
ಯಾದಗಿರಿ(ಅ.29): ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಮಾದರಿಯಲ್ಲೇ ಕೆಇಎ ಶನಿವಾರ ನಡೆಸಿದ ಪರೀಕ್ಷೆಯಲ್ಲೂ ಬ್ಲೂಟೂತ್ ಬಳಸಿಯೇ ಅಕ್ರಮ ನಡೆಸಲಾಗಿದೆ. ಈ ಹಗರಣದ ಕಿಂಗ್‌ಪಿನ್‌ಗಳು ಡೀಲ್ ಮಾಡಿಕೊಂಡ ಪರೀಕ್ಷಾರ್ಥಿಗಳಿಗೆ ಸಣ್ಣದಾದ ಬ್ಲೂಟೂತ್‌ವೊಂದನ್ನು ಹಣ ಪಡೆದು ಒದಗಿಸುತ್ತಿದ್ದರು. ಅದರ ಮೂಲಕ ಕೀ ಉತ್ತರಗಳನ್ನು ಪರೀಕ್ಷಾ ಕೇಂದ್ರದಲ್ಲಿರುವ ಅಭ್ಯರ್ಥಿಗಳಿಗೆ ಒದಗಿಸಲಾಗುತ್ತಿತ್ತು.
ಕಿವಿಯೊಳಗೆ ಅಡಗಿಸಿಡಬಹುದಾದ ಬರಿಗಣ್ಣಿಗೆ ಸುಲಭವಾಗಿ ಕಾಣಿಸದ ಅತ್ಯಾಧುನಿಕ ಕಿರು ಬ್ಲೂಟೂತ್ ಅನ್ನು ಪರೀಕ್ಷಾ ಅಕ್ರಮಕ್ಕಾಗಿ ಬಳಕೆ ಮಾಡಲಾಗಿದೆ. ಇದಕ್ಕೆ ಪೂರಕ ಸಂಪರ್ಕ ಕಲ್ಪಿಸುವ ಸಿಮ್‌ಕಾರ್ಡ್ ಹೊಂದಿದ ಬ್ಲೂಟೂತ್ ಡಿವೈಸ್ ಅನ್ನು ಶರ್ಟಿನ ಕಾಲರ್, ಅಂಡರ್‌ವೇರ್ ಅಥವಾ ಬನಿಯಾನ್‌ನಲ್ಲಿ ಅಡಗಿಸಿಡಲಾಗಿರುತ್ತದೆ.
ಯಾದಗಿರಿ: ಬ್ಲೂಟೂತ್ ಬಳಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದ ಆರೋಪಿ ಅರೆಸ್ಟ್
ಸಿಮ್ ಕಾರ್ಡ್ ಒಳಗೊಂಡ ಈ ಬ್ಲೂಟೂತ್ ಡಿವೈಸ್‌ಗೆ ಹೊರಗಿನ ವ್ಯಕ್ತಿಯೊಬ್ಬ ಕರೆ ಮಾಡುತ್ತಾನೆ. ಆಟೋಮ್ಯಾಟಿಕ್ ಕರೆ ಸಂಪರ್ಕಗೊಂಡು, ಇಯರ್‌ಪೀಸ್ (ಕಿವಿಯೊಳಗೆ ಅಡಗಿಸಿಟ್ಟಿದ್ದ ಸಾಧನ)ದಲ್ಲಿ ಹೊರಗಿನ ವ್ಯಕ್ತಿ ಉತ್ತರ ಹೇಳುವುದು ಸೂಕ್ಷ್ಮವಾಗಿ ಕೇಳಿಸುತ್ತದೆ. ಪರೀಕ್ಷೆ ಮುಗಿಸಿ ಹೊರ ಬಂದ ನಂತರ, ಅದನ್ನು ಅಯಸ್ಕಾಂತ ಬಳಸಿ ಹೊರತೆಗೆಯಲಾಗುತ್ತದೆ ಎನ್ನಲಾಗಿದೆ.
ಪೊಲೀಸರು ಬಂಧಿಸಿದ ಪರೀಕ್ಷಾರ್ಥಿಯೊಬ್ಬನ ಕಿವಿಯಲ್ಲಿನ ಈ ಸಾಧನ ತೆಗೆಯಲು ನಗರದ ಖ್ಯಾತ ಕಿವಿ, ಮೂಗು, ಗಂಟಲು (ಇ.ಎನ್.ಟಿ.) ತಜ್ಞ ವೈದ್ಯರೊಬ್ಬರನ್ನು ಕರೆಯಿಸಬೇಕಾಯಿತು ಎನ್ನಲಾಗಿದೆ.
ಒಂದೇ ತರಹದ ಪೆನ್ ಬಳಕೆ, ಹಳೆಯ ಶರ್ಟ್‌ಗೆ ಹೊಸ ಕಾಲರ್ ಅಳವಡಿಕೆ, ಸೂಕ್ಷ್ಮವಾದ ಸನ್ನೆಗಳ ಮೂಲಕ ತಮ್ಮಕ್ಕಷ್ಟಕ್ಕೆ ತಾವೇ ಮಾತನಾಡುತ್ತಿರುವಂತೆ ಕಂಡವರನ್ನು ಪೊಲೀಸರು ಅನುಮಾನದಿಂದ ವಿಚಾರಣೆ ನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ