ಹೆರಿಗೆಯಾದ ಬಳಿಕ 6 ದಿನ ಬಾಣಂತಿ, ಮಗು ಮನೆಯ ಹೊರಕ್ಕೆ| ಮುಟ್ಟಾದವರೂ ಆರು ದಿನ ಮನೆಯ ಹೊರಗೆಯೇ ಇರಬೇಕು| ಕೊಪ್ಪಳದ ಓಣಿಯಲ್ಲಿ ಇನ್ನೂ ಚಾಲ್ತಿಯಲ್ಲಿದೆ ಮೌಢ್ಯದ ಪರಾಕಾಷ್ಠೆ
-ಸೋಮರಡ್ಡಿ ಅಳವಂಡಿ
ಕೊಪ್ಪಳ[ಫೆ.07]: ಬಾಣಂತಿ ತನ್ನ ಹಸಿಗೂಸಿನೊಂದಿಗೆ ಮೈಲಿಗೆ ತೀರುವ ತನಕ ಮನೆಯ ಅಂಗಳದಲ್ಲೇ ಇರಬೇಕು. ಮುಟ್ಟಾದವರೂ ಅಷ್ಟೇ, ವಾರದ ಕಾಲ ಮನೆಯಿಂದ ಆಚೆ ಇರಬೇಕು. ಬಿಸಿಲು, ಮಳೆ, ಚಳಿ ಇದ್ದರೂ ಮನೆಯ ಒಳಗೆ ಪ್ರವೇಶವಿಲ್ಲ. ಇವರಿಗೆ ಆಹಾರ, ನೀರನ್ನು ಬಿಸಾಕುವ ರೀತಿಯಲ್ಲಿ ನೀಡಲಾಗುತ್ತದೆ. ಇನ್ನೂ ಅಮಾನವೀಯವಾದ ಪದ್ಧತಿ ಇಂದಿಗೂ ಇರುವುದು ಬೆಳಕಿಗೆ ಬಂದಿದೆ. ಹುಟ್ಟಿದ ಮೂರು ದಿನದೊಳಗೆ ಹಸಿಗೂಸಿನ ತಲೆ ಬೋಳಿಸಿ ದೇವರಿಗೆ ಮುಡಿ ನೀಡಲಾಗಿದೆ!
undefined
ಈ ಅನಾಗರಿಕ, ಅಮಾನವೀಯ ಪದ್ಧತಿ ಜಾರಿಯಲ್ಲಿರುವುದು ಯಾವುದೋ ಕುಗ್ರಾಮ, ಅಥವಾ ನಾಗರಿಕತೆಯ ಪರಿಚಯವೇ ಇಲ್ಲದ ಹಾಡಿಯಲ್ಲಲ್ಲ. ಜಿಲ್ಲಾ ಕೇಂದ್ರ ಕೊಪ್ಪಳದ ಬಡಾವಣೆಯಲ್ಲಿ. 21ನೇ ಶತಮಾನದಲ್ಲೂ ಜಾರಿಯಲ್ಲಿರುವ ಇಂತಹ ಮೌಢ್ಯದ ಪರಾಕಾಷ್ಠೆಗೆ ನಲುಗಿದ ಹಸುಗೂಸೊಂದು ಇತ್ತೀಚಿಗೆ ಪ್ರಾಣ ತೆತ್ತಿದೆ.
ಬದುಕು ಅಮಾನವೀಯ:
ಹರಿಣ ಶಿಕಾರಿಗಳು ಅಥವಾ ಹಕ್ಕಿಪಿಕ್ಕಿಗಳು ಎನ್ನುವ ಜನಾಂಗ ಕೊಪ್ಪಳ ನಗರದ ಅಂಬೇಡ್ಕರ್ ನಗರದ ಬಳಿ ಇರುವ ಸಜ್ಜಿ ಹೊಲದ ಓಣಿಯ ಗುಡಿಸಲಿನಲ್ಲಿ ವಾಸವಾಗಿದ್ದಾರೆ. 45-50 ಗುಡಿಸಲುಗಳಿದ್ದು, 200ರಿಂದ 250 ಜನರು ವಾಸಿಸುತ್ತಿದ್ದಾರೆ. ಇವರು ಮೊದಲು ಶಿಕಾರಿ ಮಾಡುತ್ತಿದ್ದರಂತೆ. ಈಗ ಅದನ್ನು ಬಿಟ್ಟು ಅದೆಷ್ಟೋ ವರ್ಷವಾಗಿದ್ದು, ಬಹುತೇಕರು ಅವಿದ್ಯಾವಂತರು. ಪ್ರಾಥಮಿಕ ಶಿಕ್ಷಣಕ್ಕಿಂತ ಹೆಚ್ಚು ಓದಿದವರು ಯಾರೂ ಇಲ್ಲ. ಎಲ್ಲಿಯಾದರೂ ಬೇಟೆಯಾಡಿದ್ದು, ಕಳ್ಳತನ ಮಾಡಿದ್ದು ಗೊತ್ತಾದರೆ ಮೊದಲು ಪೊಲೀಸರು ಇವರನ್ನೇ ಹಿಡಿದುಕೊಂಡು ಹೋಗಿ ವಿಚಾರಿಸುತ್ತಾರೆ. ಇದರಿಂದ ಕೆಲ ಯುವಕರು ಕುಟುಂಬದ ಜೊತೆ ವಾಸಿಸದೇ ದುಡಿಯಲು ಗುಳೆ ಹೋಗುತ್ತಾರೆ. ಮನೆಯಲ್ಲಿ ವಯಸ್ಸಾದವರು, ಮಹಿಳೆಯರು ಮಕ್ಕಳು ಮಾತ್ರ ಇರುತ್ತಾರೆ. ಇವರಲ್ಲಿ ಮೌಢ್ಯ, ಅನಿಷ್ಟಆಚರಣೆ, ಅಮಾನವೀಯ ಬದುಕು ಎಡೆಯಿಲ್ಲದೇ ನಡೆಯುತ್ತಿದೆ.
ಇದೇ ಹರಿಣ ಶಿಕಾರಿಗಳಲ್ಲಿ ಬಾಣಂತಿ ಮತ್ತು ಹಸಿಗೂಸನ್ನು ಮನೆಯಿಂದ ಹೊರಗೆ ಹಾಕಲಾಗುತ್ತದೆ. ಐದಾರು ದಿನಗಳ ಬಳಿಕವಷ್ಟೇ ಅವರಿಗೆ ಗುಡಿಸಲಿನೊಳಗೆ ಪ್ರವೇಶ. ಈ ಸಂದರ್ಭದಲ್ಲಿ ಯಾರೂ ಅವರನ್ನು ಮುಟ್ಟಿಸಿಕೊಳ್ಳುವುದಿಲ್ಲ. ಆಹಾರವನ್ನೂ ಸರಿಯಾಗಿ ನೀಡುವುದಿಲ್ಲ. ಎತ್ತರದಿಂದಲೇ ಒಂದು ತಟ್ಟೆಗೆ ಅನ್ನ ಮತ್ತು ನೀರನ್ನು ಸುರಿಯಲಾಗುತ್ತದೆ. ಬಳಿಕ ಬಾಣಂತಿಯೇ ಬಟ್ಟೆಯನ್ನು ದೂರ ಎಸೆದು ಬಂದು ಮೇಲೆ ಮನೆಯೊಳಗೆ ಕರೆದುಕೊಳ್ಳುತ್ತಾರೆ. ಆಸ್ಪತ್ರೆಗೂ ಕರೆದೊಯ್ಯುವುದಿಲ್ಲ. ಇನ್ನು ಮುಟ್ಟಾ(ಋುತುಮತಿ)ದವರನ್ನು ಹೀಗೆಯೇ ಕಾಣುತ್ತಾರೆ. ಐದು ದಿನವಾದ ಮೇಲೆ ಹೊರಗೆ ಸ್ನಾನ ಮಾಡಿಯೇ ಒಳಗೆ ಬರಬೇಕು.
ದೇವರ ಶಾಪ ತಟ್ಟುವುದೆಂಬ ನಂಬಿಕೆ:
ಹೀಗೆ ಆಚರಣೆ ಮಾಡದಿದ್ದರೆ ಅವರ ದೇವರು ಶಾಪ ಹಾಕುತ್ತದೆಯಂತೆ ಎನ್ನುವ ನಂಬಿಕೆ ಬಲವಾಗಿ ಬೇರೂರಿದೆ. ಇದರಿಂದ ಆಚೆ ಬರದೇ ಇಂದಿಗೂ ಅದನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ಗೌರಮ್ಮ ಎಂಬ ಮಹಿಳೆ ಐದು ಹೆರಿಗೆಯಾಗಿ ಆರನೇ ಮಗುವಿಗೂ ಇತ್ತೀಚಿಗೆ ಜನ್ಮ ನೀಡಿದ್ದಾಳೆ. ರಕ್ತ ಹೀನತೆಯಿಂದ ಬಳಲುತ್ತಿದ್ದ ಆಕೆ ಹೆರಿಗೆ ವೇಳೆ ವಿಪರೀತ ನೋವು ಅನುಭವಿಸಿದ್ದರೂ ಯಾರೂ ಅವಳ ನೆರವಿಗೆ ಬಂದಿಲ್ಲ. ಕೊನೆಗೆ ಮನೆಯಂಗಳದಲ್ಲಿ ಹೆರಿಗೆಯಾಗಿದೆ. ಮೂರನೇ ದಿನಕ್ಕೆ ಮಗುವಿನ ತಲೆ ಬೋಳಿಸಲಾಗಿದೆ. ಆಸ್ಪತ್ರೆಗೂ ಕರೆದೊಯ್ಯದೇ ದೇವರ ಮುಡಿಗೆ ಹಾಕಿ, ಪೂಜೆ ಮಾಡಲಾಗಿದೆ. ಇದರಿಂದ ಮಗು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದೆ. ಆದರೂ ಅವರಲ್ಲಿ ಪಶ್ಚಾತ್ತಾಪವಿಲ್ಲ. ತಮ್ಮ ದೇವರು ಸಿಟ್ಟಾಗಿ ಮಗುವನ್ನು ಕರೆದೊಯ್ದಿದ್ದಾನೆ ಎಂಬ ಭಾವನೆ ಅವರಲ್ಲಿದೆ.
ಹಕ್ಕಿಪಿಕ್ಕಿ ಜನಾಂಗದಲ್ಲಿ ಸ್ವತಃ ಪಾಲಕರೇ ಮಕ್ಕಳನ್ನು ಭಿಕ್ಷಾಟನೆಗೆ ದೂಡುತ್ತಿದ್ದಾರೆ. ಜೋಪಡಿಗಳಲ್ಲಿ ಸ್ನಾನಗೃಹವೇ ಇಲ್ಲ. ಮಹಿಳೆಯರೂ ಸೇರಿದಂತೆ ಎಲ್ಲರೂ ಬೀದಿಯಲ್ಲಿಯೇ ಸ್ನಾನ ಮಾಡುತ್ತಾರೆ. ಬಯಲಲ್ಲೇ ಶೌಚಾಲಯ. ತೀರಾ ಹೀನಾಯ ಬದುಕು ಇವರದ್ದು.