ನೀರಾವರಿ ಇಲಾಖೆ ಹೊಸ ಆಯ್ಕೆಪಟ್ಟಿಯಲ್ಲೂ ನಕಲಿ? ಸಮಗ್ರ ತನಿಖೆಗೆ ಒತ್ತಾಯ

By Kannadaprabha News  |  First Published Sep 9, 2024, 9:05 AM IST

ರಾಜ್ಯ ಜಲಸಂಪನ್ಮೂಲ ಇಲಾಖೆಯ ‘ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿ ವೇಳೆ ಅಭ್ಯರ್ಥಿಗಳು ನಕಲಿ ದಾಖಲೆಗಳನ್ನು ಸಲ್ಲಿಸಿ ಉದ್ಯೋಗ ಗಿಟ್ಟಿಸಲು ಯತ್ನಿಸಿದ್ದನ್ನು ಈ ಹಿಂದೆ ‘ಕನ್ನಡಪ್ರಭ’ ಬಯಲಿಗೆಳೆದಿತ್ತು.


ಆನಂದ ಎಂ. ಸೌದಿ

ಯಾದಗಿರಿ (ಸೆ.9): ರಾಜ್ಯ ಜಲಸಂಪನ್ಮೂಲ ಇಲಾಖೆಯ ‘ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಬ್ಯಾಕ್‌ಲಾಗ್‌ ಹುದ್ದೆಗಳ ನೇಮಕಾತಿ ವೇಳೆ ಅಭ್ಯರ್ಥಿಗಳು ನಕಲಿ ದಾಖಲೆಗಳನ್ನು ಸಲ್ಲಿಸಿ ಉದ್ಯೋಗ ಗಿಟ್ಟಿಸಲು ಯತ್ನಿಸಿದ್ದನ್ನು ಈ ಹಿಂದೆ ‘ಕನ್ನಡಪ್ರಭ’ ಬಯಲಿಗೆಳೆದಿತ್ತು. ಅದರ ಬಗ್ಗೆ ತನಿಖೆ ನಡೆಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಮೂವರು ಸರ್ಕಾರಿ ನೌಕರರು, 11 ಜನ ಮಧ್ಯವರ್ತಿಗಳು ಹಾಗೂ 37 ಅನರ್ಹ ಅಭ್ಯರ್ಥಿಗಳು ಸೇರಿದಂತೆ ಒಟ್ಟು 48 ಮಂದಿ ಆರೋಪಿಗಳನ್ನು ಇತ್ತೀಚೆಗೆ ಬಂಧಿಸಿದ್ದರು. ಇದರ ನಡುವೆಯೇ, ಇಲಾಖೆ ಜೂ.27ರಂದು ಹೊಸದಾಗಿ 182 ಅಭ್ಯರ್ಥಿಗಳ ತಾತ್ಕಾಲಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಈ ಆಯ್ಕೆ ಪಟ್ಟಿಯಲ್ಲಿಯೂ ಕೂಡ ನಕಲಿ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ, ಈ ಆಯ್ಕೆ ಪಟ್ಟಿ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಅಲ್ಲಿಯವರೆಗೆ ಈ ಪಟ್ಟಿಯನ್ನು ತಡೆ ಹಿಡಿಯಬೇಕು ಎಂದು ನೊಂದ ಅಭ್ಯರ್ಥಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

Latest Videos

undefined

ಜಲ ಸಂಪನ್ಮೂಲ ಇಲಾಖೆ 2022ರಲ್ಲಿ ‘ಸಿ’ ದರ್ಜೆ ಹುದ್ದೆಗಳ ನೇರ ನೇಮಕಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿತ್ತು. ಈ ವೇಳೆ ಕೆಲ ನಕಲಿ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಫೇಲಾದವರ ಅಂಕಪಟ್ಟಿಗಳನ್ನೇ ತಿದ್ದಿ, ತಮ್ಮ ಹೆಸರಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಅಂಕಪಟ್ಟಿ ತಯಾರಿಸಿ, ನೌಕರಿಗೆ ಅರ್ಜಿ ಸಲ್ಲಿಸಿರುವುದು ಕಂಡುಬಂದಿತ್ತು. ‘ಕನ್ನಡಪ್ರಭ’ ಸರಣಿ ವರದಿಗಳ ಮೂಲಕ ಈ ಹಗರಣವನ್ನು ಬಯಲಿಗೆಳೆದಿತ್ತು. ಪ್ರಕರಣದ ತನಿಖೆ ನಡೆಸಿದ ಸಿಸಿಬಿ, ಮೂವರು ಸರ್ಕಾರಿ ನೌಕರರು, 11 ಜನ ಮಧ್ಯವರ್ತಿಗಳು ಹಾಗೂ 37 ಅನರ್ಹ ಅಭ್ಯರ್ಥಿಗಳು ಸೇರಿದಂತೆ ಒಟ್ಟು 48 ಮಂದಿ ಆರೋಪಿಗಳನ್ನು ಬಂಧಿಸಿದೆ. ಇನ್ನೂ 38 ಆರೋಪಿಗಳಿಗಾಗಿ ಹುಡುಕಾಟ ನಡೆಸಿದೆ.

 

ಜಲಜೀವನ ಮಿಷನ್, ಜಲಧಾರೆ ಪರಿಣಾಮಕಾರಿ ಅನುಷ್ಠಾನಗೊಳಿಸಿ: ಕೇಂದ್ರ ಸಚಿವ ಸೋಮಣ್ಣ

ಇದರ ನಡುವೆಯೇ, ಇಲಾಖೆ ಜೂ.27ರಂದು ಹೊಸದಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ. ಈ ಆಯ್ಕೆ ಪಟ್ಟಿಯಲ್ಲಿಯೂ ಕೂಡ ಅಂಕಪಟ್ಟಿ, ಅಂಗವಿಕಲತೆ ಸೇರಿ ವಿವಿಧ ವಿಭಾಗಗಳಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳಿದ್ದಾರೆ. ಹೀಗಾಗಿ, ಈ ಆಯ್ಕೆ ಪಟ್ಟಿ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಅಲ್ಲಿಯವರೆಗೆ ಈ ಪಟ್ಟಿಯನ್ನು ತಡೆಹಿಡಿಯಬೇಕು ಎಂದು ನೊಂದ ಅಭ್ಯರ್ಥಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಮಧ್ಯೆ, ನಕಲಿ ಅಂಕಪಟ್ಟಿ ಹಗರಣಕ್ಕೆ ಸಂಬಂಧಿಸಿ ಶಹಾಪುರ ತಾಲೂಕಿನ ಹಾರಣಗೇರಾದ ರವಿಕುಮಾರ್‌ ಎಂಬುವರಿಗೆ ಸಿಸಿಬಿ ನೋಟಿಸ್‌ ನೀಡಿದ್ದು, ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಈ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಅವರು, ನಾನು ಪಿಯುಸಿಯಲ್ಲಿ ಉತ್ತೀರ್ಣನಾಗಿಲ್ಲ. ಮುಂದೆ ಪರೀಕ್ಷೆಯನ್ನೂ ಬರೆದಿಲ್ಲ. ಆದರೂ, ಮಹಿಳಾ ಅಭ್ಯರ್ಥಿಯೊಬ್ಬರ ಹೆಸರಲ್ಲಿ ನನ್ನ ನೋಂದಣಿ ಸಂಖ್ಯೆಯುಳ್ಳ ಅಂಕಪಟ್ಟಿ ಸಲ್ಲಿಕೆಯಾಗಿದೆ. ಈ ಕುರಿತು, ವಿಚಾರಣೆಗೆ ಹಾಜರಾಗಲು ಸಿಸಿಬಿ ನೋಟಿಸ್‌ ನೀಡಿದೆ ಎಂದು ತಿಳಿಸಿದರು.

ಯಾದಗಿರಿ ಸಮಗ್ರ ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂಚೂಣಿಯಲ್ಲಿ ಬರುವಂತೆ ನೋಡಿಕೊಳ್ಳಿ: ಸಚಿವ ಸೋಮಣ್ಣ

ಕಳೆದ ವರ್ಷವೇ ನಾನು ದೂರು ನೀಡಿದ್ದರೂ ಇಲಾಖೆ ಎಚ್ಚೆತ್ತುಕೊಂಡಿರಲಿಲ್ಲ. ಹಗರಣ ನಡೆದೇ ಇಲ್ಲ ಎಂದು ಮೇಲಧಿಕಾರಿಗಳು ಹಾರಿಕೆಯ ಉತ್ತರ ನೀಡಿದ್ದರು. 200ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮ ನಡೆಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ, ಇಲಾಖೆ ಜೂ.27ರಂದು ಪ್ರಕಟಿಸಿದ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲೂ ನಕಲಿ ದಾಖಲೆಗಳನ್ನು ಸಲ್ಲಿಸಿರುವ ಶಂಕೆ ಮೂಡಿದೆ ಎಂದು ಯಾದಗಿರಿಯ ಮಲ್ಲಿಕಾರ್ಜುನ್‌ ಕುರಕುಂದಾ ಎಂಬುವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ನೇಮಕ ಅಕ್ರಮದಲ್ಲಿ ಒಬ್ಬೊಬ್ಬರಿಂದ 10-12 ಲಕ್ಷ ರುಪಾಯಿಗಳ ಲಂಚ ಕೇಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

click me!