ನನ್ನ ಆಡಳಿತ ರಬ್ಬರ್‌ ಸ್ಟಾಂಪ್‌ ಅಲ್ಲ, ಬಿಜೆಪಿ ಸ್ಟಾಂಪ್‌: ಸಿಎಂ

By Kannadaprabha NewsFirst Published Jul 31, 2021, 7:59 AM IST
Highlights

* ನನಗೆ ಸಂಯಮ ಕಡಿಮೆ ಆಗಿಲ್ಲ, ಸಂಯಮ ಮೀರಿ ಮಾತನಾಡಿಲ್ಲ
*  ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗಿದೆ
*  ಸಿದ್ದರಾಮಯ್ಯ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ: ಬೊಮ್ಮಾಯಿ

ಬೆಂಗಳೂರು(ಜು.31): ನನ್ನ ಆಡಳಿತ ಬಿಜೆಪಿ ಸ್ಟಾಂಪ್‌ ಆಗಿರುತ್ತದೆಯೇ ಹೊರತು ಯಾರದೋ ವ್ಯಕ್ತಿಯ ಸ್ಟಾಂಪ್‌ ಆಗಿರುವುದಿಲ್ಲ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀಕ್ಷ್ಣವಾಗಿ ಹೇಳಿದ್ದಾರೆ. 

ಶುಕ್ರವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಬ್ಬರ್‌ ಸ್ಟಾಂಪ್‌ ಮುಖ್ಯಮಂತ್ರಿ ಎಂಬ ಮಾಜಿ ಮುಖ್ಯಮಂತ್ರಿಹೇಳಿಕೆಗೆ ತಿರುಗೇಟು ನೀಡಿದ ಅವರು, ಪ್ರತಿಪಕ್ಷ ನಾಯಕರಾಗಿ ಮಾತನಾಡಬೇಕು ಎಂಬ ಕಾರಣಕ್ಕಾಗಿ ಮಾತನಾಡಬಾರದು. ನನ್ನ ಆಡಳಿತ ಬಿಜೆಪಿ ಸ್ಟಾಂಪ್‌ ಆಗಿರುತ್ತದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜನಪ್ರಿಯ ಕಾರ್ಯಕ್ರಮಗಳ ಆಡಳಿತವಾಗಿರುತ್ತದೆ ಎಂದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಪರಿಣಾಮ ರಾಜ್ಯದ ಜನತೆ ಅವರ ಪಕ್ಷವನ್ನು ತಿರಸ್ಕರಿಸಿದರು. ಅವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಪಕ್ಷದಲ್ಲಿ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ತೀರ್ಮಾನವೇ ಆಗಿರಲಿಲ್ಲ. ಆಗ ಅವರು ಮನಬಂದಂತೆ ಮಾತನಾಡಿದರು. ಆ ರೀತಿ ಮಾತನಾಡುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಬೊಮ್ಮಾಯಿ ರಬ್ಬರ್‌ ಸ್ಟಾಂಪ್‌

ಹುಬ್ಬಳ್ಳಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಿರಬಹುದು. ಆದರೆ, ಬಿಜೆಪಿ ಸರ್ಕಾರ ಬದಲಾಗಿಲ್ಲ ಲೇವಡಿ ಮಾಡಿದರು.

ಮತ್ತೆ ಏರುತ್ತಿದೆ ಕೊರೋನಾ : ಗಡಿ ಜಿಲ್ಲೆಗಳ ಜತೆ ಇಂದು ಸಿಎಂ ಸಭೆ

ಬೆಳಗಾವಿ ವಿಭಾಗಮಟ್ಟದ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ಬೊಮ್ಮಾಯಿ ರಬ್ಬರ್‌ ಸ್ಟಾಂಪ್‌ ಸಿಎಂ ಅಂತ ನಾವೇನು ಆರೋಪವನ್ನೇ ಮಾಡಿಲ್ಲ. ಆದರೆ, ಅವರೇ ತಾವು ರಬ್ಬರ್‌ ಸ್ಟಾಂಪ್‌ ಅಲ್ಲ ಅಂತ ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಹೇಳುವ ಅರ್ಥವೇನು? ಅಂದರೆ ಅವರು ರಬ್ಬರ್‌ ಸ್ಟಾಂಪ್‌ ಅಂತ ಅರ್ಥ ತಾನೇ? ಹೀಗಾಗಿ, ನೂತನ ಸಿಎಂ ರಬ್ಬರ್‌ ಸ್ಟಾಂಪ್‌ ಸಿಎಂ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಸಚಿವರಾಗಿದ್ದರು. ಈಗ ಸಿಎಂ ಆಗಿದ್ದಾರೆ. ಆದರೆ ಭ್ರಷ್ಟಾಚಾರ ಕಡಿಮೆ ಆಗಿಲ್ಲ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ನಮಗೆ ಸಂಯಮ ಕಡಿಮೆ ಆಗಿದೆ ಅಂತಾ ಹೇಳಿದ್ದಾರೆ. ಆದರೆ, ನನಗೆ ಸಂಯಮ ಕಡಿಮೆ ಆಗಿಲ್ಲ. ನಾನು ಸಂಯಮ ಮೀರಿ ಮಾತನಾಡಿಲ್ಲ. ಶಾಂತವಾಗಿ ಸಹನೆಯಿಂದ ಸಮಾಧಾನದಿಂದಲೇ ಇದ್ದೇನೆ ಎಂದು ಬಿಎಸ್‌ವೈಗೆ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಬಂದ ಸಂದರ್ಭದಲ್ಲಿ ಬಿಜೆಪಿಯವರು ಅಧಿಕಾರಕ್ಕೆ ಓಡಾಡುತ್ತಿದ್ದಾರೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಕಾಟಾಚಾರದ ಪ್ರವಾಸ ಮಾಡಿದ್ದಾರೆ. ಉತ್ತರ ಕನ್ನಡಕ್ಕೆ ಅಷ್ಟೇ ಹೋಗಿ ಬಂದು ದೆಹಲಿಗೆ ಹೋಗಿ ಕುಳಿತ್ತಿದ್ದಾರೆ. ಬಿಜೆಪಿಯವರು ದೆಹಲಿ ಹೋಗಿ ಕುಳಿತು ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕೂಡಲೇ ಮಂತ್ರಿ ಮಂಡಳವನ್ನು ರಚಿಸಬೇಕು. ನೆರೆ ಪ್ರದೇಶಗಳಿಗೆ ಮಂತ್ರಿಗಳನ್ನು ಕಳುಹಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗಿದೆ. ನೂತನ ಸಿಎಂ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಶಾಸನ ಹೆಚ್ಚಳ ಮಾಡಿದ್ದಾರೆ. ರೈತರ ಮಕ್ಕಳಿಗೆ ಯೋಜನೆ ಘೋಷಿಸಿದ್ದಾರೆ. ಆದರೆ ಕೊಡುವುದಕ್ಕೆ ಹಣ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು. ಸರ್ಕಾರಕ್ಕೆ ನ್ಯಾಯಯುತವಾಗಿ ಬರಬೇಕಾದ ಹಣವನ್ನು ಕೇಂದ್ರದಿಂದ ಪಡೆದುಕೊಂಡು ಬರಬೇಕೆಂದು ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಸಲಹೆ ನೀಡಿದ್ದಾರೆ.
 

click me!