ಕೆಂಪೇಗೌಡ ಏರ್‌ಪೋರ್ಟ್ ರಾಡಾರ್‌ನಿಂದ ವಾಯುಪಡೆ ವಿಮಾನಗಳ ಮೇಲೆ ಕಣ್ಗಾವಲು!

By Suvarna News  |  First Published Dec 18, 2019, 12:39 PM IST

ವಾಯುಪಡೆ- ಏರ್‌ಪೋರ್ಟ್‌ ರಾಡಾರ್‌ ಸಂಯೋಜನೆ ಒಪ್ಪಿಗೆ| ಭಾರತದಲ್ಲೇ ಮೊದಲ ಬಾರಿಗೆ ನಾಗರಿಕ- ಮಿಲಿಟರಿ ರಾಡಾರ್‌ ಸಂಯೋಜನೆ|  ವಿಮಾನಗಳ ಸಂಚಾರದಲ್ಲಿ ಅವಘಡ ತಪ್ಪಿಸಲು ಮಹತ್ವದ ಒಪ್ಪಂದಕ್ಕೆ ಸಹಿ


ಬೆಂಗಳೂರು[ಡಿ.18]: ಭಾರತೀಯ ವಾಯುಪಡೆಗೆ ಸೇರಿದ ವಿಮಾನಗಳ ಹಾರಾಟದ ಮೇಲೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಬಿ)ದ ರಾಡಾರ್‌ಗಳ ಮೂಲಕ ಕಣ್ಣಿಡಲು ಭಾರತೀಯ ವಾಯುಪಡೆ ಮುಂದಾಗಿದೆ. ಈ ಕುರಿತಂತೆ ಅದು ಕೆಐಎಬಿ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದಾಗಿ ಇನ್ನು ಮುಂದೆ ಯಲಹಂಕದಲ್ಲಿರುವ ಭಾರತೀಯ ವಾಯುಪಡೆ ರಾಡಾರ್‌ಗಳ ಜೊತೆಗೆ ಕೆಂಪೇಗೌಡ ವಿಮಾನ ನಿಲ್ದಾಣ ಮೂಲಕವೂ ವಾಯುಪಡೆ ವಿಮಾನಗಳ ಸಂಚಾರದ ಮೇಲೆ ನಿಗಾ ಇಡಲಾಗುವುದು.

ಮಿಲಿಟರಿ ಮತ್ತು ನಾಗರಿಕ ವಿಮಾನ ಸೇವೆಯನ್ನು ಹೀಗೆ ಸಂಜಯೋಜನೆಗೊಳಿಸಿ ಬಳಸುತ್ತಿರುವುದು ಭಾರತದಲ್ಲಿ ಇದೇ ಮೊದಲು. ಯಲಹಂಕ ವಾಯುನೆಲೆ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಪರಸ್ಪರ ಸಮೀಪದಲ್ಲೇ ಇರುವ ಕಾರಣ, ವಿಮಾನಗಳ ಸಂಚಾರದ ಮೇಲೆ ಅತ್ಯಂತ ಕರಾರುವಾಕ್‌ ನಿಯಂತ್ರಣ ಹೊಂದಿರುವುದು ಅತ್ಯಗತ್ಯ. ಹೊಸ ಒಪ್ಪಂದದಿಂದಾಗಿ ಎರಡೂ ನಿಲ್ದಾಣಗಳ ಸುಗಮ ಕಾರ್ಯಾಚರಣೆ ಸಾಧ್ಯವಾಗಲಿದೆ.

Tap to resize

Latest Videos

ಯಲಹಂಕ ವಾಯುನೆಲೆಯಲ್ಲಿ ತರಬೇತಿ ವಿಮಾನಗಳು ಹಾರಾಡುತ್ತಿರುವಾಗ, ಏರ್‌ಪೋರ್ಟ್‌ಗೆ ನಾಗರಿಕ ವಿಮಾನಗಳು ಕಾರ್ಯಾರಚಣೆ ನಡೆಸುತ್ತವೆ. ಎರಡಕ್ಕೂ ಪ್ರತ್ಯೇಕ ರಾಡಾರ್‌ ಇದ್ದರೂ, ಎರಡೂ ರಾಡಾರ್‌ಗಳ ನಡುವೆ ಸಂಯೋಜನೆ ಇಲ್ಲದಿರುವುದರಿಂದ ಏಕ ಕಾಲಕ್ಕೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಎರಡೂ ರಾಡಾರ್‌ಗಳನ್ನು ಸಂಯೋಜಿಸುವುದರಿಂದ ಉಭಯ ನಿಲ್ದಾಣಗಳಿಂದ ಹಾರಾಡುವ ಮಾಹಿತಿ ಎರಡೂ ಕಡೆ ಸಿಗಲಿದ್ದು, ಸುಗಮ ಕಾರ್ಯಾಚರಣೆಗೆ ಸಾಧ್ಯವಾಗಲಿದೆ.

click me!