ರಾಜ್ಯದ ಅರ್ಧಕ್ಕರ್ಧ ಕೊರೋನಾ ಸೋಂಕು ‘ಅನ್ಯ ರಾಜ್ಯದವರದು’| ರಾಜ್ಯದಲ್ಲಿ ಇದುವರೆಗೆ ದೃಢಪಟ್ಟಿದ್ದು 2089 ಕೇಸು| 1026 ಪ್ರಕರಣ ಅನ್ಯ ರಾಜ್ಯದಿಂದ ಬಂದವರದು
ಬೆಂಗಳೂರು(ಮೇ.25): ರಾಜ್ಯದಲ್ಲಿ ದೃಢಪಟ್ಟಿರುವ 2,089 ಸೋಂಕು ಪ್ರಕರಣಗಳ ಪೈಕಿ ಬರೋಬ್ಬರಿ 1,026 ಪ್ರಕರಣ ಅನ್ಯ ರಾಜ್ಯದಿಂದ ಬಂದವರದ್ದಾಗಿದೆ. ಈ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಆತಂಕ ಸೃಷ್ಟಿಸಿದೆ.
ಕಳೆದ ಎಂಟು ದಿನದಿಂದ ಮಹಾರಾಷ್ಟ್ರದಿಂದ ಬಂದವರಲ್ಲೇ ಬರೋಬ್ಬರಿ 720 ಮಂದಿಗೆ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಮೊದಲ 1000 ಕೇಸ್‌ಗೆ 68 ದಿನ, ಈಗ 10 ದಿನ!
ಒಟ್ಟು 2,089 ಪ್ರಕರಣಗಳ ಪೈಕಿ 1,933 ಪ್ರಕರಣಗಳು ಸ್ವದೇಶದ ಸಂಪರ್ಕದಿಂದಲೇ ಹರಡಿರುವುದು ದೃಢಪಟ್ಟಿದೆ. ಅಂತಾರಾಷ್ಟ್ರೀಯ ಪ್ರಯಾಣ ಹಿನ್ನೆಲೆ ಹೊಂದಿರುವ 99 ಮಂದಿ, ವಿವಿಧ ರಾಜ್ಯದಿಂದ ಆಗಮಿಸಿರುವ 1,026 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಸೋಂಕಿತರ ಸಂಪರ್ಕದಿಂದ 793 ಮಂದಿಗೆ ಸೋಂಕು ತಗುಲಿದ್ದು, 83 ಪ್ರಕರಣಗಳ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇನ್ನು ‘ಸಾರಿ’ ಹಿನ್ನೆಲೆಯ 59 ಪ್ರಕರಣ ಹಾಗೂ ಐಎಲ್‌ಐ ಹಿನ್ನೆಲೆಯ 33 ಮಂದಿಗೆ ಸೋಂಕು ಹೇಗೆ ಹರಡಿತು ಎಂಬುದು ಈವರೆಗೂ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಭಾನುವಾರ ವರದಿಯಾಗಿರುವ 134 ಪ್ರಕರಣಗಳಲ್ಲೂ 101 ಪ್ರಕರಣ ಮಹಾರಾಷ್ಟ್ರ ಮೂಲದಿಂದಲೇ ವರದಿಯಾಗಿದೆ. ಉಳಿದಂತೆ ಸೋಂಕಿತರ ಸಂಪರ್ಕದಿಂದ 15, ಕಂಟೈನ್‌ಮೆಂಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದ 4 ಮಂದಿ ಪೊಲೀಸ್ ಸಿಬ್ಬಂದಿ, ಕಂಟೈನ್‌ಮೆಂಟ್ ಪ್ರಯಾಣ ಹಿನ್ನೆಲೆಯ 4 ಮಂದಿಗೆ ಸೋಂಕು ದೃಢಪಟ್ಟಿದ್ದು, 10 ಮಂದಿಯ ಸೋಂಕಿನ ಮೂಲ ತನಿಖೆಯಾಗುತ್ತಿದೆ.