
ಬೆಂಗಳೂರು(ಸೆ.28): ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ಸೇರಿದಂತೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆಗಳ ಜಾರಿಗೆ ವಿರೋಧಿಸಿ ಸೋಮವಾರ ರೈತ ಪರ ಸಂಘಟನೆಗಳ ಪ್ರತಿಭಟನೆಗೆ ರಾಜಧಾನಿಯಲ್ಲಿ ಅನುಮತಿ ನೀಡಿಲ್ಲ. ಪ್ರತಿಭಟನೆ ನಡೆಸಿದರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ‘ಕನ್ನಡಪ್ರಭ’ ಜತೆ ಭಾನುವಾರ ಮಾತನಾಡಿದ ಆಯುಕ್ತರು, ಇದುವರೆಗೆ ಪೊಲೀಸರಲ್ಲಿ ಬಂದ್ ಅಥವಾ ಪ್ರತಿಭಟನೆಗೆ ಯಾವ ಸಂಘಟನೆಯವರು ಅನುಮತಿ ಕೇಳಿಲ್ಲ. ಅನುಮತಿ ಕೇಳದೆ ನಾವು ಹೇಗೆ ಅವಕಾಶ ಕೊಡಲು ಸಾಧ್ಯವಾಗುತ್ತದೆ. ಕಾನೂನು ಉಲ್ಲಂಘಿಸಿ ಪ್ರತಿಭಟನೆಗಿಳಿದರೆ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದರು.
ಕೊರೋನಾ ಸೋಂಕು ನಿಯಂತ್ರಣಕ್ಕೆ ಗುಂಪು ಸೇರದಂತೆ ಕೆಲವು ನಿಯಮಗಳು ಜಾರಿಯಲ್ಲಿವೆ. ಪುರಭವನದಿಂದ ಫ್ರೀಡಂ ಸ್ವಾತಂತ್ರ್ಯ ಉದ್ಯಾನವರೆಗೆ ಪ್ರತಿಭಟನೆ ರಾರಯಲಿ ನಡೆಸುವುದಾಗಿ ಸಂಘಟನೆಗಳು ಪ್ರಕಟಿಸಿವೆ. ಆದರೆ ಯಾರೊಬ್ಬರು ಪೊಲೀಸರಿಂದ ಪೂರ್ವಾನುಮತಿ ಪಡೆದಿಲ್ಲ. ಹಾಗಾಗಿ ಕಾನೂನು ಮೀರಿ ನಡೆದರೆ ಕ್ರಮ ಎದುರಿಸಬೇಕಾಗುತ್ತದೆ. ಅನುಮತಿ ಕೇಳಿದರೆ ಪರಿಶೀಲಿಸಲಾಗುತ್ತದೆ. ಬಾಂಡ್ ಬರೆಸಿಕೊಂಡು ಅನುಮತಿ ಕೊಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.
ಮೋದಿ ಮಾತು ಮೀರದ ಸಿಎಂ: ರೈತರ ಜೊತೆ ಸಭೆ ವಿಫಲ, ಕರ್ನಾಟಕ ಬಂದ್ ಖಚಿತ
ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ನಗರದ ವಿವಿಧೆಡೆಯಿಂದ ಟೌನ್ ಹಾಲ್‌ವರೆಗೆ ಪ್ರತಿಭಟನಾ ಜಾಥಾಗಳಿಗೆ ಅವಕಾಶವಿಲ್ಲ. ಸರ್ಕಾರಿ ಬಸ್ ಸೇರಿದಂತೆ ಸಾರ್ವಜನಿಕರ ವಾಹನಗಳಿಗೆ ಓಡಾಟಕ್ಕೆ ಅಡ್ಡಿಪಡಿಸುವಂತಿಲ್ಲ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಬಲವಂತವಾಗಿ ಪ್ರತಿಭಟನೆಗೆ ಬೆಂಬಲ ಪಡೆಯಲು ಯತ್ನಿಸುವಂತಿಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾದರೆ ಸಂಘಟಕರೇ ಹೊಣೆಯಾಗಲಿದ್ದಾರೆ ಎಂದು ಕಮಲ್ ಪಂತ್ ಎಚ್ಚರಿಸಿದರು.
12 ಸಾವಿರ ಪೊಲೀಸರು ನಿಯೋಜನೆ:
ಈ ಬಂದ್ ಹಿನ್ನೆಲೆಯಲ್ಲಿ ಸೋಮವಾರ ನಗರ ವ್ಯಾಪ್ತಿಯಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚಿನ ಪೊಲೀಸರು ಭದ್ರತೆಯಲ್ಲಿ ತೊಡಗಲಿದ್ದಾರೆ. ಅಲ್ಲದೆ, 47 ರಾಜ್ಯ ಸಶಸ್ತ್ರ ಮೀಸಲು ಪಡೆಗಳು, 29 ನಗರ ಸಶಸ್ತ್ರ ಮೀಸಲು ಪಡೆಗಳು ಸಹ ಬಂದೋಸ್ತ್‌ಗೆ ನಿಯೋಜಿಸಲಾಗುತ್ತದೆ. ಹೆಚ್ಚುವರಿ ಆಯುಕ್ತರು, 10 ಡಿಸಿಪಿಗಳು ಸಹ ಭದ್ರತಾ ಉಸ್ತುವಾರಿ ನಡೆಸಲಿದ್ದಾರೆ ಎಂದು ಆಯುಕ್ತರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ