ಬೆಂಗಳೂರು (ಮೇ.12): ಜನತಾ ಕರ್ಫ್ಯೂ ವೇಳೆ ಬೆಳೆದ ಬೆಳೆ ಮಾರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ರೈತರು ಇದೀಗ ಸೆಮಿಲಾಕ್‌ಡೌನ್ ವೇಳೆ ಮತ್ತಷ್ಟುಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಗಲಿರುಳು ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ ಎಂಬ ಸಮಸ್ಯೆಯೊಂದಿಗೇ ಹೆಚ್ಚುತ್ತಿರುವ ಕಳ್ಳಕಾಕರಿಂದಲೂ ರಕ್ಷಿಸಬೇಕಾಗಿದೆ. ಇಷ್ಟೆಲ್ಲಾ ತಲೆನೋವುಗಳ ಮಧ್ಯೆ ಮಾರುಕಟ್ಟೆಗೆ ಹೊರಟರೆ ಪೊಲೀಸರೂ ತಡೆಯುತ್ತಿದ್ದಾರೆ ಎಂಬುದು ಇದೀಗ ರೈತರ ಅಳಲಾಗಿದೆ.
ಬದನೆ ಪುಕ್ಕಟೆಯಾಗಿ ಕೊಟ್ಟರೈತ: ಹಾವೇರಿ ತಾಲೂಕಿನ ಕನಕಾಪುರ ಗ್ರಾಮದ ರೈತ ಫಕ್ಕೀರಗೌಡ ಗಾಜಿಗೌಡ್ರ ಎಂಬವರು ದಳ್ಳಾಳಿಗಳ ಕಡೆಯಿಂದ ಸೂಕ್ತ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಪುಕ್ಕಟೆಯಾಗಿ ಹಂಚಿ ಹೋಗಿರುವ ಘಟನೆ ನಡೆದಿದೆ. ಹರಾಜಿನಲ್ಲಿ ದಳ್ಳಾಳಿಗಳು 20 ಕೆ.ಜಿ. ತೂಕದ ಕ್ರೇಟ್ ಒಂದಕ್ಕೆ 20ಕ್ಕೆ ಕೂಗಿದರು. ನೂರಾರು ರು. ಖರ್ಚು ಮಾಡಿ ಮಾರುಕಟ್ಟೆಗೆ ಬೆಳೆಯನ್ನು ತಂದಿದ್ದ ಅವರು, ಕೇವಲ 1 ರು.ಗೆ ಬದನೆಕಾಯಿ ಕೊಡಲು ಮನಸಾಗದೆ ತರಕಾರಿ ಖರೀದಿಗೆಂದು ಆಗಮಿಸಿದ್ದರಿಗೆ ಪುಕ್ಕಟ್ಟೆಯಾಗಿ ಹಂಚಿ ಹೋಗಿದ್ದಾರೆ.
ತರಕಾರಿ ತಿಪ್ಪೆಗೆ ಎಸೆದು, ರಸ್ತೆಗೆ ಚೆಲ್ಲಿ ರೈತ ಆಕ್ರೋಶ .
ಕೇಳುವವರಿಲ್ಲ ಬಾಳೆ, ಗೆಣಸು: ಇನ್ನು ಕೊಡುಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಗ್ರಾಮದಲ್ಲಿ 16 ಮಂದಿ ರೈತರು ಬಾಳೆ ಬೆಳೆದಿದ್ದು, ಲಾಕ್‌ಡೌನ್‌ನಿಂದಾಗಿ ವಾಹನ ಇಲ್ಲದೇ ಬೇರೆಡೆ ಬಾಳೆ ಸಾಗಣೆ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಕೆ.ಜಿ. ಬಾಳೆ 40 ರು.ನಂತೆ ಮಾರಾಟವಾಗಿತ್ತು. ಆದರೆ, ಇದೀಗ 25 ರು. ಸಹ ಸಿಗುತ್ತಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ. ಈಗಾಗಲೇ 2 ಟನ್‌ನಷ್ಟುಬೆಳೆ ನಷ್ಟವಾಗಿದ್ದು ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ.
ಸಂಕಷ್ಟದ ಮಧ್ಯೆ ರೈತರನ್ನು ಕಾಡುತ್ತಿರುವ ಬ್ಯಾಂಕ್: ಸಂಬಂಧಪಟ್ಟವರು ಕಣ್ತೆರೆದು ನೋಡಿ ...
ಮಾರುಕಟ್ಟೆಯಲ್ಲಿ ತರಕಾರಿ ಕಳ್ಳತನ!: ಕೋವಿಡ್ ಹಿನ್ನೆಲೆಯಲ್ಲಿ ನಿರ್ಬಂಧವಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ತರಕಾರಿ ಖರೀದಿಸುವ ದಲ್ಲಾಳಿಗಳು ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ನಂತರ ಈ ಪ್ರಕ್ರಿಯೆ ಮರುದಿನ ಬೆಳಗ್ಗೆ 6 ಗಂಟೆಗೆ ಆರಂಭವಾಗಬೇಕು. ಅಲ್ಲಿಯವರೆಗೂ ರೈತರು ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಹೀಗಾಗಿ ರಾತ್ರಿ ಮೈದಾನದಲ್ಲೇ ಇದ್ದಾಗ ತರಕಾರಿಯನ್ನು ಕಳ್ಳರು ಕದಿಯುತ್ತಿದ್ದಾರೆ ಎಂದು ಮಾರಾಟ ಮಾಡಲು ಬಂದ ರೈತರು ಆರೋಪಿಸುತ್ತಿದ್ದಾರೆ.
ಗೋವಾ ಮಾರ್ಗ ಬಂದ್: ಮೇ 24 ರ ತನಕ ಅಂತರ್ ಜಿಲ್ಲೆ ಮತ್ತು ಅಂತಾರಾಜ್ಯ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಗೋವಾ ಮತ್ತು ಮಹಾರಾಷ್ಟ್ರ ಹೋಗುತ್ತಿದ್ದ ತರಕಾರಿ ಸಂಪೂರ್ಣ ನಿಂತುಹೋಗಿದೆ. ಇದರಿಂದಾಗಿ ತರಕಾರಿ ಮಾರುಕಟ್ಟೆ, ಹೊಲದಲ್ಲಿಯೇ ಕೊಳೆಯುವಂತಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona