
ಬೆಂಗಳೂರು (ಮಾ.01): ಭಾರತದ (India) ರಸ್ತೆಗಳ ಗುಣಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಗುರಿ ಹೊಂದಿದ್ದು 2024ರೊಳಗೆ ಕರ್ನಾಟಕದ (Karnataka) ಎಲ್ಲ ರಸ್ತೆಗಳ ಗುಣಮಟ್ಟವನ್ನು ಅಮೆರಿಕ ಮಾದರಿಗೆ ಎತ್ತರಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಘೋಷಿಸಿದ್ದಾರೆ. ಬೆಳಗಾವಿ, ಹುಬ್ಬಳ್ಳಿ ಮತ್ತು ಮಂಗಳೂರುಗಳಲ್ಲಿ ಸೋಮವಾರ ಒಂದೇ ದಿನದಲ್ಲಿ ನಡೆದ ಪ್ರತ್ಯೇಕ ಸಮಾರಂಭಗಳಲ್ಲಿ ಅವರು ಒಟ್ಟಾರೆ ರಾಜ್ಯದ ವಿವಿಧೆಡೆ ನಡೆಯಲಿರುವ .19,930 ಕೋಟಿ ವೆಚ್ಚದ 46 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
2024ರ ಅಂತ್ಯದೊಳಗೆ ಕರ್ನಾಟಕದ ರಸ್ತೆಗಳನ್ನು ಅಮೆರಿಕದ ರಸ್ತೆಗಳ ಗುಣಮಟ್ಟಕ್ಕೆ ಸಮನಾಗಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ಪೂರಕವೆಂಬಂತೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ ಅವರು, ಅರಣ್ಯ ಹಾಗೂ ಪರಿಸರ ಇಲಾಖೆಗಳ ಕ್ಲಿಯರೆನ್ಸ್ ಪಡೆಯುವ ಕಾರ್ಯಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕು ಎಂದು ನುಡಿದರು.
ದೇಶದ ಅಭಿವೃದ್ಧಿಯೂ ರಸ್ತೆ ಸಂಪರ್ಕ ಜಾಲವನ್ನು ಅವಲಂಬಿಸಿದೆ. ಪ್ರತಿ ಕ್ಷೇತ್ರದ ಬೆಳವಣಿಗೆಯೂ ಆಯಾ ಮೂಲಸೌಲಭ್ಯದ ಆಧಾರದ ಮೇಲೆ ಇರುತ್ತದೆ. ರಸ್ತೆ ಸಂಪರ್ಕ ಉತ್ತಮವಾಗಿದ್ದರೆ, ಬಂಡವಾಳ ಹೂಡಿಕೆಯೂ ಹರಿದು ಬರುತ್ತದೆ. ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಈ ರೀತಿ ಪ್ರತಿ ಕ್ಷೇತ್ರದ ಅಭಿವೃದ್ಧಿಯೂ ರಸ್ತೆ ಸೇರಿದಂತೆ ಮೂಲಸೌಲಭ್ಯದ ಮೇಲೆ ಅವಲಂಬನೆಯಾಗಿರುತ್ತದೆ ಎಂದು ತಿಳಿಸಿದರು.
Hubballi Dharwad Bypass Road: ನೂರಾರು ಜೀವ ಬಲಿ ಪಡೆದ ಬೈಪಾಸ್‌ಗೆ ಮುಕ್ತಿ
ಕೇಂದ್ರ ಸಾರಿಗೆ ಇಲಾಖೆಯಲ್ಲಿ ಹಣಕಾಸಿನ ತೊಂದರೆಯಿಲ್ಲ. ಬೇಕಾದ ಯೋಜನೆಗಳನ್ನು ಕೈಗೊಂಡು ಬನ್ನಿ. ನಾವು ಮಂಜೂರಾತಿ ನೀಡುತ್ತೇವೆ ಎಂದು ಭರವಸೆ ನೀಡಿದ ಅವರು, ಉದ್ಯಮ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕದ ಯೋಜನೆಗಳನ್ನು ಮೂರು ಪ್ಯಾಕೇಜುಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.ಭಾರತಮಾಲಾ 2ರ ಯೋಜನೆಯಡಿ ಕೊಪ್ಪಳ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಅನೇಕ ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅಭಿವೃದ್ಧಿಯಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬುದೇ ನಮ್ಮ ಮೂಲಮಂತ್ರ. ಅಭಿವೃದ್ಧಿಯೊಂದೇ ನನ್ನ ಗುರಿ ಎಂದು ಹೇಳಿದರು.
ಬೆಳವಡಿ ಮಲ್ಲಮ್ಮ, ಶಿವಾಜಿ ಸಂಬಂಧ ಮರಾಠ-ಕನ್ನಡಿಗರ ಸಹೋದರತೆ ಪ್ರತೀಕ: ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಬೆಳವಡಿ ಮಲ್ಲಮ್ಮನ ನಡುವಿನ ಸಂಬಂಧ ಮರಾಠ ಮತ್ತು ಕನ್ನಡಿಗರ ಸಹೋದರತೆಗೆ ಸಾಕ್ಷಿ ಪ್ರತೀಕವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. ಇಂದು(ಸೋಮವಾರ) ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವವಿದೆ. ಆ ವೀರರಾಣಿಗೆ ನಾನು ನಮಿಸಿ, ಗೌರವ ಸಲ್ಲಿಸುತ್ತೇನೆ. ಇದೆ ವೇಳೆ ಅವರು ಮಾಜಿ ಸಚಿವ ದಿ.ಸುರೇಶ ಅಂಗಡಿ ಅವರನ್ನು ಸ್ಮರಿಸಿಕೊಂಡರು. ಈ ಕಾಮಗಾರಿಗಳಿಗೆ ಮನವಿ ಮಾಡಲು ಸುರೇಶ ಅಂಗಡಿ ಅವರನ್ನು ನನ್ನ ಬಳಿ ಬರುತ್ತಿದ್ದರು. ಆದರೆ, ಸುರೇಶ ಅಂಗಡಿ ಇಂದು ನಮ್ಮ ಜೊತೆಗಿಲ್ಲ ನೋವಿನಿಂದ ನುಡಿದರು.
ಉಭಯ ರಾಜ್ಯಗಳ ವಿವಾದ ಇತ್ಯರ್ಥಕ್ಕೆ ಸಾಧ್ಯವಾಗಲಿಲ್ಲ: ನಾನು ಕೇಂದ್ರದ ಜಲಸಂಪನ್ಮೂಲ ಸಚಿವನಾಗಿದ್ದ ವೇಳೆ ದೇಶದಲ್ಲಿ ಸುಮಾರು 20 ಅಂತಾರಾಜ್ಯ ವಿವಾದಗಳಿದ್ದವು. ಅವುಗಳಲ್ಲಿ 13 ಅನ್ನು ಇತ್ಯರ್ಥಗೊಳಿಸುವಲ್ಲಿ ಸಫಲನಾಗಿದ್ದೆ. ಆದರೆ, ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ನಡುವಿನ ವಿವಾದವನ್ನು ಇತ್ಯರ್ಥಗೊಳಿಸಲು ಸಾಧ್ಯವಾಗಲಿಲ್ಲ ಎಂದು ನಿತಿನ್ ಗಡ್ಕರಿ ಅಸಹಾಯಕತೆ ವ್ಯಕ್ತಪಡಿಸಿದರು.
Nitin Gadkari: ಇನ್ನು ಕಾರಿನ ಎಲ್ಲಾ ಮುಂಬದಿ ಮುಖ ಸೀಟಿಗೆ ಬೆಲ್ಟ್ ಕಡ್ಡಾಯ
ಜಾರಕಿಹೊಳಿ ಸಹೋದರರು ಗೈರು: ಐದು ರಾಷ್ಟ್ರೀಯ ಹೆದ್ದಾರಿಗಳ ಯೋಜನೆಗಳ ಶಂಕುಸ್ಥಾಪನೆ ಸಮಾರಂಭಕ್ಕೆ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಗೈರಾಗಿದ್ದರು. ಕೇಂದ್ರ ಸಚಿವ ನಿತಿನ ಗಡ್ಕರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದರೆ, ಜಾರಕಿಹೊಳಿ ಸಹೋದರರು ಈ ಸಮಾರಂಭದಿಂದ ದೂರ ಉಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ