ಮತ್ತೆ ಏರುತ್ತಿದೆ ಕೊರೋನಾ : ಗಡಿ ಜಿಲ್ಲೆಗಳ ಜತೆ ಇಂದು ಸಿಎಂ ಸಭೆ

By Kannadaprabha NewsFirst Published Jul 31, 2021, 7:52 AM IST
Highlights
  • ನೆರೆ ರಾಜ್ಯ ಕೇರಳದಲ್ಲಿ ದಿನದಿನವೂ ಏರುತ್ತಿದೆ ಕೋವಿಡ್‌ ಸೋಂಕು 
  • ಗಡಿ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ
  • ಕೈಗೊಳ್ಳಬೇಕಾದ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೂಚನೆ

ಬೆಂಗಳೂರು(ಜು.31):  ನೆರೆ ರಾಜ್ಯ ಕೇರಳದಲ್ಲಿ ಕೋವಿಡ್‌ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಲಿದ್ದಾರೆ.

ಶನಿವಾರ ಸಂಜೆ 5.30ಕ್ಕೆ ಗೃಹ ಕಚೇರಿ ಕೃಷ್ಣಾದಿಂದ ಮುಖ್ಯಮಂತ್ರಿ ಬೊಮ್ಮಾಯಿ ವಿಡಿಯೋ ಸಂವಾದ ನಡೆಸಿ ಅಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಅಲ್ಲದೆ, ಬೆಂಗಳೂರು ನಗರದ ಅಧಿಕಾರಿಗಳು ಸಹ ಭಾಗಿಯಾಗಲಿದ್ದು, ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ.

ಕೇರಳದಲ್ಲಿ ಕೊರೋನಾ ಭಾರಿ ಏರಿಕೆ : ಕರ್ನಾಟದಲ್ಲಿ ಹೈ ಅಲರ್ಟ್

ಈ ಬಗ್ಗೆ ಶುಕ್ರವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಶನಿವಾರ ಸಂಜೆ ಬೆಂಗಳೂರಿಗೆ ತೆರಳಿದ ಬಳಿಕ ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆದುಕೊಳ್ಳಲಾಗುವುದು. ಕೇರಳದಲ್ಲಿ ಕೋವಿಡ್‌ ಸಂಖ್ಯೆ ಹೆಚ್ಚಳವಾಗಿರುವುದರಿಂದ ರಾಜ್ಯದ ಗಡಿ ಭಾಗದಲ್ಲಿ ಕೈಗೊಳ್ಳಬೇಕಾದ ಕ್ರಮ ಕುರಿತು ಚರ್ಚಿಸಿ ಅಗತ್ಯ ಸೂಚನೆಗಳನ್ನು ನೀಡಲಾಗುವುದು. ಕೇರಳದಲ್ಲಿ ಕೋವಿಡ್‌ ಹೆಚ್ಚಳವಾಗಿರುವ ಬಗ್ಗೆ ಕಳವಳವಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

click me!