ಅಪ್ಪ-ಅಮ್ಮನಿಲ್ಲದ ಎಸ್.ಎಲ್. ಭೈರಪ್ಪನವರು ಹೈಸ್ಕೂಲ್ ಓದುವಾಗಲೇ ಗೇಟ್ ಕೀಪರ್ ಕೆಲಸ ಮಾಡುತ್ತಿದ್ದರು. ಅವರ ತಮ್ಮ ಸತ್ತಾಗ ಯಾರೊಬ್ಬರೂ ಅಂತ್ಯಕ್ರಿಯೆ ನೆರವಿಗೆ ಬರಲಿಲ್ಲ. ಹಸಿದಾಗ ಯಾರೊಬ್ಬರು ಒಂದು ತುತ್ತು ಆಹಾರವನ್ನೂ ಕೊಡಲಿಲ್ಲ.
ಬೆಂಗಳೂರು (ಸೆ.10): ಕಷ್ಟ ಎನ್ನುವುದು ಯಾರಿಗೂ ಬಿಟ್ಟಿಲ್ಲ. ಕೇವಲ 15 ವರ್ಷದ ಬಾಲಕನಾಗಿದ್ದಾಗ ಹೈಸ್ಕೂಲ್ ಓದುವ ಜೊತೆಗೆ ರಾತ್ರಿ ಪಾಳಿಯಲ್ಲಿ ಸಿನಿಮಾ ಟೆಂಟ್‌ಗೆ ಗೇಟ್ ಕೀಪರ್ ಆಗಿದ್ದರು. ಒಂದು ದಿನ ಬೆಳಗ್ಗೆ ಅವರ 5 ವರ್ಷದ ತಮ್ಮ ತೀರಿಕೊಂಡ ಸುದ್ದಿ ತಿಳಿಯಿತು. ಮೊದಲೇ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದ ಬೈರಪ್ಪನ ತಮ್ಮನ ಅಂತ್ಯಕ್ರಿಯೆಗೆ ಯಾರೊಬ್ಬರೂ ನೆರವಿಗೆ ಬಂದಿರಲಿಲ್ಲ. ಕರಡಿ ಎನ್ನುವ ವ್ಯಕ್ತಿಯೊಬ್ಬರ ಸಹಾಯದಿಂದ ಅಂತ್ಯಕ್ರಿಯೆ ನೆರವೇರಿಸಿದರು. ಅಲ್ಲಿ ಹಸಿವಾಗಿದೆ ತಿನ್ನೋಣವೆಂದರೆ ಒಂದು ತುತ್ತು ಆಹಾರವೂ ಸಿಗದೇ ಪರದಾಡಿದ ಪ್ರಸಂಗವನ್ನು ಬಿಚ್ಚಿಟ್ಟಿದ್ದಾರೆ.
ಹೈಸ್ಕೂಲ್ ಮೊದಲನೇ ವರ್ಷ ಚೆನ್ನರಾಯಪಟ್ಟಣದಲ್ಲಿ ಓದ್ತಾ ಇದ್ದೆ. ಟಾಕೀಸ್ ನಲ್ಲಿ ತಿಂಗಳಿಗೆ 5 ರೂಪಾಯಿ ಸಂಬಳಕ್ಕೆ ಗೇಟ್ ಕೀಪರ್ ಕೆಲಸಾ ಮಾಡ್ತಾ ಇದ್ದೆ. ಒಂದು ಚಿಕ್ಕ ಕೋಣೆ ಬಾಡಿಗೆಗೆ ಪಡೆದಿದ್ದೆ. ಸೆಕೆಂಡ್ ಶೋ ಮುಗಿಸಿ ಮನೆಗೆ ತಲುಪಿ ಮಲಗುವಷ್ಟರಲ್ಲಿ ತಡವಾಗುತಿತ್ತು. ಅದೊಂದು ದಿನ ಬೆಳಗ್ಗೆ ಯಾರೋ ಕೋಣೆ ಬಾಗಿಲ ಬಡಿದ ಸದ್ದಾಯಿತು. ಎಲೆಕ್ಟ್ರಿಕಲ್ ಡಿಪಾರ್ಟ್ ಮೆಂಟ್ ನ ವ್ಯಕ್ತಿಯೊಬ್ಬ ಬಂದು ‘ನಿನ್ನ ತಮ್ಮ ಸತ್ತು ಹೋಗಿದ್ದಾನಂತೆ, ಬೇಗ ಊರಿಗೆ ಬರಬೇಕಂತೆ’ ಅಂತ ಹೇಳಿದ. ಆಗ ನನಗೆ 15 ವರ್ಷ, ತಮ್ಮನಿಗೆ 5 ವರ್ಷ. ಗಂಟೆಗೆ ಎರಡಾಣೆ ಅಂತೆ ಸೈಕಲ್ ಬಾಡಿಗೆಗೆ ಪಡೆದು ಸಂತೇಶಿವರಕ್ಕೆ ತಲುಪಿದೆ.
undefined
Bengaluru ಪಬ್, ಹುಕ್ಕಾ ಬಾರ್‌ಗಳಲ್ಲಿ ಸಿಕ್ಕಿಬಿದ್ದ ಅಪ್ರಾಪ್ತರು! ನಿಮ್ಮ ಮಕ್ಕಳಿದ್ದಾರಾ ನೋಡಿ...
ಅಜ್ಜಿಯೊಬ್ಬಳೆ ಶವದ ಮುಂದೆ ಕುಳಿತಿದ್ದಳು. ಆ ಹೊತ್ತಿಗಾಗಲೆ ಅಮ್ಮ ತೀರಿಹೋಗಿದ್ದಳು. ಊರಿನ ಜಾತಿಯಸ್ಥರು ಯಾರೂ ಬಂದಿರಲಿಲ್ಲ. ಮುಂದೇನು ಮಾಡೋದು ಅಂತ ನನಗೂ ತೋಚಲಿಲ್ಲ. ನಮ್ಮ ಊರಿನ ಕರಡಿ ಎಂಬ ವ್ಯಕ್ತಿ ಬಂದು ‘ಎಷ್ಟು ಹೊತ್ತು ಇಟ್ಟುಕೊಂಡ್ರೂ ಅಷ್ಟೇಯಪ್ಪ, ಮುಂದಿನ ಕೆಲಸ ಮುಗಿಸು’ ಎಂದ. ಕರಡಿ ಸೌದೆ ವ್ಯವಸ್ಥೆ ಮಾಡಿದ. ಒಂದು ಕೈಯಲ್ಲಿ ನಾನು ಮಡಿಕೆ ಹಿಡ್ಕೊಂಡು ಮತ್ತೊಂದು ಕೈಯಿಂದ ಶವವನ್ನು ಭುಜದ ಮೇಲೆ ಎತ್ತಿಕೊಂಡು ಸ್ಮಶಾಣದತ್ತ ನಡೆದುಕೊಂಡೇ ಹೋದೆ. ಕರಡಿಯೇ ಶಾಸ್ತ್ರ ಹೇಳಿದ. ಬೆಳಿಗ್ಗೆಯಿಂದ ಸೈಕಲ್ ಹೊಡ್ಕೊಂಡು ಬಂದಿದ್ದರಿಂದ ಹೊಟ್ಟೆ ತುಂಬಾನೆ ಹಸೀತಾ ಇತ್ತು. ಮನೆಯಲ್ಲಿ ತಿನ್ನಲು ಏನೂ ಇರಲಿಲ್ಲ. ಆಗ ಅಜ್ಜಿ ಎದುರು ಮನೆಯ ದೇವರಾಯನವರ ಮನೆಯಿಂದ ಜೋಳದ ಹಿಟ್ಟೋ, ರಾಗಿ ಹಿಟ್ಟೋ ಇಸ್ಕೊಂಡು ಬಾ ಅಂತ ಕಳುಹಿಸಿದಳು. ಅವರ ಮನೆಗೆ ಹೋಗಿ ಅಜ್ಜಿ ಹೇಳಿದ್ದನ್ನು ಹೇಳಿದೆ.
ಶಾನುಭೋಗರಾದ ದೇವರಾಯನವರು ಇರಪ್ಪ ಅಂತ ಹೇಳಿ ಹಿಟ್ಟು ತರಲು ಒಳಗೆ ಹೋದರು. ಬೆನ್ನಿಗೆ ಅವರ ಹೆಂಡತಿ ಸಂಪಮ್ಮ ಬಂದು ಅವರನ್ನ ತಡೆದು ‘ಕೊಡ್ತೀನಿ ಅಂತೀರಲ್ಲ, ಅದೆಲ್ಲ ಎಲ್ಲಿಂದ ಬರುತ್ತೆ’ ಅಂತ ಗದುರಿಸಿದಳು. ಅವರ ಮನೆಯಲ್ಲಿ ಒಂದು ಆಳಿನ ಎತ್ತರದಷ್ಟು ಜೋಳ ಬಿದ್ದುಕೊಂಡು ಇರೋದು. ಈ ಸಂಪಮ್ಮ ಬೇರೆ ಯಾರೂ ಅಲ್ಲ. ಈಕೆಗೆ ರಂಗಣ್ಣ ಅಂತ ಮಗು ಜನಿಸಿತ್ತು. ಅದೇನೋ ಬಾಣಂತಿ ಸನ್ನೆಯಂತೆ, ಸಂಪಮ್ಮ ಮಗುವನ್ನೇ ಕೊಲ್ಲಲು ಹೋಗೋಳು. ಇನ್ನು ಎದೆ ಹಾಲು ಕುಡಿಸೋದಂತೂ ದೂರದ ಮಾತು. ಅದಕ್ಕೆ ನನ್ನಮ್ಮ ನನಗೆ ಎದೆಹಾಲು ಸ್ವಲ್ಪ ಕುಡಿಸಿ, ರಂಗಣ್ಣನಿಗೂ ಕುಡಿಸುತಿದ್ದಳು.
ಮಂಗಳೂರು ಬೆಡಗಿ ಆಶಿಕಾ ಪಡುಕೋಣೆ ಹಾಟ್ ಲುಕ್ ನೋಡಿ: ಇವಳೇನಾ ಸೀರೆಯುಡುವ 'ತ್ರಿನಯನಿ'
ಅದಕ್ಕೆ ದೇವರಾಯನವರು ಹೆಂಡತಿ ಮೇಲೆ ಗದರಿ ‘ನೀನೇನು ಮನುಷ್ಯಳೇನೆ. ನಿನ್ನ ಮಗೂಗೆ ಅವರಮ್ಮ ಎದೆಹಾಲು ಕುಡಿಸಿದ್ಲು. ಇವತ್ತು ಆಕೆ ಮಗ ಸತ್ತಿದ್ದಾನೆ. ಹಾಗೆ ನೋಡಿದ್ರೆ ನೀನೇ ಅಡುಗೆ ಮಾಡಿ ಅವರ ಮನೆಯಲ್ಲಿ ಇಟ್ಟು ಬರಬೇಕು. ಅಂಥದರಲ್ಲಿ ಒಂದಿಷ್ಟು ಜೋಳ ಕೊಡೋಕು ತಡೀತಿಯಲ್ಲ’ ಎಂದರು. ಆದರೆ ಸಂಪಮ್ಮ ಒಪ್ಪಲಿಲ್ಲ. ಅವರ ವಿರೋಧಕ್ಕೆ ದೇವರಾಯನವರು ಅಸಾಹಯಕರಾಗಿ ‘ನಾನು ಏನು ಮಾಡ್ಲಪ್ಪ ಮಗು….’ ಅಂತ ಅಳುವಿನ ಸ್ವರದಲ್ಲಿ ಪ್ರಶ್ನಿಸಿದರು. ನಾನು ಮರಳಿ ಮನೆಗೆ ಬಂದೆ. ಒಂದು ಗಂಟೆ ಹೆಚ್ಚಾದರೂ ಮತ್ತೆ ಎರಡಾಣೆ ಬಾಡಿಗೆ ಕೊಡಬೇಕಾಗುತಿತ್ತು. ಹಾಗಾಗಿ ಮತ್ತದೇ ಸೈಕಲ್ ಹೊಡೆದುಕೊಂಡು ಚನ್ನರಾಯಪಟ್ಟಣಕ್ಕೆ ಬಂದೆ.
- ಡಾ. ಎಸ್. ಎಲ್. ಭೈರಪ್ಪ