
ಬೆಂಗಳೂರು (ಅ..22): ‘ನಾನು ಏನು ಮಾತನಾಡುತ್ತೇನೆ ಎಂಬುದು ನನ್ನ ಸ್ವಯಂ ನಿರ್ಧಾರ. ಯಾರೋ ಹೇಳಿದರೆಂಬ ಕಾರಣಕ್ಕೆ ನಾನು ಮಾತನಾಡುವುದಿಲ್ಲ. ಆದರೆ, ಪಕ್ಷಕ್ಕೆ ಧಕ್ಕೆಯಾಗುವಂತಹ ಹೇಳಿಕೆ ನೀಡಬೇಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರುವುದು ಸರಿಯಿದೆ. ಪಕ್ಷಕ್ಕೆ ಧಕ್ಕೆಯಾಗುವಂತಿದ್ದರೆ ನಾನು ಮಾತನಾಡುವುದಿಲ್ಲ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷಕ್ಕೆ ಹಾಗೂ ಲೋಕಸಭಾ ಚುನಾವಣೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಅಗತ್ಯ ಎಂಬುದಾಗಿ ಹೇಳಿದ್ದೆ. ಅದನ್ನು ಹೊರತುಪಡಿಸಿ ಯಾರೋ ಹೇಳಿದರೆಂಬ ಕಾರಣಕ್ಕೆಲ್ಲಾ ನಾನು ಮಾತನಾಡುವುದಿಲ್ಲ’ ಎಂದು ಹೇಳಿದರು.
ಆರೋಗ್ಯವಂತ ಸಮಾಜಕ್ಕಾಗಿ ಯೋಗ ಶಿಕ್ಷಣ ಟ್ರಸ್ಟ್: ಕೆ.ಎಂ. ರಾಜಣ್ಣ
‘ಕಾಂಗ್ರೆಸ್‌ನಿಂದ 136 ಶಾಸಕರು ಗೆದ್ದಿದ್ದೇವೆ ಎಂದು ಬೀಗುವ ಸ್ಥಿತಿಯಲ್ಲಿಲ್ಲ. ಲೋಕಸಭೆ ಚುನಾವಣೆಗೆ ನಿರ್ಲಕ್ಷ್ಯ ತೋರಬಾರದು. ಹಾಗಾಗಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಬಗ್ಗೆ ಮಾತನಾಡಿದ್ದೇನೆ. ಇದನ್ನು ಈಗಾಗಲೇ ಕೇಂದ್ರದ ನಾಯಕರ ಗಮನಕ್ಕೂ ತರಲಾಗಿದೆ’ ಎಂದರು.
ಪಕ್ಷಕ್ಕೆ ಮುಜುಗರ ಮಾಡುವ ಹೇಳಿಕೆಗಳನ್ನು ನೀಡಬಾರದು ಎಂದಿರುವ ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಪಕ್ಷಕ್ಕೆ ಮುಜುಗರ, ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ಅಧ್ಯಕ್ಷರು, ವರಿಷ್ಠರು ಹೇಳಿದ್ದಾರೆ. ಅದನ್ನು ಬಿಟ್ಟು ಏನೂ ಮಾತಾಡೋಕೆ ಯಾರೂ ಹೋಗಲ್ಲ. ಪಕ್ಷದ ಹಿತದೃಷ್ಟಿಯಿಂದ ನೀಡಿದ ಸಲಹೆಗಳನ್ನು ಸ್ವೀಕರಿಸುವುದು ಅವರಿಗೆ ಬಿಟ್ಟ ವಿಚಾರ’ ಎಂದು ತಿಳಿಸಿದರು.
ಎರಡೂವರೆ ವರ್ಷದ ನಂತರ ಸಂಪುಟ ಪುನಾರಚನೆಯಾದರೆ ಸಚಿವ ಸ್ಥಾನ ಬಿಟ್ಟು ಕೊಡುವಿರಾ ಎಂಬ ಪ್ರಶ್ನೆಗೆ, ‘ನನ್ನನ್ನು ನಾಳೆಯೇ ಸಂಪುಟದಿಂದ ತೆಗೆದರೂ ಸಂತೋಷ. ಅಧಿಕಾರಕ್ಕೆ ಅಂಟಿಕೊಂಡಿರುವ ವ್ಯಕ್ತಿಯಲ್ಲ. ಸಂತೋಷದಿಂದಲೇ ಹೊರ ಹೋಗುವೆ’ ಎಂದು ನಗುತ್ತಾ ಹೇಳಿದರು.
3 ಡಿಸಿಎಂ ಬೇಕೆಂಬ ಹೇಳಿಕೆಗೆ ಬದ್ಧ, ನಾನು ಡಿಸಿಎಂ ಆಗಲ್ಲ: ಸಚಿವ ರಾಜಣ್ಣ
ಸತೀಶ್ ಜಾರಕಿಹೊಳಿ ಅಸಮಾಧಾನದ ಬಗ್ಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರಿಗೆ ಅಸಮಾಧಾನ ಇರುವ ಬಗ್ಗೆ ನನಗೆ ಗೊತ್ತಿಲ್ಲ. ಅಸಮಾಧಾನ ಇದ್ದರೂ ಇರಬಹುದು. ಅದು ಪಕ್ಷದ ಹಂತದಲ್ಲೇ ಬಗೆಹರಿಯಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ