
ಬೆಂಗಳೂರು (ಜು.18): ದೇಶದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan) ಅಡಿಯಲ್ಲಿ ಕೇಂದ್ರ ಸರ್ಕಾರದಂತೆ ವಾರ್ಷಿಕ 6 ಸಾವಿರ ರೂ. ನೀಡಿದರೆ, ಕರ್ನಾಟಕ ಸರ್ಕಾರವು ರಾಜ್ಯದ ಅರ್ಹ ಫಲಾನುಭವಿಗಳಿಗೆ ವಾರ್ಷಿಕ ತಲಾ 4,000 ರೂ. ಧನ ಸಹಾಯ ನೀಡುತ್ತಿದೆ. ಆದರೆ, ಈಗ ಆಡಳಿತಕ್ಕೆ ಬಂದಿರುವ ಕಾಂಗ್ರಸ್ ಸರ್ಕಾರವು, ಈ ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ ವಾರ್ಷಿಕ ಲಾ 4 ಸಾವಿರ ರೂ. ಹಣ ನೀಡುವ ಕೃಷಿ ಸಮ್ಮಾನ್ ಯೋಜನೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿದಂತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ ರೀತಿ ಕೃಷಿ ಸಮ್ಮಾನ್ ಯೋಜನೆ ಸ್ಥಗಿತದ ಬಗ್ಗೆ ಸಾಕ್ಷಿಯಾಗುತ್ತಿದೆ.
50 ಲಕ್ಷ ರೈತರು ಪಡೆಯುತ್ತಿದ್ದ ವಾರ್ಷಿಕ 4 ಸಾವಿರ ರೂ. ಸ್ಥಗಿತ: ರಾಜ್ಯದಲ್ಲಿ ಒಟ್ಟು 51 ಲಕ್ಷ ರೈತರು ವಾರ್ಷಿಕ ಕೃಷಿ ಸಮ್ಮಾನ್ ಯೋಜನೆ ಅಡಿಯಲ್ಲಿ ತಲಾ 4 ಸಾವಿರ ರೂ.ಗಳನ್ನು ಪಡೆಯುತ್ತಿದ್ದರು. ಜೊತೆಗೆ, ಕೇಂದ್ರ ಸರ್ಕಾರದಿಂದ ವಾರ್ಷಿಕ ತಲಾ 6 ಸಾವಿರ ರೂ. ಸೇರಿ ಕರ್ನಾಟಕದ ರೈತರು ವಾರ್ಷಿಕ 10 ಸಾವಿರ ರೂ. ಹಣವನ್ನು ಪಡೆದುಕೊಳ್ಳುತ್ತಿದ್ದರು. ಒಂದು ವೇಳೆ ಈಗ ಕರ್ನಾಟಕದ ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸಿದರೆ ರೈತರಿಗೆ ಸಿಗುತ್ತಿದ್ದ 4 ಸಾವಿರ ರೂ. ಹಣ ಬರುವುದು ಸ್ಥಗಿತವಾಗಲಿದೆ. ಒಟ್ಟಾರೆ, ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೃಷಿ ಸಮ್ಮಾನ್ ಯೋಜನೆಗೆ ಬಹುತೇಕ ಎಳ್ಳುನೀರು ಬಿಟ್ಟಂತೆ ಗೋಚರವಾಗುತ್ತಿದೆ.
ಕೃಷಿ ಭಾಗ್ಯ ಯೋಜನೆ ಮರುಜಾರಿ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಅವಧಿಯಲ್ಲಿ ರೈತರಿಗೆ ಅನುಕೂಲ ಆಗುವಂತಹ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದರು. ಇದರಡಿ ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಹಾಗೂ ಯಾಂತ್ರೀಕೃತ ಕೃಷಿ ಉಪಕರಣ ಖರೀದಿಗೆ ಅನುಕೂಲ ಆಗಲಿದೆ. ಕಾಂಗ್ರೆಸ್ ಅವಧಿಯಲ್ಲಿ ಕೃಷಿಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಕೆ ಮಾಡಿ ಕೃಷಿ ಹೊಂಡ ನಿರ್ಮಿಸಿಕೊಂಡವರಿಗೆ ಅನುಕೂಲ ಆಗಿದೆ. ಇನ್ನು ಬೆಳೆಯ ಇಳುವರಿಯೂ ಶೇ.30 ಹೆಚ್ಚಳ ಆಗಿತ್ತು. ಈಗ ಪುನಃ ಜಾರಿಗೆ ತರುತ್ತಿರುವುದು ಸಂತಸದ ವಿಚಾರವಾಗಿದೆ. ಆದರೆ, ಈ ಯೋಜನೆಯನ್ನು ಪಡೆಯಲು ಎಲ್ಲ ರೈತರು ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಎಷ್ಟು ರೈತರಿಗೆ ಈ ಯೋಜನೆ ತಲುಪಲಿದೆ ಎಂಬುದು ಮಾತ್ರ ಪ್ರಶ್ನಾತೀತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ