ಶಾಸಕ, ಸಂಸದರಿಗಿರುವ ಕೊರೋನಾ ರಿಸ್ಕ್‌ ಮಕ್ಕಳಿಗಿಲ್ಲವೇ?

By Kannadaprabha News  |  First Published Sep 29, 2020, 7:26 AM IST

ಶಾಸಕ, ಸಂಸದರಿಗಿರುವ ಕೊರೋನಾ ರಿಸ್ಕ್‌ ಮಕ್ಕಳಿಗಿಲ್ಲವೇ?| ಕೊರೋನಾ ಭೀತಿಯಿಂದ ಸಂಸತ್‌, ವಿಧಾನಮಂಡಲ ಕಲಾಪ ಮೊಟಕು| ಹಾಗಿದ್ದರೆ ಮಕ್ಕಳನ್ನು ಶಾಲೆಗೆ ಕಳಿಸಿದರೆ ಕೊರೋನಾ ಬರುವುದಿಲ್ಲವೇ?| ಮಕ್ಕಳ ಜೀವ, ಜೀವ ಅಲ್ಲವೇ: ಪೋಷಕರ ಪ್ರಶ್ನೆ| ಶಾಲೆ ಆರಂಭಿಸಿ ಮಕ್ಕಳನ್ನು ‘ಕೊರೋನಾದೊಡ್ಡಿಗೆ’ ದೂಡುವ ಅತ್ಯುತ್ಸಾಹ ಸರ್ಕಾರಕ್ಕೇಕೆ: ಆಕ್ಷೇಪ| ಅಧಿವೇಶನಕ್ಕೂ ಮುನ್ನ ಕೈಗೊಂಡ ಶೇ.1ರಷ್ಟುಮುನ್ನೆಚ್ಚರಿಕೆಯೂ ಶಾಲೆಗಳಲ್ಲಿ ಅಸಾಧ್ಯ


ಬೆಂಗಳೂರು(ಸೆ.29): ರಾಜ್ಯದಲ್ಲಿ ಕೊರೋನಾ ಸೋಂಕು ದಿನೇದಿನೇ ಹೆಚ್ಚುತ್ತಿದ್ದರೂ ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ಆರಂಭವಾಗಿದೆ. ಆದರೆ, ಶಾಸಕರು ಹಾಗೂ ಸಂಸದರಿಗೆ ಕೊರೋನಾ ತಗಲುವ ಭೀತಿಯಿಂದ ವಿಧಾನಮಂಡಲ ಹಾಗೂ ಸಂಸತ್ತಿನ ಕಲಾಪವನ್ನೇ ಮೊಟಕುಗೊಳಿಸಿದ ಸರ್ಕಾರಗಳು ಶಾಲೆಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದು ದ್ವಂದ್ವನೀತಿಯಲ್ಲವೇ ಎಂದು ಪೋಷಕರ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕೊರೋನಾ ಭೀತಿಯಿಂದಾಗಿ ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನವನ್ನು ಸರ್ಕಾರ ಈ ಬಾರಿ ಕೇವಲ ಎಂಟು ದಿನಕ್ಕೆ ನಿಗದಿಪಡಿಸಿತ್ತು. ಕಲಾಪದಲ್ಲಿ ಪಾಲ್ಗೊಳ್ಳುವ ಶಾಸಕರಿಗೆ ಕೊರೋನಾ ಸೋಂಕು ತಗಲಬಹುದು ಎಂದು ಸಾಕಷ್ಟುಮುನ್ನೆಚ್ಚರಿಕೆಯನ್ನೂ ವಹಿಸಿತ್ತು. ಆದರೂ, ನಂತರ ರಾಜ್ಯದಲ್ಲಿ ಕೊರೋನಾ ಹರಡುವ ಪ್ರಮಾಣ ಹೆಚ್ಚುತ್ತಿರುವುದನ್ನು ಮನಗಂಡು ಎರಡು ದಿನ ಮೊದಲೇ ಕಲಾಪವನ್ನು ಅಂತ್ಯಗೊಳಿಸಿತು. ಕೊರೋನಾ ಸೋಂಕಿತ ಶಾಸಕರು ಸದನಕ್ಕೆ ಬರಬೇಕಾಗುತ್ತದೆ ಎಂಬ ಕಾರಣದಿಂದ ಸರ್ಕಾರವು ತನ್ನ ಅಳಿವು-ಉಳಿವಿನ ಪ್ರಶ್ನೆಯಾಗಿದ್ದ ಅತ್ಯಂತ ಮಹತ್ವದ ಅವಿಶ್ವಾಸ ನಿರ್ಣಯವನ್ನೇ ಧ್ವನಿಮತದಲ್ಲಿ ಅಂಗೀಕರಿಸಿ ಮುಗಿಸಿತು. ಅತ್ತ ಸಂಸತ್ತಿನಲ್ಲೂ 18 ದಿನಕ್ಕೆ ನಿಗದಿಪಡಿಸಿದ್ದ ಅಧಿವೇಶನವನ್ನು ಕೇವಲ ಎಂಟು ದಿನಕ್ಕೆ ಮೊಟಕುಗೊಳಿಸಲಾಯಿತು.

Tap to resize

Latest Videos

"

ಈ ನಡುವೆ ಮಧ್ಯಪ್ರದೇಶ, ಅಸ್ಸಾಂ ಮುಂತಾದ ಆರೇಳು ರಾಜ್ಯಗಳಲ್ಲಿ ಶಾಲೆಗಳನ್ನು ಪುನಾರಂಭ ಮಾಡಿರುವುದರಿಂದ ಕರ್ನಾಟಕ ಸರ್ಕಾರ ಕೂಡ ಶಾಲೆಗಳನ್ನು ತೆರೆಯಲು ಉತ್ಸುಕವಾಗಿದೆ. ಖಾಸಗಿ ಶಾಲೆಗಳಿಗೆ ನಷ್ಟವಾಗುತ್ತಿದೆ, ಶುಲ್ಕ ಸಂಗ್ರಹವಾಗದೆ ಇರುವುದರಿಂದ ಶಿಕ್ಷಕರಿಗೆ ಸಂಬಳ ನೀಡಲು ಆಗುತ್ತಿಲ್ಲ ಎಂಬ ನೆಪ ಹೇಳಿ ‘ಕೊರೋನಾದೊಡ್ಡಿಗೆ’ ಮಕ್ಕಳನ್ನು ದೂಡಲು ಮುಂದಾಗಿದೆ. ಅಂದರೆ, ಜನಪ್ರತಿನಿಧಿಗಳ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ ಮಕ್ಕಳ ಬಗ್ಗೆ ಇಲ್ಲವೇ ಎಂಬ ಪ್ರಶ್ನೆ ಪೋಷಕರಿಂದ ಕೇಳಿಬಂದಿದೆ.

ರಾಜ್ಯ ಸರ್ಕಾರ ಈಗಾಗಲೇ ಪ್ರೌಢಶಾಲೆ, ಪಿಯುಸಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯಬಿದ್ದಾಗ ಶಾಲೆ-ಕಾಲೇಜಿಗೆ ಹೋಗಿ ಬರಲು ಅನುಮತಿ ನೀಡಿದೆ. ಅದಕ್ಕೇ ಪೋಷಕರಿಂದ ವಿರೋಧವಿದೆ. ಆದರೂ ಪ್ರವೇಶ ಪ್ರಕ್ರಿಯೆಗಾಗಿ ವಿದ್ಯಾರ್ಥಿಗಳು ಸಾಕಷ್ಟುಸಂಖ್ಯೆಯಲ್ಲಿ ಅನಿವಾರ್ಯವಾಗಿ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಇದರ ಜೊತೆಗೆ, ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜುಗಳವರೆಗೆ ಎಲ್ಲ ಶಿಕ್ಷಕರು ಮತ್ತು ಉಪನ್ಯಾಸಕರು ಪ್ರತಿದಿನ ಶಾಲೆ-ಕಾಲೇಜುಗಳಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಈಗ ಪ್ರಾಥಮಿಕ ಶಾಲೆಗಳನ್ನೂ ತೆರೆಯಲು ಉತ್ಸುಕವಾಗಿರುವ ಸರ್ಕಾರ, ಎಲ್ಲ ಶಾಸಕರು ಹಾಗೂ ಸಚಿವರು ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೋರಿದೆ.

ಹೀಗಾಗಿ, ಆಳುವವರ ಆರೋಗ್ಯದ ಬಗ್ಗೆ ಸಾಕಷ್ಟುಕಾಳಜಿ ಹೊಂದಿರುವ ಸರ್ಕಾರ ಪ್ರಜೆಗಳ, ಅದರಲ್ಲೂ ಎಳೆಯ ಮಕ್ಕಳ ಆರೋಗ್ಯದ ವಿಷಯದಲ್ಲಿ ಹಾಗೂ ಶಿಕ್ಷಕರ ಆರೋಗ್ಯದ ವಿಷಯದಲ್ಲಿ ಏಕೆ ಚೆಲ್ಲಾಟವಾಡಲು ಹೊರಟಿದೆ ಎಂಬ ಪ್ರಶ್ನೆಯನ್ನು ಪೋಷಕರು ಎತ್ತಿದ್ದಾರೆ.

ಶಾಲೆಗಳಲ್ಲಿ ಸಾಮಾಜಿಕ ಅಂತರ ಅಸಾಧ್ಯ:

ಸಂಸತ್‌ ಹಾಗೂ ವಿಧಾನಮಂಡಲದ ಕಲಾಪ ನಡೆಸುವ ಮುನ್ನ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವರದಿಗೆ ತೆರಳುವ ಪತ್ರಕರ್ತರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ನಂತರ ಶಾಸನಸಭೆಯಲ್ಲಿ ಆಸನಗಳನ್ನು ದೂರದೂರಕ್ಕೆ ಹಾಕಿ, ಅವುಗಳ ಮಧ್ಯೆ ಫೈಬರ್‌ ಶೀಟ್‌ ಅಳವಡಿಸಿ, ಪ್ರತಿದಿನ ಸ್ಯಾನಿಟೈಸ್‌ ಮಾಡಿ ಸಾಕಷ್ಟುಮುನ್ನೆಚ್ಚರಿಕೆ ವಹಿಸಲಾಗುತ್ತಿತ್ತು. ಕೆಲವೇ ನೂರು ಸಂಖ್ಯೆಯಲ್ಲಿರುವ ಜನಪ್ರತಿನಿಧಿಗಳ ವಿಷಯದಲ್ಲಿ ಇಷ್ಟುಮುನ್ನೆಚ್ಚರಿಕೆ ತೆಗೆದುಕೊಂಡರೂ ಈಗ ಕಲಾಪ ಮುಗಿದ ಮೇಲೆ ಕೆಲ ಶಾಸಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇಷ್ಟಕ್ಕೂ ವಿಧಾನಮಂಡಲ ಹಾಗೂ ಸಂಸತ್ತಿನ ಅಧಿವೇಶನಕ್ಕೂ ಮುನ್ನ ಕೆಲವೇ ನೂರು ಸಂಖ್ಯೆಗಳಲ್ಲಿರುವ ಜನಪ್ರತಿನಿಧಿಗಳ ವಿಷಯದಲ್ಲಿ ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆಯ ಶೇ.1ರಷ್ಟುಮುನ್ನೆಚ್ಚರಿಕೆಯನ್ನೂ ಲಕ್ಷಾಂತರ ಸಂಖ್ಯೆಯಲ್ಲಿರುವ ಶಾಲಾ ಮಕ್ಕಳ ವಿಷಯದಲ್ಲಿ ಕೈಗೊಳ್ಳಲು ಸಾಧ್ಯವಿಲ್ಲ. ಇನ್ನು, ಪುಟ್ಟಪುಟ್ಟಮಕ್ಕಳು ಶಾಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೆಯೇ? ಅವರು ಒಬ್ಬರ ಸಮೀಪ ಒಬ್ಬರು ಹೋಗದಂತೆ ಶಿಕ್ಷಕರು ನೋಡಿಕೊಳ್ಳುವುದು ಸಾಧ್ಯವಿದೆಯೇ? ಖಂಡಿತ ಇಲ್ಲ ಎನ್ನುತ್ತಾರೆ ಪೋಷಕರು.

ಮಕ್ಕಳು ಕೊರೋನಾ ಕ್ಯಾರಿಯರ್‌ ಆಗಬಹುದು:

60 ವರ್ಷ ಮೇಲ್ಪಟ್ಟವರು ಹೇಗೆ ಕೊರೋನಾದ ರಿಸ್ಕ್‌ ಅಧಿಕವಿರುವ ವರ್ಗದಲ್ಲಿ ಬರುತ್ತಾರೋ ಹಾಗೆಯೇ 10 ವರ್ಷಕ್ಕಿಂತ ಕೆಳಗಿನ ಮಕ್ಕಳೂ ಅಧಿಕ ರಿಸ್ಕ್‌ ವರ್ಗದಲ್ಲೇ ಬರುತ್ತಾರೆ. ಆದ್ದರಿಂದ ವಯಸ್ಸಾದ ಜನಪ್ರತಿನಿಧಿಗಳಿಗೆ ಕೊರೋನಾ ಬರುತ್ತದೆ ಎಂದು ಕಾಳಜಿ ತೋರಿ ಅಧಿವೇಶನಗಳನ್ನು ಮೊಟಕುಗೊಳಿಸಿದ ಸರ್ಕಾರ ಪುಟ್ಟಮಕ್ಕಳಿಗೆ ಕೊರೋನಾ ತಗಲುವ ಅಪಾಯವನ್ನು ಅರ್ಥಮಾಡಿಕೊಳ್ಳದಿದ್ದರೆ ಅದು ದ್ವಂದ್ವ ನೀತಿಯಾಗುವುದಿಲ್ಲವೇ? ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಶಾಲೆಗೆ ಹೋಗಿ ಕೊರೋನಾ ಅಂಟಿಸಿಕೊಂಡರೆ ಮನೆಮಂದಿಗೆಲ್ಲ ಕೊರೋನಾ ಹರಡುವ ಅಪಾಯವಿರುತ್ತದೆ. ಹೆಚ್ಚಿನ ರೋಗನಿರೋಧಕ ಶಕ್ತಿಯಿರುವ ಮಕ್ಕಳು ಕೊರೋನಾವನ್ನು ಗೆದ್ದರೂ ಮನೆಗಳಲ್ಲಿರುವ ವಯಸ್ಸಾದವರು ಅವರಿಂದಾಗಿ ಅಪಾಯಕ್ಕೆ ಸಿಲುಕಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

click me!