
ಹೊನ್ನಾಳಿ (ಸೆ.28): ಶತಮಾನಗಳಿಂದ ಭಾರತದ ಮೇಲೆ ಪಾಶ್ಚಮಾತ್ಯರಿಂದ ಎಷ್ಟೇ ಆಕ್ರಮಣಗಳಾದರೂ ಹಿಂದೂ ಧರ್ಮ, ದೈವ, ಗುರು ಸಂಸ್ಕೃತಿಗಳ ಬಲದಿಂದ ಇಂದಿಗೂ ದೇಶ ಅಚಲವಾಗಿದೆ. ಅಭಿವೃದ್ಧಿಯಿಂದಾಗಿ ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ಹೊನ್ನಾಳಿ ಹಿರೇಕಲ್ಮಠದಲ್ಲಿ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ 4ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾಡಿನಾದ್ಯಂತ ಶರನ್ನವರಾತ್ರಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ.
ಭಾರತೀಯರಾದ ನಾವು ಎಲ್ಲ ಕಲ್ಮಶಗಳನ್ನು ಹೊರಗೆ ಬಿಟ್ಟು ದೇವಸ್ಥಾನಗಳಲ್ಲಿ ಮಠಗಳಲ್ಲಿನ ಗುರುಗಳ ಸಮ್ಮುಖ ಧಾರ್ಮಿಕ ಆಚರಣೆಗಳು, ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದೆ. ದೇಶದ ಪ್ರಧಾನಿ ಮೋದಿಯವರ ಸಂಸ್ಕಾರ, ಇಚ್ಛಾಶಕ್ತಿಯಿಂದ ಇಂದು ಎಲ್ಲ ರಾಷ್ಟ್ರಗಳು ಭಾರತದೊಂದಿಗೆ ಇವೆ. ಆದರೆ ಪಾಕಿಸ್ತಾನ ಮಾತ್ರ ಒಬ್ಬಂಟಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗೋವಿನಕೋವಿ ಹಾಲಸ್ವಾಮಿ ಮಠದ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೊನ್ನಾಳಿ ಹಿರೇಕಲ್ಮಠದಲ್ಲಿ ಪ್ರತಿವರ್ಷ ಹತ್ತು ದಿನಗಳ ಕಾಲ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಭಕ್ತರಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ದಾಸೋಹ ನೀಡುತ್ತಿದೆ ಎಂದರು. ಸಾನ್ನಿಧ್ಯವನ್ನು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿ ಆಶೀರ್ವಚನ ನೀಡಿದರು. ಅನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರುದ್ರೇಶ್ ಸ್ವಾಗತಿಸಿ, ಟಿ.ಎಂ. ಬಸವರಾಜಯ್ಯ ಶಾಸ್ತ್ರಿ ನಿರೂಪಿಸಿದರು.
ದೇಶದಲ್ಲಿ ಜಾತಿ ಮೀರಿ ಹಿಂದೂಗಳು ಒಗ್ಗಟ್ಟಾಗುವುದು ಗಣೇಶೋತ್ಸವ ಕಾರ್ಯಕ್ರಮದಲ್ಲಾಗಿದೆ. ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಹಿಂದೂ ಧರ್ಮ ಉಳಿಸಬೇಕು ಎನ್ನುವ ಮನಸ್ಥಿತಿ ಬಂದಿದೆ. ಹಿಂದೂ ಸಮಾಜ ಈಗ ಸಂಘಟಿತವಾಗಿದೆ ಎಂದು ಹೇಳಿದರು. ಕಳೆದ ಮಂಗಳವಾರ ಶಿವಮೊಗ್ಗ ನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿ.ಜೆ. ಬಳಸಿದ್ದು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಡಿ.ಜೆ. ಬಳಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಅದನ್ನು ಕಾದುನೋಡೋಣ ಎಂದರು.
ಡಿಜೆ ಸೌಂಡ್ ಸಿಸ್ಟಂ ಬಳಕೆ ವಿಚಾರವಾಗಿ ಮಾದಾರ ಚನ್ನಯ್ಯ ಸ್ವಾಮೀಜಿ ಬೆಂಗಳೂರಿಗೆ ಹೋಗಿ, ಚಿತ್ರದುರ್ಗದಲ್ಲಿ ಡಿ.ಜೆ. ಬಳಕೆಗೆ ಪರವಾನಿಗೆ ನೀಡುವಂತೆ ಮುಖ್ಯಮಂತ್ರಿ, ಗೃಹ ಮಂತ್ರಿಗೆ ಕೇಳಿದರೂ ರಾಜ್ಯ ಸರ್ಕಾರ ಸ್ಪಂದಿಸಲಿಲ್ಲ. ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ, ಪಾಕಿಸ್ತಾನ ಜಿಂದಾಬಾದ್ ಅಂತಾ ಘೋಷಣೆ ಕೂಗಿರುವ ಮುಸ್ಲಿಮರ ವಿರುದ್ಧವೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶಿವಮೊಗ್ಗದಲ್ಲಿ ಈದ್ ಮಿಲಾದ್ ವೇಳೆ ಡಿ.ಜೆ. ಸೌಂಡ್ಸ್ ಬಳಸಿದ್ದಕ್ಕೆ ಏನು ಕ್ರಮ ಕೈಗೊಂಡಿದೆ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ