ಮೋದಿ ಸಾಗುವ ರಸ್ತೆಯಲ್ಲೇ ಜಿಲೆಟಿನ್ ಕಡ್ಡಿಗಳು ಸಿಕ್ಕಿದ್ದು ಹೇಗೆ? ಇದು ಯಾರ ಸಂಚು? ತನಿಖೆಗಿಳಿದ ಎನ್‌ಐಎ! ಇದು ಯಾರ ಸಂಚು?

Kannadaprabha News   | Kannada Prabha
Published : May 12, 2026, 07:10 AM IST
How Were Gelatin Sticks Found on the Very Road PM Modi Passes By Whose Conspiracy Is It  NIA Probe

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುವ ವೇಳೆ ಅವರ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ಆರಂಭಿಸಿದೆ. 

ಬೆಂಗಳೂರು (ಮೇ.12): ಪ್ರಧಾನಿ ನರೇಂದ್ರ ಮೋದಿ ಸಾಗುವ ದಾರಿಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಖುದ್ದು ತನಿಖೆಗೆ ಇಳಿದಿದ್ದು, ಜಿಲೆಟಿನ್‌ ಕಡ್ಡಿಗಳು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲೆಟಿನ್‌ ಕಡ್ಡಿಗಳು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿರುವ ಎನ್‌ಐಎ ಅಧಿಕಾರಿಗಳ ತಂಡ ಇಂಚಿಂಚು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಸ್ಥಳೀಯ ಪೊಲೀಸರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ. ಸ್ಫೋಟಕವಾದ ಜಿಲೆಟಿನ್‌ ಕಡ್ಡಿ ಎಲ್ಲಿಂದ ಬಂದಿದೆ? ಇಲ್ಲಿಗೆ ಯಾರು ತಂದು ಇಟ್ಟವರು? ಇದರ ಹಿಂದೆ ಶಂಕಿತರ ಕೈವಾಡವಿದಿಯೇ ಎಂಬ ಆಯಾಮದಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ಪಿ ಶ್ರೀನಿವಾಸ್‌ ಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ರಾಜ್ಯಗುಪ್ತ ದಳ ಮತ್ತು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಗಳು ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯು ಆಕಸ್ಮಿಕವಾಗಿ ನಡೆದಿದೆಯೋ ಅಥವಾ ಉದ್ದೇಶಪೂರ್ವಕವಾಗಿ ನಡೆದಿದೆಯೋ ಎಂಬುದರ ಕುರಿತು ಇಂಚಿಚು ಮಾಹಿತಿ ಕಲೆ ಹಾಕಿದ್ದಾರೆ.

ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ನ ಧ್ಯಾನ ಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿ ತೆರಳುವ ಒಂದೂವರೆ ತಾಸು ಮೊದಲೇ ಕಗ್ಗಲೀಪುರದ ತಾತಗುಣಿ ಬಳಿಯ ಒಡೆಯರಹಳ್ಳಿ ಗೇಟ್‌ ಬಳಿಯ ರಸ್ತೆಯ ಪಕ್ಕದಲ್ಲಿ ಭಾನುವಾರ 10.30ರ ಸುಮಾರಿಗೆ ಎರಡು ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆ್ಯಂಟಿ ಸಬೋಟೇಜ್‌ ಚೆಕ್‌ ತಂಡ, ಬಾಂಬ್‌ ನಿಷ್ಕ್ರಿಯ ದಳ, ಸೋಕೊ ಟೀಂ, ಎಫ್‌ಎಸ್‌ಎಲ್‌ ಅಧಿಕಾರಿಗಳು ಭೇಟಿ ನೀಡಿ ತೀವ್ರ ತಪಾಸಣೆ ನಡೆಸಿ ಜಿಲೆಟಿನ್‌ ಕಡ್ಡಿಗಳನ್ನು ವಶಕ್ಕೆ ಪಡೆದಿದ್ದರು.

ವಿವಿಧ ಆಯಾಮಗಳಲ್ಲಿ ತನಿಖೆ

ಪ್ರಕರಣದ ಗಂಭೀರತೆ ಅರಿತ ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ಪಿ ಶ್ರೀನಿವಾಸ್‌ ಗೌಡ ತನಿಖೆಗಾಗಿ ಡಿವೈಎಸ್‌ಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚಿಸಿ ಆದೇಶಿಸಿದ್ದರು. ಆ ವಿಶೇಷ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದೆ. ಒಂದು ತಂಡ ಜಿಲೆಟಿನ್‌ ಕಡ್ಡಿ ದೊರೆತ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕಲ್ಲು ಕ್ವಾರಿ ಮಾಲೀಕರು ಹಾಗೂ ಕಾರ್ಮಿಕರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದೆ. ಮತ್ತೊಂದು ತಂಡ ಸುತ್ತಮುತ್ತಲಿನ ಗೋದಮುಗಳನ್ನು ಪರಿಶೀಲನೆ ನಡೆಸಿದೆ. ಇನ್ನೊಂದು ತಂಡ ತಮಿಳುನಾಡಿನಿಂದ ಸ್ಫೋಟಕಗಳನ್ನು ತಂದು ಇಡಲಾಗಿತ್ತು ಎಂಬ ಶಂಕೆಯ ಮೇರೆಗೆ ತಮಿಳುನಾಡಿಗೆ ತೆರಳಿದೆ ಎಂದು ತಿಳಿದು ಬಂದಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಟವರ್ ಲೊಕೇಶನ್‌ಗಳನ್ನು ಪರಿಶೀಲಿಸಲಾಗುತ್ತಿದೆ.

ಮುಂದುವರಿದ ಲೋಹಿತ್‌ ವಿಚಾರಣೆ:

ಪ್ರಧಾನಿ ಕಾರ್ಯಕ್ರಮಕ್ಕೂ ಮುನ್ನ ಬೆದರಿಕೆ ಕರೆ ಮಾಡಿದ್ದ ಲೋಹಿತ್ ಎಂಬಾತನನ್ನು ವಶಕ್ಕೆ ಪಡೆದಿರುವ ಕೋರಮಂಗಲ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಹಲವು ಆಯಾಮಗಳಲ್ಲಿ ಪೊಲೀಸರು ಲೋಹಿತ್‌ನನ್ನು ವಿಚಾರಣೆ ಮಾಡುತ್ತಿದ್ದಾರೆ. ಆತನ ಸಿಡಿಆರ್ ಮಾಹಿತಿ ಕಲೆ ಹಾಕಿ ಆತನ ಪಾಲಕರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವ ಲೋಹಿತ್‌ ಈ ಹಿಂದೆಯೂ ಸ್ಥಳೀಯ ಪೊಲೀಸ್ ಠಾಣೆಗೆ ಈ ರೀತಿ ಬೆದರಿಕೆಯ ಕರೆಗಳು ಮಾಡಿದ್ದಾನೆ. ತಂದೆ ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದಾನೆ.

ದೊಡ್ಡ ದೊಡ್ಡವರ ಹೆಸರು ಹೇಳುತ್ತಿದ್ದಾನೆ:

ಲೋಹಿತ್‌ ಪೊಲೀಸ್ ಇಲಾಖೆ ಸೇರಿದಂತೆ ಬೇರೆ ಬೇರೆ ತನಿಖಾ ಸಂಸ್ಥೆಗಳ ನಂಬರ್ ಇಟ್ಟುಕೊಂಡಿದ್ದಾನೆ. ಸಖಾ ಸುಮ್ಮನೆ ಇಂತಹ ಬೆದರಿಕೆಯ ಹುಸಿ ಕರೆಗಳನ್ನು ಮಾಡುತ್ತಿರುತ್ತಾನೆ. ವಿಚಾರಣೆ ನಡೆಸಿದ್ದಾಗ ದೊಡ್ಡ ದೊಡ್ಡವರ ಹೆಸರು ಹೇಳುತ್ತಿದ್ದಾನೆ. ನನಗೆ ಅಜಿತ್ ದೋವಲ್ ಗೊತ್ತು, ಎನ್‌ಐಎ-ಸಿಬಿಐ ಡೈರೆಕ್ಟರ್ ಗೊತ್ತು. ಡಿಜಿ-ಐಜಿಪಿ, ಕಮಿಷನರ್ ಹೆಸರು ಹೇಳುತ್ತಿದ್ದಾನೆ. ಎಲ್ಲಾ ತನಿಖಾ ಸಂಸ್ಥೆಯ ಕಂಟ್ರೊಲ್ ರೂಮ್ ನಂಬರ್ ಕೂಡ ಇಟ್ಟುಕೊಂಡಿದ್ದಾನೆ. ಮೋದಿ ಕಾರ್ಯಕ್ರಮದ ಮಾಹಿತಿ ಪಡೆದು ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

ಲೊಕೇಶನ್‌ ಆಧರಿಸಿ ಆರೋಪಿ ವಶ: ಆಯುಕ್ತ 

ಬೆದರಿಕೆ ಕರೆಯ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿ, ಭಾನುವಾರ ಬೆಳಗ್ಗೆ ಕಂಟ್ರೋಲ್ ರೂಂಗೆ ಕರೆ ಮಾಡಿ ಬಾಂಬ್‌ ಇಟ್ಟಿದ್ದೇವೆ ಎಂದು ಬೆದರಿಕೆ ಕರೆ ಬಂದಿತ್ತು. ಕರೆ ಮಾಡಿದ ನಂತರ ಆತ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದ. ಲೊಕೇಷನ್‌ ಆಧಾರದ ಮೇಲೆ ಕೋರಮಂಗಲದಲ್ಲಿ ವಾಸವಿದ್ದ ಆತನನ್ನು ವಶಕ್ಕೆ ಪಡೆಯಲಾಯಿತು. ತಪಾಸಣೆ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ. ಬಳಿಕ ಇದೊಂದು ಹುಸಿ ಕರೆ ಎಂಬುದು ಗೊತ್ತಾಯಿತು. ವಶಕ್ಕೆ ಪಡೆಯಲಾಗಿರುವ ವ್ಯಕ್ತಿ ಈ ರೀತಿ ಹಲವು ಬಾರಿ ಕರೆ ಮಾಡಿದ್ದಾನೆ. ಆಗ್ನೇಯ ವಿಭಾಗದ ಹಾಗೂ ಸಿಸಿಬಿ ಪೊಲೀಸರು ಪರಿಶೀಲನೆ ತನಿಖೆ ಮುಂದುವರಿಸಿದ್ದಾರೆ. ಆತನ ಮಾನಸಿಕ ಸ್ಥಿತಿ ಬಗ್ಗೆ ವೈದ್ಯರಿಂದ ಮಾಹಿತಿ ಕೇಳಿದ್ದೇವೆ. ಈ ರೀತಿ ಹುಸಿ ಕರೆ ಮಾಡುವುದು ಗಂಭೀರ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.

ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಸ್ಥಳಕ್ಕೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಮ್ಮಿಂದ ಮಾಹಿತಿ ಪಡೆದಿದ್ದಾರೆ. ಜತೆಗೆ ವಿಶೇಷ ತಂಡದಿಂದಲೂ ವಿವಿಧ ಆಯಾಮಾಗಳಲ್ಲಿ ತನಿಖೆ ಮುಂದುವರಿದಿದೆ.ಆರ್‌.ಶ್ರೀನಿವಾಸ್‌ ಗೌಡ, ಬೆಂಗಳೂರು ದಕ್ಷಿಣ ಜಿಲ್ಲೆ ಎಸ್ಪಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಮೋದಿ ಹಾದುಹೋಗುವ ರಸ್ತೆಯಲ್ಲೇ ಜಿಲೆಟಿನ್ ಕಡ್ಡಿಗಳು ಸಿಕ್ಕಿದ್ದು ಹೇಗೆ? ಇದು ಯಾರ ಸಂಚು? ತನಿಖೆಗಿಳಿದ ಎನ್‌ಐಎ! ಇದು ಯಾರ ಸಂಚು?
ಕಾಶ್ಮೀರ ವಿವಾದ, ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ 2 ವರ್ಷಗಳ ಕಾಲ ವಿದ್ಯಾರ್ಥಿ ಅಮಾನತು