ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ದಿವಂಗತ ಡಾ.ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ.
ವರದಿ: ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಮಾ.15): ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಹೃದಯಾಘಾತ. ಈ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ದಿವಂಗತ ಡಾ.ಪುನೀತ್ ರಾಜಕುಮಾರ ಅವರ ಹೆಸರಿನಲ್ಲಿ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಡಾ.ಪುನೀತ್ ರಾಜಕುಮಾರ ಅವರ ಹೆಸರಿನಲ್ಲಿ ಹೃದಯ ಜ್ಯೋತಿ ಯೋಜನೆ ಜಾರಿಗೆ ತಂದಿದ್ದು ಎರಡನೇ ಹಂತದ ಈ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಧಾರವಾಡದ ಡಾ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.
ಹೃದಯಾಘಾತವಾದ ತಕ್ಷಣ ಬಡವರಿಗೂ ಲಭ್ಯವಾಗುವ ರೀತಿಯಲ್ಲಿ ಎಲ್ಲ ತಾಲೂಕಾ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ 28 ಸಾವಿರ ರೂಪಾಯಿ ಮೌಲ್ಯದ Tenecteplase ಇಂಜಕ್ಷನ್‌ನ್ನು ಉಚಿತವಾಗಿ ನೀಡುವ ಯೋಜನೆ ಇದಾಗಿದೆ. ಹೃದಯಾಘಾತವಾದ ತಕ್ಷಣ ಇಸಿಜಿ ಮಾಡುವ ಸ್ಟೆಮಿ ಕಿಟ್‌ನ್ನೂ ಈ ಯೋಜನೆಯಡಿ ನೀಡಲಾಗುತ್ತಿದೆ. ಇಡೀ ದೇಶದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರದಿಂದ ಈ ಯೋಜನೆ ಜಾರಿ ಮಾಡಲಾಗಿದೆ. ಈಗಾಗಲೇ ರಾಜ್ಯದ 15 ಜಿಲ್ಲೆ ಹಾಗೂ 71 ತಾಲೂಕಾ ಆಸ್ಪತ್ರೆಯಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ. ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬಾಗಲಕೋಟೆ ಸೇರಿದಂತೆ 36 ತಾಲೂಕಾ ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಬರುವ ದಿನಗಳಲ್ಲಿ ರಾಜ್ಯಾದ್ಯಂತ ಈ ಯೋಜನೆ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಿ: ಸಂಸದ ಡಿ.ಕೆ.ಸುರೇಶ್
ಹೃದಯಾಘಾತವಾದ ವ್ಯಕ್ತಿಗೆ Tenecteplase ಇಂಜಕ್ಷನ್ ನೀಡಿದರೆ ಹೃದಯದ ಬ್ಲಾಕ್‌ಗಳನ್ನು ಈ ಇಂಜಕ್ಷನ್ ತೆಗೆದು ಹಾಕಿ ವ್ಯಕ್ತಿ ಬದುಕುವಂತೆ ಮಾಡುತ್ತದೆ. ಆನಂತರ ಆ ವ್ಯಕ್ತಿಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಇಂತಹ ಇಂಜಕ್ಷನ್ ಬಡವರಿಗೂ ಸಿಗಲಿ ಎಂದು ಈ ಯೋಜನೆ ಜಾರಿ ಮಾಡಲಾಗಿದೆ. ಬರುವ ದಿನಗಳಲ್ಲಿ ಈ ಇಂಜಕ್ಷನ್‌ನ್ನು ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲೂ ಇಡುವ ಯೋಜನೆ ಸರ್ಕಾರದ ಮುಂದೆ ಇದೆ ಎಂದು ಆರೋಗ್ಯ ಸಚಿವರು ತಿಳಿಸಿದರು ಇಂತಹ ಎರಡನೇ ಹಂತದ ಯೋಜನೆಗೆ ಧಾರವಾಡದಿಂದ ಚಾಲನೆ ಸಿಕ್ಕಿದೆ. ಈ ಸಮಾರಂಭಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್, ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಹೃದಯ ಸಂಬಂಧಿ ವೈದ್ಯರು ಸೇರಿದಂತೆ ಅನೇಕರು ಸಾಕ್ಷಿಯಾದರು.