
- ಮುಸ್ಲಿಂ ಸಮುದಾಯ ಕಾಂಗ್ರೆಸ್ಸಿಂದ ದೂರಾಗಿ, ಹೊಸ ಪಕ್ಷ ಕಟ್ಟಲಿದೆ: ಸುಭಾನ್ ಖಾನ್
-ದಾವಣಗೆರೆ (ಏ.18): ದಾವಣಗೆರೆ ದಕ್ಷಿಣ ಕ್ಷೇತ್ರದ ಬೆಳವಣಿಗೆ ಆಧಾರದಲ್ಲಿ ಸಚಿವ ಜಮೀರ್ ಅಹಮ್ಮದ್ ತಲೆದಂಡವಾದರೆ ವಿಧಾನಸಭೆ ಚುನಾವಣೆ-2028ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ 20-30 ಕ್ಷೇತ್ರಗಳನ್ನು ಗೆಲ್ಲುವುದೂ ಕಷ್ಟವಾದೀತು. ಮುಸ್ಲಿಂ ಸಮುದಾಯವೇ ಕಾಂಗ್ರೆಸ್ಸಿನಿಂದ ದೂರವಾಗುತ್ತದೆ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುಭಾನ್ ಖಾನ್ ಎಚ್ಚರಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆ.ಅಬ್ದುಲ್ ಜಬ್ಬಾರ್, ದಕ್ಷಿಣ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹಮ್ಮದ್‌ಗೆ ತಲೆದಂಡ ಮಾಡಿದ ಕಾಂಗ್ರೆಸ್ ಪಾಠ ಕಲಿಯದಿದ್ದರೆ, ಮುಸ್ಲಿಂ ಸಮುದಾಯ ಪಾಠ ಕಲಿಸುವ ಕೆಲಸ ಮಾಡುತ್ತದೆ ಎಂದರು.
ಮುಸ್ಲಿಂ ನಾಯಕರಿಗೆ ತೊಂದರೆ ನೀಡಿದರೆ ಕಾಂಗ್ರೆಸ್ಸಿಂದ ದೂರ ಸರಿದು, ಪ್ರಾದೇಶಿಕ ಪಕ್ಷ ಹುಟ್ಟು ಹಾಕುತ್ತೇವೆ. ಮುಸ್ಲಿಂ ಸೇರಿದಂತೆ ಅಹಿಂದ ವರ್ಗ ಸೇರಿದಂತೆ ಎಲ್ಲ ಜಾತಿ, ಸಮುದಾಯ ಒಳಗೊಂಡಂತೆ ಕಾಂಗ್ರೆಸ್- ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು, ಜೆಡಿಎಸ್‌ನಂತಹ ಪ್ರಾದೇಶಿಕ ಪಕ್ಷಕ್ಕೆ ಪರ್ಯಾಯ ಶಕ್ತಿಯ ಉದಯವಾಗಲಿದೆ. ವಿಶ್ವ ಮುಸ್ಲಿಂ ಪರಿಷತ್ ರಾಜಕೀಯ ಪಕ್ಷವಾಗಿ ಮಾಡುತ್ತೇವೆ. ಜಮೀರ್ ಅಹ್ಮದ್ ಅವರನ್ನೇ ಕರೆಸಿ ಲಕ್ಷಾಂತರ ಜನರ ಸೇರಿಸಿ, ಸಮಾವೇಶ ಮಾಡುತ್ತೇವೆ. ಜಮೀರ್ ಅವರನ್ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಜಮೀರ್ ಅಹಮ್ಮದ್ ತಲೆದಂಡವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದೆ. ಕೆ.ಅಬ್ದುಲ್ ಜಬ್ಬಾರ್ ಅವರಿಗೆ ಏನಾದರೂ ತೊಂದರೆಯಾದರೆ ಕಾಂಗ್ರೆಸ್ ದಾವಣಗೆರೆ ನಗರ, ಜಿಲ್ಲೆಯಲ್ಲಷ್ಟೇ ಅಲ್ಲ, ಎಲ್ಲ ಕಡೆ ಸರ್ವನಾಶವಾಗುತ್ತದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ವಿರುದ್ಧ ಅಬ್ದುಲ್ ಜಬ್ಬಾರ್ ಪಕ್ಷವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ತೆಗೆದು ಹಾಕಿದ್ದು ಖಂಡನೀಯ ಎಂದು ಅವರು ತಿಳಿಸಿದರು.
ನಸೀರ್ ಅಹಮ್ಮದ್ ಅವರಿಂದ ಬಲವಂತದಿಂದ ರಾಜೀನಾಮೆ ಪಡೆಯಲಾಗಿದೆ. ಇದೀಗ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮ್ಮದ್ ತಲೆದಂಡ ಮಾಡಿದರೆ ಕರ್ನಾಟಕ, ತೆಲಂಗಾಣದಲ್ಲಿ ಇರುವಂತಹ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಲಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ, ರಾಜಕೀಯವಾಗಿ ಮುಗಿಸಲು ಹೊರಟರೆ ಅದೇ ಕಾಂಗ್ರೆಸ್ ಕೈಕಟ್ಟಿಕೊಂಡು ಕೂಡುವ ಸ್ಥಿತಿ ತಂದುಕೊಳ್ಳುತ್ತದೆ. ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಸೋಲನುಭವಿಸಲಿದೆ ಎಂದು ಸುಭಾನ್ ಖಾನ್ ಹೇಳಿದರು.
ಈ ಸಂದರ್ಭ ಪರಿಷತ್ ಮುಖಂಡರಾದ ಪರ್ವೇಜ್, ಮಂಜುನಾಥ, ಅಲ್ಲಾಭಕ್ಷಿ ಇದ್ದರು
*ಸಾದಿಕ್ ನಾಮಪತ್ರ ಹಾಕಿಸಿದ್ದೇ ನಾನು: ಸುಭಾನ್
- ಇದರಲ್ಲಿ ಜಮೀರ್, ಜಬ್ಬಾರ್, ನಸೀರ್‌ರ ಯಾವುದೇ ಪಾತ್ರವೂ ಇಲ್ಲ: ಸ್ಪಷ್ಟನೆ
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನನ್ನ 40 ವರ್ಷದ ಸ್ನೇಹಿತ ಸಾದಿಕ್ ಪೈಲ್ವಾನ್ ನಾಮಪತ್ರ ತುಂಬಿ, ಹಾಕಿಸಿದ್ದೇ ನಾನು. ಸಾದಿಕ್‌ಗೆ ನಾಮಪತ್ರ ಸಲ್ಲಿಸಲು ಕೆ.ಅಬ್ದುಲ್ ಜಬ್ಬಾರ್, ನಸೀರ್ ಅಹಮ್ಮದ್, ಜಮೀರ್ ಅಹಮ್ಮದ್ ಯಾರೂ ಹೇಳಿಲ್ಲ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುಭಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಫಲಿತಾಂಶ ಇನ್ನೂ ಬಂದೇ ಇಲ್ಲ. ಆದರೂ, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರನ್ನು ಗುರಿಯಾಗಿಸಿಕೊಂಡು, ಕ್ರಮ ಕೈಗೊಳ್ಳಲಾಗುತ್ತಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಶಿಫಾರಸಿನಿಂದ ಹೀಗೆ ಕಾಂಗ್ರೆಸ್ ವರಿಷ್ಠರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.
ನನ್ನ ಗೆಳೆಯ ಸಾದಿಕ್ ಪೈಲ್ವಾನ್ ಕಾಂಗ್ರೆಸ್ಸಿನಲ್ಲಿ ದುಡಿದರೂ ತನ್ನನ್ನು ಗುರುತಿಸಲಿಲ್ಲವೆಂದು ಬೇಸರ ತೋಡಿಕೊಂಡಿದ್ದ. ನಾನೂ ಉಪ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಸಾದಿಕ್‌ಗೂ ನಾಮಪತ್ರ ಸಲ್ಲಿಸಲು ಹೇಳಿ, ನಾನೇ ನಾಮಪತ್ರ ತುಂಬಿ, ನನ್ನದೇ ಹಣದಲ್ಲಿ ಠೇವಣಿ ಕಟ್ಟಿದ್ದೆ. ಆದರೆ, ಸೆಡ್ಡು ಹೊಡೆದಿದ್ದ ಆತ ಇದ್ದಕ್ಕಿದ್ದಂತೆ ಯು ಟರ್ನ್ ಆಗುತ್ತಾನೆಂದು ನಾನಂತೂ ಅಂದುಕೊಂಡಿರಲಿಲ್ಲ ಎಂದು ಅವರು ತಿಳಿಸಿದರು.
ಚುನಾವಣಾ ಕಣದಲ್ಲಿ ಉಳಿಯುವುದು, ಬಿಡುವುದು ಅವನ ಇಷ್ಟ. ಸಾದಿಕ್ ಪೈಲ್ವಾನ್‌ಗೆ ನಾಮಪತ್ರ ಸಲ್ಲಿಸಲು, ಹಿಂದಕ್ಕೆ ಪಡೆಯದಂತೆ ಹೇಳಿದ್ದು ನಾನೇ ಹೊರತು ಅಬ್ದುಲ್ ಜಬ್ಬಾರ್, ಜಮೀರ್ ಅಹಮ್ಮದ್, ನಸೀರ್ ಅಹಮ್ಮದ್ ಆಗಲಿ ಅಲ್ಲ. ಉಪ ಚುನಾವಣೆಗೆ ಇಡೀ ಕ್ಯಾಬಿನೆಟ್ ದಾವಣಗೆರೆಗೆ ಬಂದು, ಠಿಕಾಣಿ ಹೂಡಿತ್ತು. ಇಲ್ಲಿಯೇ ಇದ್ದವರು ಒಂದು ಸಲ ಅಬ್ದುಲ್ ಜಬ್ಬಾರ್ ಮನೆಗೆ ಭೇಟಿ ನೀಡಬೇಕಿತ್ತು. ಜಬ್ಬಾರ್ ಅಲ್ಪಸಂಖ್ಯಾತರ ನಾಯಕ. ಸಾದಿಕ್ ಮನೆ ಕೂಗಳತೆ ದೂರದಲ್ಲಿದ್ದರೂ ಸಾದಿಕ್ ಮನೆಯಲ್ಲಿ ಊಟ ಮಾಡಿದ ಸಿಎಂ ಸಿದ್ದರಾಮಯ್ಯ, ಜಬ್ಬಾರ್ ಮನೆಗೆ ಹೋಗಲಿಲ್ಲ ಎಂದು ಅವರು ದೂರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ