ತಾವೇ ಹೊಯ್ಸಳ ವಾಹನ ಚಲಾಯಿಸಿದ ಕಮಿಷನರ್‌!: ಹುಳಿಮಾವು ಕೆರೆಯತ್ತ ದೌಡು!

By Web DeskFirst Published Nov 25, 2019, 10:37 AM IST
Highlights

ತಾವೇ ಹೊಯ್ಸಳ ವಾಹನ ಚಲಾಯಿಸಿದ ಕಮಿಷನರ್‌!| ನೀರು ತುಂಬಿದ ಪ್ರದೇಶದಲ್ಲಿ ಭಾಸ್ಕರ್‌ ರಾವ್‌ ಗಸ್ತು, ಅಧಿಕಾರಿಗಳ ಸಾಥ್‌

ಬೆಂಗಳೂರು[ನ.25]: ಹುಳಿಮಾವು ಕೆರೆ ಕೋಡಿ ಒಡೆದಿದ್ದ ಪ್ರದೇಶಕ್ಕೆ ಖುದ್ದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಅವರು ಹೊಯ್ಸಳ ವಾಹನ ಚಾಲನೆ ಮಾಡಿಕೊಂಡು ಹೋಗಿ ನೀರು ತುಂಬಿದ್ದ ಪ್ರದೇಶಗಳಲ್ಲಿ ಗಸ್ತು ನಡೆಸಿದರು.

ತಮ್ಮ ವಾಹನ ಮತ್ತು ಚಾಲಕನ ಬಿಟ್ಟು ತಾವೇ ಹೊಯ್ಸಳ ವಾಹನ ಚಲಾಯಿಸಿಕೊಂಡು ಸ್ಥಳಕ್ಕೆ ತೆರಳಿದರು. ಡಿಸಿಪಿ ಇಶಾಪಂಥ್‌ ಅವರು ಆಯುಕ್ತರ ಪಕ್ಕ ಕುಳಿತಿದ್ದರೆ ಇತರೆ ನಾಲ್ವರು ಸಿಬ್ಬಂದಿ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಹೊಯ್ಸಳ ವಾಹನದಲ್ಲಿ ಕಮಿಷನರ್‌ ಬಂದಿದ್ದನ್ನು ಗಮನಿಸಿದ ಸ್ಥಳೀಯ ಠಾಣೆ ಸಿಬ್ಬಂದಿ ಅಚ್ಚರಿಗೊಳಗಾದರು.

ಹುಳಿಮಾವು ಕೆರೆ ಏರಿ ದುರಂತಕ್ಕೆ ಬಿಡಿಎ ಹೊಣೆ?

ಕೋಡಿ ಒಡೆದು ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿದ ಕಮಿಷನರ್‌ ಮತ್ತು ಡಿಸಿಪಿ ಇಶಾಪಂಥ್‌, ಸಂತ್ರಸ್ತರ ಜತೆ ಚರ್ಚಿಸಿ ಅಗತ್ಯ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಗ್ನಿ ಶಾಮಕ ಮತ್ತು ಪೊಲೀಸ್‌ ಸಿಬ್ಬಂದಿಗೆ ಸೂಚನೆ ನೀಡಿದರು.

ಠಾಣೆಗೆ ಭೇಟಿ:

ಆಯುಕ್ತರು ಶನಿವಾರ ಸುಬ್ರಮಣ್ಯಪುರ ಪೊಲೀಸ್‌ ಠಾಣೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಠಾಣಾಧಿಕಾರಿಯಿಂದ ರೌಡಿ ಚಟುವಟಿಕೆ ಇರುವ ಬಗ್ಗೆ ಮಾಹಿತಿ ಸಂಗ್ರಹಿದರು. ರೌಡಿ ಚಟುವಟಿಕೆ ಹೆಚ್ಚಿರುವ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ರೌಡಿ ಚಟುವಟಿಕೆ ಹೆಚ್ಚಿದ್ದರೆ ಪೊಲೀಸ್‌ ಠಾಣೆ ಇರುವುದರಲ್ಲಿ ಅರ್ಥ ಇಲ್ಲ. ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆ ಇದೆ ಎಂದರೆ ನಿಮಗೆ ಬೆಲೆ ಇರುವುದಿಲ್ಲ. ರೌಡಿಗಳನ್ನು ಮಟ್ಟಹಾಕಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ, ಭೇಟಿ ವೇಳೆ ಭಾಸ್ಕರ್‌ ರಾವ್‌ ಅವರು ಠಾಣೆಯಲ್ಲಿನ ಶುಚಿತ್ವ ಪರಿಶೀಲಿಸಿದರು. ಪ್ರತಿ ಪೊಲೀಸ್‌ ಠಾಣೆಯಲ್ಲೂ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕವಾದ ಶೌಚಾಲಯ ಇರುವಂತೆ ಕಡ್ಡಾಯವಾಗಿ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

click me!