
ರಾಯಚೂರು (ಸೆ.03): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಯಾವುದೇ ರೀತಿಯಲ್ಲಿ ಮಾಡಿದರು ಸಹ ನಮ್ಮದಿ ಸಿಗುತ್ತದೆ ಎಂದು ಚಿತ್ರನಟ ಜಗ್ಗೇಶ್ ತಿಳಿಸಿದರು. ಶ್ರೀಗುರುರಾಯರ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಹಿನ್ನೆಲೆ ಶ್ರೀಮಠಕ್ಕೆ ಆಗಮಿಸಿದ್ದ ನಟ ಜಗ್ಗೇಶ್ ಉತ್ಸವ ಮೂರ್ತಿ, ಪ್ರಹ್ಲಾದ ರಾಜರ ಸುವರ್ಣ ರಥವನ್ನು ಎಳೆದು ಭಕ್ತಿ ಸಮರ್ಪಿಸಿದ ನಂತರ ಮಾತನಾಡಿದರು.
ಪ್ರತಿ ವರ್ಷ ರಾಯರ ಮಧ್ಯಾರಾಧನೆಯಲ್ಲಿ ಪಾಲ್ಗೊಳ್ಳುವ ವಾಡಿಕೆಯನ್ನು ಮಾಡಿಕೊಂಡಿದ್ದು, ಯಾವುದೇ ಕೆಲಸ ಕಾರ್ಯಗಳಿದ್ದರೂ ಅವುಗಳಿಗೆ ವಿರಾಮಕೊಟ್ಟು ಮಂತ್ರಾಲಯಕ್ಕೆ ಬಂದು ರಾಯರ ಧ್ಯಾನ, ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ. ಇದರಲ್ಲಿಯೇ ನನಗೆ ಸಂತೋಷಸಿಗುತ್ತದೆ. ರಾಯರ ಆಶೀರ್ವಾದ ನಮಗೆ ಬ್ಯಾಂಕ್ ಬ್ಯಾಲೆನ್ಸ್ ಇದ್ದಹಾಗೆ, ಅವರ ಸೇವೆಯೇ ನಮಗೆ ನೆಮ್ಮದಿ ಎಂದರು.
ಚಂದ್ರಯಾನ-3 ಯಶಸ್ಸಿನಿಂದ ಭಾರತ ದೇಶದ ಗರಿಮೆ ಹೆಚ್ಚಾಗಿದ್ದು, ಇದು ಆಲೋಚನೆಯ ದಿಕ್ಸೂಚಿಯನ್ನೇ ಬದಲಾಯಿಸಿದೆ. ಇಡೀ ಪ್ರಪಂಚದಲ್ಲಿ ಯಾವ ದೇಶಗಳು ಮಾಡದಂತಹ ಸಾಧನೆಯನ್ನು ನಮ್ಮ ಇಸ್ರೋ ವಿಜ್ಞಾನಿಗಳು ಮಾಡಿ ತೋರಿಸಿದ್ದಾರೆ. ಇತರೆ ಯಾವುದೇ ದೇಶಗಳು ತಲುಪಲಾಗದ ಚಂದ್ರನ ದಕ್ಷಿಣ ಧ್ರುವಕ್ಕೆ ಭಾರತ ಕಾಲಿಟ್ಟಿದ್ದು, ಕೇವಲ 10 ರುಪಾಯಿಗೆ ಒಂದು ಕಿಮೀ ಕ್ರಮಿಸುವ ಮೂಲಕ ಅತೀ ಕಡಿಮೆ ಖರ್ಚಿನಲ್ಲಿ ಇಂಥ ದೊಡ್ಡ ಸಾಧನೆಯನ್ನು ಮಾಡಿರುವುದು ದೇಶವೇ ಹೆಮ್ಮೆಪಡುವ ವಿಚಾರವಾಗಿದೆ ಎಂದು ಹೇಳಿದರು.
ನಮೋ ನಮಃ ನವ ಮಂತ್ರಾಲಯ ಸುಕ್ಷೇತ್ರ: ಶುರುವಾಗಿದೆ ಪರಿವರ್ತನೆ ಪರ್ವ
2019ರಲ್ಲಿ ಚಂದ್ರಯಾನ-2 ವಿಫಲವಾದಾಗ ದೇಶದ ಪ್ರಧಾನಿ ಮೋದಿಯವರು ಇಸ್ರೋ ವಿಜ್ಞಾನಿಗಳಗೆ ಮನೆಯ ಮಕ್ಕಳಿಗೆ ಸಾಂತ್ವನ ಹೇಳಿದಂತೆ ಹೇಳಿದ್ದರು. ಅದರ ಫಲವೇ ಇಂದು ಈ ಯಶಸ್ಸಿಗೆ ಕಾರಣವಾಗಿದೆ. ಪ್ರಧಾನಿ ಮೋದಿ ಘೋಷಿಸಿದಂತೆ ದೇಶದ ಮುಂದಿನ 25 ವರ್ಷ ಅಮೃತಕಾಲವಾಗಲಿದ್ದು, ಅತೀ ಶೀಘ್ರದಲ್ಲಿಯೇ ಭಾರತ ಆರ್ಥಿಕತೆಯಲ್ಲಿ 5 ಟ್ರಿಲಿಯನ್ ತಲುಪುವ ಸಾಧ್ಯತೆಗಳಿವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ