
ವರದಿ: ಆಲ್ದೂರು ಕಿರಣ್, ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.28): ಕೊರಗಜ್ಜದ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಕಿಡಿಗೇಡಿಗಳು ನಟಿ ಶುಭಾ ಪೂಂಜಾರೊಂದಿಗೆ ಅಸಭ್ಯ ವರ್ತನೆ ಮಾಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕು ಕುದುರೆಮುಖದಲ್ಲಿ ನಡೆದಿದೆ. ಕುದುರೆಮುಖದ ಮೈದಾಡಿ ಗುಡ್ಡದಲ್ಲಿ ಕೊರಗಜ್ಜದ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಆ ಹಾಡಿನ ಚಿತ್ರೀಕರಣದ ವೇಳೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ನಟಿ ಶುಭಾ ಪೂಂಜಾ ಡ್ಯಾನ್ಸ್ ಮಾಡುವ ವೇಳೆಯಲ್ಲಿ ಅಪರಿಚಿತ ಯುವಕರ ಗುಂಪು ಕೈ ಹಿಡಿದು ಎಳೆದು ಅಸಭ್ಯ ವರ್ತನೆ ಮಾಡಿದ್ದಾರೆ.
ಯುವಕರ ಅಸಭ್ಯ ವರ್ತನೆಯಿಂದ ಬೇಸರಗೊಂಡ ಚಿತ್ರತಂಡ ಹಾಡಿನ ಚಿತ್ರೀಕರಣ ನಿಲ್ಲಿಸಿದ್ದಾರೆ. ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಕೊರಗಜ್ಜ ಚಿತ್ರ ಮೂಡಿಬರುತ್ತಿದೆ. ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಶೂಟಿಂಗ್ ನಡೆಸುವ ವೇಳೆ ಈ ಘಟನೆ ನಡೆದಿದೆ. ಆದರೆ ಈ ಸಂಬಂಧ ಚಿತ್ರತಂಡ ಈವರೆಗೂ ಪೊಲೀಸರಿಗೆ ದೂರು ನೀಡಿಲ್ಲ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೆಲ ಯುವಕರು ಕಿರಿಕ್: ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಸುಧೀರ್ ಅತ್ತಾವರ ಅವರು ಸಿನಿಮಾ ಚಿತ್ರೀಕರಣದ ವೇಳೆ ಶುಭಾ ಪೂಂಜ ಅವರಿಗೆ ಕೆಲ ಯುವಕರು ಕಿರಿಕ್ ಮಾಡಿದ್ದು, ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದೆ. ಯಾವುದೋ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ದಾರೆ. ಇದರಿಂದ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು. ಹಾಡಿನ ಚಿತ್ರೀಕರಣಕ್ಕಾಗಿ 50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು. ಬಿಜೆಪಿ ಪಕ್ಷದ ಸಾಗರ ಘಟಕವೆಂದು ಹೇಳಿಕೊಂಡು ಕೆಲ ಯುವಕರು ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ತಿಳಿಸಿದರು.
ಮೀನುಬೇಟೆಗೆ ಹೊರಟ ಗೌರಿಶಂಕರ್: ಕುತೂಹಲ ಹೆಚ್ಚಿಸಿದ 'ಕೆರೆಬೇಟೆ' ಮೋಷನ್ ಪೋಸ್ಟರ್
ಸ್ಥಳೀಯರಿಂದ ಕಿರಿಕ್ ಬಗ್ಗೆ ಸ್ಪಷ್ಟನೆ: ಶೂಟಿಂಗ್ ವೇಳೆ ಅಸಭ್ಯ ವರ್ತನೆ ಅರೋಪಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಸ್ಪಷ್ಟನೆ ನೀಡಿದ್ದಾರೆ, ಸ್ಥಳೀಯರಾದ ರವಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಶೂಟಿಂಗ್ ನಡೆಯುತ್ತಿರುವ ಸ್ಥಳಕ್ಕೆ ನಾವು ತೆರೆಳಿದ್ದೆವು. ಆ ಸಮಯದಲ್ಲಿ ನಾವು ಚಿತ್ರ ತಂಡದೊಂದಿಗೆ ಯಾವ ಸಿನಿಮಾ, ಯಾವ ಹಾಡು ಎಂದು ಮಾಹಿತಿ ಕೇಳಿದೆವು. ಅವರು ಆಗ ಕೊರಗಜ್ಜನ ಹಾಡಿನ ಶೂಟಿಂಗ್ ಎಂದರು. ಅಪಾರ ದೈವ ಭಕ್ತಿ ಹೊಂದಿರುವ ನಾವು ಇಲ್ಲಿ ಇಂತಹ ಶೂಟಿಂಗ್ ಮಾಡದಂತೆ ತಿಳಿಸಿದೆವು. ಅವರ ಬಳಿ ಶೂಟಿಂಗ್ ಮಾಡಲು ಅನುಮತಿ ಸಹ ಇರಲ್ಲಿಲ್ಲ. ಶುಭಾ ಪೂಂಜ ಅವರು ಎಲ್ಲಿ ಇದ್ದರು ಎಂಬ ಮಾಹಿತಿಯೇ ನಮಗಿರಲಿಲ್ಲ. ಅವರೊಂದಿಗೆ ಅಸಭ್ಯ ವರ್ತನೆ ಮಾಡಿದ್ದೇವೆ ಎನ್ನುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ