ಕೇವಲ 10 ನಿಮಿಷದಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಯಾಣ!

By Kannadaprabha News  |  First Published Sep 28, 2020, 7:21 AM IST

ಬೆಂಗಳೂರು ನಗರದಲ್ಲಿ ಹೈಪರ್‌ಲೂಪ್‌ ಪ್ರಯೋಗ| ವರ್ಜಿನ್‌ ಕಂಪನಿಯೊಂದಿಗೆ ಏರ್‌ಪೋರ್ಟ್‌ ನಿಗಮ ಒಡಂಬಡಿಕೆ| ಹೈಪರ್‌ಲೂಪ್‌ ಎಂಬುದು ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸಬಹುದಾದ ಹಾಗೂ ವಿದೇಶಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ತಂತ್ರಜ್ಞಾನ| 


ಬೆಂಗಳೂರು(ಸೆ.28): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಬಿ) ಅತೀ ವೇಗದ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. ಸಂಸ್ಥೆ (ಬಿಐಎಎಲ್‌) ವರ್ಜಿನ್‌ ಹೈಪರ್‌ಲೂಪ್‌ ಕಂಪನಿ ಜೊತೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ.

ಭಾನುವಾರ ಬೆಂಗಳೂರಿನಲ್ಲಿ ನಡೆದ ವರ್ಚುವಲ್‌ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬಿಐಎಎಲ್‌ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್‌ ಮತ್ತು ವರ್ಜಿನ್‌ ಹೈಪರ್‌ಲೂಪ್‌ ಅಧ್ಯಕ್ಷ ಸುಲ್ತಾನ್‌ ಬಿನ್‌ ಸುಲಾಯೆಮ್‌ ಒಪ್ಪಂದಕ್ಕೆ ಸಹಿ ಹಾಕಿದರು.

Tap to resize

Latest Videos

ಬಳಿಕ ಮಾತನಾಡಿದ ಟಿ.ಎಂ.ವಿಜಯಭಾಸ್ಕರ್‌, ಈ ಸಾರಿಗೆ ಸೌಲಭ್ಯ ಯೋಜನೆಯನ್ನು ಎರಡು ಹಂತದಲ್ಲಿ ಆರು ತಿಂಗಳಲ್ಲಿ ಪೂರ್ಣಗೊಳಿಸಲಿದ್ದೇವೆ. ಗಂಟೆಗೆ 1080 ಕಿ.ಮೀ ವೇಗದ ಹೈಪರ್‌ಲೂಪ್‌ ಅಳವಡಿಕೆ ಮೂಲಕ ಹೆಚ್ಚು ಸಂಚಾರ ದಟ್ಟಣೆ ನಗರ ಪ್ರದೇಶದಿಂದ ಕೇವಲ ಹತ್ತು ನಿಮಿಷದಲ್ಲಿ ಕೆಐಎಬಿಗೆ ತಲುಪಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕಾರ್ಯಸಾಧ್ಯತೆಯ ತಾಂತ್ರಿಕ, ಆರ್ಥಿಕ ಮತ್ತು ಹೈಪರ್‌ಲೂಪ್‌ ಅಳವಡಿಕೆಗೆ ಲಭ್ಯವಿರುವ ಮಾರ್ಗದ ಕುರಿತು ಅಧ್ಯಯನ ನಡೆಲಾಗುವುದು ಎಂದು ವಿವರಿಸಿದರು.

ದೇಶದಲ್ಲೇ ಮೊದಲು ಕೆಂಪೇಗೌಡ ಏರ್‌ಪೋರ್ಟ್‌ 10 ಸಾವಿರ ಚದರಡಿ ವಿಸ್ತೀರ್ಣದ ಗೋದಾಮು

ಸಂಸ್ಥೆಯ ಅಧ್ಯಕ್ಷ ಸುಲ್ತಾನ್‌ ಬಿನ್‌ ಸುಲಾಯೆಮ್‌ ಮಾತನಾಡಿ, ಈ ಯೋಜನೆಯಿಂದ ಸಂಚಾರಕ್ಕೆ ಮಾತ್ರವಲ್ಲದೆ, ವಸ್ತುಗಳ ಶೀಘ್ರ ಸಾಗಣೆ ಸುಧಾರಿಸುತ್ತದೆ. ಹೈಪರ್‌ಲೂಪರ್‌ ಮಾರ್ಗ ವ್ಯವಸ್ಥೆ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗಲಿದೆ ಎಂದರು. ಸಭೆಯಲ್ಲಿ ಕರ್ನಾಟಕ ಸರ್ಕಾರದ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌, ಬಿಇಎಲ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಹರಿ ಮರಾರ್‌ ಉಪಸ್ಥಿತರಿದ್ದರು.

ಹೈಪರ್‌ಲೂಪ್‌ ವಿಶೇಷತೆ

ಹೈಪರ್‌ಲೂಪ್‌ ಎಂಬುದು ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬಹುದಾದ ಹಾಗೂ ವಿದೇಶಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ತಂತ್ರಜ್ಞಾನ. ಇಲ್ಲಿ ಕಡಿಮೆ ಗಾಳಿಯ ಒತ್ತಡದ ಟ್ಯೂಬ್‌ಗಳನ್ನು ಬಳಸಲಾಗುತ್ತದೆ. ಏರ್‌ ಬೇರಿಂಗ್‌ಗಳ ಸಹಾಯದಿಂದ ಕಡಿಮೆ ಒತ್ತಡದ ಪ್ರದೇಶವಾದ ಕೊಳವೆ ಮಾರ್ಗದಲ್ಲಿ ಓಡಿಸಬಲ್ಲ ವಾಹನ ವ್ಯವಸ್ಥೆ ಇದಾಗಿದೆ. ಇದರಲ್ಲಿ ಪ್ರಯಾಣಿಕರು ಗಂಟೆಗೆ 1300 ಕಿ.ಮೀ. ಕ್ರಮಿಸಬಹುದಾಗಿದೆ. ಸದ್ಯ ಸಂಚಾರ ದಟ್ಟಣೆಯಿಂದಾಗಿ ನಗರದಿಂದ ವಿಮಾನ ನಿಲ್ದಾಣ ತಲುಪಲು ಒಂದು ಗಂಟೆ, ಒಮ್ಮೊಮ್ಮೆ ಗಂಟೆಗೂ ಹೆಚ್ಚು ಕಾಲ ಪ್ರಯಾಣ ಮಾಡಬೇಕಿದೆ. ಹೆಚ್ಚು ಕಾಲ ಪ್ರಯಾಣದ ತೊಂದರೆ ತಪ್ಪಿಸಲು ಈ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಮುಂದಿನ ವರ್ಷಾಂತ್ಯಕ್ಕೆ ನೂತನ ಸಾರಿಗೆ ಸೇವೆ ನಿರೀಕ್ಷಿಸಬಹುದು.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತೀ ವೇಗವಾಗಿ ಪ್ರಯಾಣಿಕರನ್ನು ತಲುಪಿಸುವ ಯೋಜನೆಯ ಒಪ್ಪಂದಕ್ಕೆ ವರ್ಚುವಲ್‌ ಸಭೆ ಮೂಲಕ ಬಿಐಎಎಲ್‌ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್‌ ಮತ್ತು ವರ್ಜಿನ್‌ ಹೈಪರ್‌ಲೂಪ್‌ ಅಧ್ಯಕ್ಷ ಸುಲ್ತಾನ್‌ ಬಿನ್‌ ಸುಲಾಯೆಮ್‌ ಸಹಿ ಹಾಕಿದರು. ರಾಜ್ಯ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌, ಬಿಇಎಲ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಹರಿ ಮರಾರ್‌ ಸಭೆಯಲ್ಲಿದ್ದರು.
 

click me!