
ಬೆಳಗಾವಿ(ಡಿ.13): ನಾನು ಜಾತಿ ಗಣತಿಗೆ ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಜಾತಿ ಗಣತಿಯ ಸಮೀಕ್ಷೆ ವೈಜ್ಞಾನಿಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಬೇಕು ಎಂಬುದಷ್ಟೇ ನಮ್ಮ ಅಭಿಮತ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ಸುವರ್ಣಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ನಮ್ಮ ಅನೇಕ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೆ, ಮನೆಗೆ ತೆರಳಿ ಸಮೀಕ್ಷೆ ನಡೆಸಿಲ್ಲ ಎಂದು ದೂರುಗಳು ಬಂದಿವೆ. ಎಲ್ಲಾ ಸಮುದಾಯಗಳು ಅವರ ಜನಸಂಖ್ಯೆಗೆ ಅನುಗುಣವಾಗಿ ತಮ್ಮ ಹಕ್ಕನ್ನು ಪಡೆಯಬೇಕು. ಅಲ್ಪಸಂಖ್ಯಾತರು, ಪರಿಶಿಷ್ಟರು ಸೇರಿದಂತೆ ಎಲ್ಲರೂ ತಮ್ಮ ಜನಸಂಖ್ಯೆ ಅನುಗುಣವಾಗಿ ಹಕ್ಕು ಹಾಗೂ ಅನುದಾನ ಕೇಳುತ್ತಾರೆ. ಈ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಮಾಡಲಾಗಿದೆಯೇ ಎಂಬ ವಿಚಾರವಾಗಿ ನಾವು ಸ್ಪಷ್ಟೀಕರಣ ಕೇಳಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಸಮಾಜದ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಕಾಂಗ್ರೆಸ್ ಪಕ್ಷದ ಬದ್ಧತೆಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಕೇಂದ್ರ ಸರ್ಕಾರದ ವರ್ಗೀಕರಣದ ಅನ್ವಯ ನಾನು ಕೂಡ ಇತರೆ ಹಿಂದುಳಿದ ವರ್ಗದ ಸಮುದಾಯದ ನಾಯಕ. ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ನೋಡಬೇಕು ಎಂದು ತಿಳಿಸಿದರು.
ಜಾತಿಗಣತಿ ವಿರೋಧಕ್ಕೆ ಎಲ್ಲ ಮೇಲ್ವರ್ಗದವರು ಒಂದಾಗಿದ್ದಾರೆ: ಖರ್ಗೆ
ಜಾತಿ ಗಣತಿಯ ಕೆಲವು ದಾಖಲೆಗಳು ಕಾಣೆಯಾಗಿರುವ ಬಗ್ಗೆ ವರದಿಗಳಿವೆ ಎಂಬುದಾಗಿ ಸುದ್ದಿಗಾರರು ಕೇಳಿದ್ದಕ್ಕೆ ಉತ್ತರಿಸಿದ ಅವರು, ಈ ವಿಚಾರ ನನಗೆ ಗೊತ್ತಿಲ್ಲ. ನಾನು ಈ ಬಗ್ಗೆ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಮಾತನಾಡಿದ್ದು, ಈ ವರದಿಗೆ ಕಾರ್ಯದರ್ಶಿಗಳ ಸಹಿ ಇಲ್ಲವೆಂಬ ಮಾಹಿತಿ ಪಡೆದಿದ್ದೇನೆ. ಕಾರ್ಯದರ್ಶಿಗಳ ಸಹಿ ಇಲ್ಲದೇ ಅದು ಹೇಗೆ ಸಿಂಧುವಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ತಿಳಿಸಿದರು.
ಬೇರೆ ಪಕ್ಷಕ್ಕೆ ಹೋಗಲು ನಾನು ಹುಚ್ಚನಲ್ಲ: ಡಿಕೆಶಿ
ಲೋಕಸಭೆ ಚುನಾವಣೆ ನಂತರ ಪ್ರಭಾವಿ ಸಚಿವರು 50-60 ಶಾಸಕರ ಸಮೇತ ಬಿಜೆಪಿ ಸೇರುತ್ತಾರೆ ಎಂಬ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನಿಮ್ಮನ್ನೇ ಗುರಿ ಮಾಡಿರುವಂತಿದೆ ಎಂದು ಕೇಳಿದಾಗ, ನಾನು ಹುಟ್ಟುತ್ತಲೇ ಕಾಂಗ್ರೆಸಿಗ. ಬೇರೆ ಪಕ್ಷಕ್ಕೆ ಹೋಗಲು ನಾನು ಹುಚ್ಚನಲ್ಲ. ನನಗೆ ನನ್ನದೇ ಆದ ಮೂಲ ಆದರ್ಶಗಳಿವೆ. ನನಗೆ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಅಪಾರವಾದ ನಂಬಿಕೆ ಇದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ