಂಗ್ರೆಸ್ ಹೊಂದಿದ್ದ ಪಕ್ಷದಲ್ಲಿ, ಸದನದಲ್ಲಿ ಅದನ್ನು ಮಂಡಿಸಿ, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬದ್ಧತೆ ಪ್ರದರ್ಶಿಸಲಿ. ಲೋಕತಂತ್ರಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಿ. ಅದಲ್ಲದೆ ಅವರು ತಮ್ಮ ಎಂದಿನ ಪರಿಪಾಠವನ್ನೇ ಈ ಬಾರಿಯೂ ಮುಂದುವರಿಸಿದರೆ ಬಾಬಾಸಾಹೇಬರ ಆಶಯಗಳಿಗೆ ಅವರು ಮಾಡುವ ಮಹಾಪಚಾರವಾಗಲಿದೆಯೇ ಹೊರತು ಕ್ಷೇತ್ರ ಮರುವಿಂಗಡನೆಯ ಪ್ರಕ್ರಿಯೆಗೆ ಹಿನ್ನಡೆಯಾಗದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

SSLC ತೃತೀಯ ಭಾಷಾ ಪರೀಕ್ಷೆಗೆ ಗ್ರೇಡಿಂಗ್‌ ಪದ್ಧತಿ ಜಾರಿಗೆ ಹೈಕೋರ್ಟ್‌ ತಡೆ; ಹಲವು ಮಕ್ಕಳಿಗೆ ಹಿಂದಿ ಫೇಲ್‌ ಆಗುವ ಆತಂಕ!
ಇನ್ನೂ 1 ವರ್ಷ ಸಲೀಂ ರಾಜ್ಯ ಪೊಲೀಸ್ ಬಾಸ್‌- ಡಿಜಿ-ಐಜಿ ಅಧಿಕಾರಾವಧಿ 1 ವರ್ಷ ವಿಸ್ತರಿಸಿ ಸರ್ಕಾರದಿಂದ ಆದೇಶ