ಬೆಂಗಳೂರಲ್ಲಿ ಕಸ ವಿಲೇವಾರಿಗೆ ‘ಇಂದೋರ್‌ ಮಾದರಿ’

By Kannadaprabha NewsFirst Published Aug 26, 2020, 7:59 AM IST
Highlights

ಕಸ ವಿಲೇವಾರಿ ವಿಚಾರದಲ್ಲಿ ಇಂದೋರ್‌ ಮಾದರಿ ಅಳವಡಿಸಿಕೊಳ್ಳಲು ತೀರ್ಮಾನ| 4ನೇ ವರ್ಷವೂ ಇಂದೋರ್‌ಗೆ ಸ್ವಚ್ಛ ನಗರ ಸ್ಥಾನ ಹಿನ್ನೆಲೆ| ಬೆಂಗಳೂರು ನಗರದಲ್ಲೂ ಅಳವಡಿಕೆಗೆ ನಿರ್ಧಾರ| 

ಬೆಂಗಳೂರು(ಆ.26):  ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ಮುಂದಾಗಿದ್ದ ಇಂದೋರ್‌ ಮಾದರಿ ಕಸ ಸಂಗ್ರಹ ಯೋಜನೆ ಬಹುತೇಕ ಕೈಬಿಟ್ಟಿದ್ದರೂ ಕಸ ವಿಲೇವಾರಿ ವಿಚಾರದಲ್ಲಿ ಇಂದೋರ್‌ನಲ್ಲಿ ಅಳವಡಿಸಿರುವ ವ್ಯವಸ್ಥೆಯನ್ನು ನಗರದಲ್ಲಿ ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಸ್ವಚ್ಛ ಸರ್ವೇಕ್ಷಣದಲ್ಲಿ ಸತತ ನಾಲ್ಕನೇ ವರ್ಷ ಇಂದೋರ್‌ ನಗರಕ್ಕೆ ಅತ್ಯಂತ ಸ್ವಚ್ಛ ನಗರ ಸ್ಥಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಸಲಹೆ-ಮಾರ್ಗದರ್ಶನಕ್ಕೆ 2 ಕೋಟಿ ಬಿಲ್‌!:

ಕಸ ಸಂಗ್ರಹ ಹಾಗೂ ಕಸ ವಿಲೇವಾರಿ ಸಂಬಂಧ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಇಂದೋರ್‌ ತಜ್ಞರ ತಂಡ 2 ಕೋಟಿ ಬಿಲ್‌ ಮಾಡಿದೆ. ಹೀಗಾಗಿ ಬಿಬಿಎಂಪಿ ಘನತ್ಯಾಜ್ಯ ವಿಭಾಗ ಈ ಬಿಲ್‌ನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಒಂದು ವೇಳೆ ಸರ್ಕಾರ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದರೆ, ನಗರದಲ್ಲಿ ಇಂದೋರ್‌ ಮಾದರಿಯ ಕಸ ವಿಲೇವಾರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಸಾಲು ಸಾಲು ಹಬ್ಬಗಳು: ಕಸ ವಿಲೇವಾರಿ ಸಿದ್ಧತೆಗೆ ಬಿಬಿಎಂಪಿ ಸೂಚನೆ

ಉತ್ತಮ ವ್ಯವಸ್ಥೆ:

ಇಂದೋರ್‌ನಲ್ಲಿ ಕಸ ವಿಲೇವಾರಿಗೆ ಅಳವಡಿಸಿಕೊಂಡಿರುವ ತಂತ್ರಜ್ಞಾನ, ಕಸ ಭೂಮಿಗೆ ಸೇರುವುದು, ಹಸಿ ಕಸ ಸಂಸ್ಕರಣಾ ಘಟಕ ಉನ್ನತೀಕರಣ, ಬಯೋ ಮಿಥನೈಸೇಷನ್‌, ಅನುಪಯುಕ್ತ ವಸ್ತುಗಳ ಪುನರ್‌ ಬಳಕೆ, ಹಸಿ ತ್ಯಾಜ್ಯ ಘಟಕಗಳ ನಿರ್ವಹಣೆ, ನಿಯಂತ್ರಣ ಕೊಠಡಿ ಸೇರಿದಂತೆ ಇಂದೋರ್‌ ಮಾದರಿ ಕಸ ವಿಲೇವಾರಿಯಲ್ಲಿ ಅಳವಡಿಸಿಕೊಂಡಿರುವ ಹಲವು ವಿಚಾರಗಳನ್ನು ಬಿಬಿಎಂಪಿಯಲ್ಲಿ ಅಳವಡಿಸಿಕೊಳ್ಳಲು ಚರ್ಚಿಸಲಾಗಿದೆ.

ತಜ್ಞರ ವಿರೋಧ

ಈ ನಡುವೆ ನಗರದ ಹಲವು ತಜ್ಞರು ಆರಂಭದಿಂದಲೂ ಇಂದೋರ್‌ ಮಾದರಿ ಕಸ ಸಂಗ್ರಹ ಹಾಗೂ ವಿಲೇವಾರಿ ವ್ಯವಸ್ಥೆಯನ್ನು ಬಿಬಿಎಂಪಿಯಲ್ಲಿ ಅಳವಡಿಸಿಕೊಳ್ಳಲು ವಿರೋಧಿಸುತ್ತಿದ್ದಾರೆ. ಏಕೆಂದರೆ, ಇಂದೋರ್‌ನಲ್ಲಿ ಉತ್ಪಾದನೆಯಾಗುವ ಕಸದ ಪ್ರಮಾಣಕ್ಕೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸದ ಪ್ರಮಾಣದ ನಡುವೆ ಬಹಳ ವ್ಯತ್ಯಾಸವಿದೆ. ಹೀಗಾಗಿ ಇಂದೋರ್‌ ಮಾದರಿ ಬೆಂಗಳೂರಿಗೆ ಸೂಕ್ತವಲ್ಲ ಎಂದು ವಾದಿಸುತ್ತಿದ್ದಾರೆ.

click me!