ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇಂಡಿಗೋ ಟಿಕೆಟ್ ದೋಸೆಯಂತೆ ಬಿಕರಿಯಾಗಿದ್ದು, ಸೆ. 6 ರ ವರೆಗೆ ಜನ. ಟಿಕೆಟ್ ಕಾಯ್ದಿರಿಸಿದ್ದಾರೆ. ಹೀಗಾಗಿ ಟಿಕೆಟ್ ದರ 14 ಸಾವಿರ ಗಡಿ ದಾಟಿದೆ.
ಬೆಂಗಳೂರು (ಆ.12): ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಿಂದ (Shivamogga sogane airport) ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಆ.31ರಂದು ವಿಮಾನ ಹಾರಾಟ ಆರಂಭವಾಗಲಿದೆ. ಬೆಂಗಳೂರು-ಶಿವಮೊಗ್ಗ ನಡುವೆ ಸಂಚರಿಸುವ ವಿಮಾನದ ಟಿಕೆಟ್ ಬುಕಿಂಗ್ ಕೂಡ ಆರಂಭವಾಗಿದೆ. ಟಿಕೆಟ್ ಬುಕ್ಕಿಂಗ್ ಗೆ ಪ್ರಯಾಣಿಕರು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂಡಿಗೋ ಟಿಕೆಟ್ ದೋಸೆಯಂತೆ ಬಿಕರಿಯಾಗಿದ್ದು, ಸೆ. 6 ರ ವರೆಗೆ ಜನ. ಟಿಕೆಟ್ ಕಾಯ್ದಿರಿಸಿದ್ದಾರೆ. ಹೀಗಾಗಿ ಟಿಕೆಟ್ ದರ 14 ಸಾವಿರ ಗಡಿ ದಾಟಿದೆ. ಹೀಗಾಗಿ ನಿಗದಿಗಿಂತ ಟಿಕೆಟ್ ದರ ಮೂರುವರೆ ಪಟ್ಟು ಹೆಚ್ಚಳವಾಗಿದೆ. ಬುಕಿಂಗ್ ದಿನದಿಂದಲೇ ಟಿಕೆಟ್‌ಗೆ ಬೇಡಿಕೆ ಬಂದಿರುವುದಕ್ಕೆ ಇಂಡಿಗೋ ಸಂಸ್ಥೆ ಫುಲ್ ಖುಷ್ ಆಗಿದೆ. ಶಿವಮೊಗ್ಗದ ಕುವೆಂಪು ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ದರ 2,699 ರೂ. ಇತ್ತು. ಸದ್ಯ ಟಿಕೆಟ್ ದರ 14,767 ರ ಗಡಿ ದಾಟಿದೆ. ಬೆಂಗಳೂರಿನಲ್ಲಿರುವ ಶಿವಮೊಗ್ಗ ಮೂಲದ ವರಿಗೆ ವಿಮಾನಯಾನದ ಮೂಲಕ ತಮ್ಮೂರಿಗೆ ತಲುಪುವ ಕೌತುಕ ಹೆಚ್ಚಿದ್ದು ಇಷ್ಟೊಂದು ಪ್ರಮಾಣದ ಬೇಡಿಕೆಗೆ ಕಾರಣವಾಗಿದೆ.
Shivamogga airport: ಆ.31 ರಿಂದ ವಿಮಾನಯಾನ ಆರಂಭ; ಸಂಸದ ಬಿವೈ ರಾಘವೇಂದ್ರ
ಮಲೆನಾಡಿನ ಹೆಬ್ಬಾಗಿಲಿಗೆ ಸಾಮಾನ್ಯವಾಗಿ ರೈಲ್ವೆ ಮತ್ತು ಬಸ್ ಸೌಲಭ್ಯವಷ್ಟೇ ಇತ್ತು. ವಿಮಾನಯಾನ ಆರಂಭದ ಹಿನ್ನೆಲೆ ಪ್ರಯಾಣಿಕರಲ್ಲಿ ಕುತೂಹಲ ಮನೆ ಮಾಡಿದೆ. ಮೊದಲ ವಿಮಾನದಲ್ಲಿ ಸಂಚರಿಸಿದ ಹೆಮ್ಮೆ ತಮ್ಮದಾಗಿಸಿಕೊಳ್ಳಲು ಟಿಕೆಟ್ ಬುಕಿಂಗ್‌ಗೆ ಜನರು ಮುಗಿಬಿದ್ದಿದ್ದಾರೆ. ಹೀಗಾಗಿ, ಒಟ್ಟು 78 ಸೀಟುಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 72 ಬುಕಿಂಗ್ ಆಗುತ್ತಿದೆ.
ಇಂಡಿಗೋ ಸಂಸ್ಥೆ ಶಿವಮೊಗ್ಗದಿಂದ ಬೆಂಗಳೂರಿಗೆ ಕೇವಲ 6 ಸೀಟುಗಳನ್ನು ಮಾತ್ರ ಕಾಯ್ದಿರಿಸಿತ್ತು. ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ವಿಮಾನಯಾನಕ್ಕೆ ಅನುಮತಿ ಪಡೆದ ಇಂಡಿಗೋ ಸಂಸ್ಥೆಯು ಜು.26ರಿಂದ ಟಿಕೆಟ್ ಬುಕಿಂಗ್ ಆರಂಭಿಸಿತ್ತು. ಮೊದಲ ದಿನವೇ ಟಿಕೆಟ್ ಬುಕ್ಕಿಂಗ್‌ಗೆ ಸ್ಪರ್ಧೆ ಏರ್ಪಟ್ಟಿದ್ದು, 3999 ರೂ. ಇದ್ದ ಆರಂಭಿಕ ದರ 5900 ರೂ., 6900 ರೂ., 7300 ರೂ. ವರೆಗೆ ಏರಿಕೆಯಾಗಿ ಈಗಲೂ ಡಿಮ್ಯಾಂಡ್ ಹೆಚ್ಚುತ್ತಿದೆ.
ಶಿವಮೊಗ್ಗದಿಂದ ಉಡಾನ್ ಯೋಜನೆಯಡಿ ತಿರುಪತಿ, ಗೋವಾ, ಹೈದರಾಬಾದ್‌ಗೂ ವಿಮಾನ; ಸಚಿವ ಎಂ.ಬಿ.ಪಾಟೀಲ
ಇಂಡಿಗೋ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಸೀಟ್ ಕಾಯ್ದಿರಿಸುವ ಅವಕಾಶ ಕಲ್ಪಿಸಿದೆ. ಆ.31ರಂದು ಬೆಳಗ್ಗೆ 9.50ಕ್ಕೆ ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭವಾಗಲಿದೆ. ಬೆಳಗ್ಗೆ 11.05ಕ್ಕೆ ವಿಮಾನ ಶಿವಮೊಗ್ಗ ತಲುಪಲಿದೆ. ಅದೇ ದಿನ ಬೆಳಗ್ಗೆ 11.25ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.25ಕ್ಕೆ ಬೆಂಗಳೂರು ತಲುಪಲಿದೆ. ಆ.31ರಂದು ಪ್ರತಿ ಟಿಕೆಟ್ ದರ .6,227 ನಿಗದಿ ಮಾಡಲಾಗಿದೆ. ಸೆ.1ರ ಬುಕ್ಕಿಂಗ್ ದರ ಕಡಿತ ಮಾಡಲಾಗಿದ್ದು, ಪ್ರತಿ ಟಿಕೆಟಿಗೆ .4 ಸಾವಿರ ನಿಗದಿ ಮಾಡಲಾಗಿದೆ. ಪ್ರತಿ ದಿನ ಅದೇ ಸಮಯದಲ್ಲಿ ವಿಮಾನ ಸಂಚರಿಸಲಿದೆ.