
ಬೆಂಗಳೂರು (ಆ.21): ಮಹಿಳೆಯರಿಗೆ ಮಾತ್ರ 'ಹೋಮ್‌ಮೇಕರ್' (ಗೃಹಿಣಿಯರು) ಎಂಬ ಪದ ಸೀಮಿತವಾಗಿಲ್ಲ. ಪುರುಷ, ಮಹಿಳೆ ಅಥವಾ ಉದ್ಯೋಗದಲ್ಲಿರುವ ವೃತ್ತಿಪರರು, ಮನೆಯಲ್ಲಿ ಕುಟುಂಬದ ಕಲ್ಯಾಣಕ್ಕಾಗಿ ಶ್ರಮಿಸುವ ಪ್ರತಿಯೊಬ್ಬರೂ 'ಗೃಹ ನಿರ್ವಾಹಕರು' ಎಂದು ಪರಿಗಣಿಸಲ್ಪಡುತ್ತಾರೆ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಅಪಘಾತದಲ್ಲಿ ಅಂಗವೈಕಲ್ಯಗೊಂಡಿದ್ದ ಗೃಹಿಣೆಗೆ ನಿಗದಿಪಡಿಸಿದ್ದ ಪರಿಹಾರದ ಮೊತ್ತ ಹೆಚ್ಚಿಸಿ ಆದೇಶಿಸಿದೆ.
ಕೆಎಸ್‌ಆರ್‌ಟಿ ಬಸ್ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದ ತಮಗೆ ಮೋಟಾರು ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನಿಗದಿಪಡಿಸಿದ 4.55 ಲಕ್ಷ ರು. ಪರಿಹಾರ ಮೊತ್ತ ಹೆಚ್ಚಿಸುವಂತೆ ಕೋರಿ ಪಶ್ಚಿಮ ಬಂಗಾಳ ಮೂಲದ ಪಂಪಪಾಲ್ ಎಂಬಾಕೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೇ ವೇಳೆ ಪಂಪಪಾಲ್‌ಗೆ ಪರಿಹಾರ ಘೋಷಿಸಿದ ನ್ಯಾಯಾಧೀಕರಣದ ಆದೇಶ ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು.
ಅಪಘಾತ ಸಂಭವಿಸಿದಾಗ ಪಂಪಪಾಲ್ ಉದ್ಯೋಗದಲ್ಲಿ ಇರಲಿಲ್ಲ. ಉನ್ನತ ಶಿಕ್ಷಣ ಪಡೆದಿದ್ದರಿಂದ ಅವರು ಗೃಹಿಣಿಯಾಗಿರುವುದಕ್ಕೆ ಅವಕಾಶವಿಲ್ಲ. ಘಟನೆ ನಡೆದ ದಿನ ಆಕೆ ಗೃಹಿಣಿಯಾಗಿ ಕೆಲಸ ಮಾಡುತ್ತಿದ್ದರು ಎಂಬ ಕಾರಣಕ್ಕೆ ಭವಿಷ್ಯದ ನಷ್ಟ ವರ್ಗದಡಿ ಪರಿಹಾರ ನೀಡಲಾಗದು ಎಂದು ಕೆಎಸ್‌ಆರ್‌ಟಿಸಿ ವಾದಿಸಿತ್ತು.
ಈ ವಾದ ಆಕ್ಷೇಪಿಸಿದ ನ್ಯಾಯಮೂರ್ತಿ ಡಾ.ಚಿಲಕೂರು ಸುಮಲತಾ ಅವರ ಪೀಠ, ಗೃಹ ನಿರ್ವಾಹಕರೆಂದರೆ ಕೇವಲ ಅನಕ್ಷರಸ್ಥರಾಗಿರಬೇಕು. ದಿನದ 24 ಗಂಟೆ ಮನೆಯಲ್ಲಿದ್ದು, ಕೇವಲ ಮನೆಕೆಲಸವನ್ನೇ ಮಾಡುತ್ತಿರಬೇಕು ಎಂಬ ಕಲ್ಪನೆ ತಪ್ಪು. ಮಹಿಳೆಯರಿಗೆ ಮಾತ್ರ ಅದೇ ರೀತಿ 'ಹೋಮ್‌ಮೇಕರ್' (ಗೃಹ ನಿರ್ವಾಹಕರು) ಎಂಬ ಪದ ಸೀಮಿತವಾಗಿಲ್ಲ. ತನ್ನ ವೈಯಕ್ತಿಕ ಹಿತಾಸಕ್ತಿ ತ್ಯಾಗ ಮಾಡಿ, ಕುಟುಂಬದ ಸುಖ-ಶಾಂತಿಗೆ ಆಧಾರಸ್ತಂಭವಾಗಿ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯೂ ಗೃಹ ನಿರ್ವಾಹಕರೇ. ಇದು ಪುರುಷರಿಗೂ ಅನ್ವಯಿಸುತ್ತದೆ ಹಾಗೂ ಉದ್ಯೋಗಸ್ಥರಿಗೂ ಅನ್ವಯಿಸುತ್ತದೆ ಎಂದು ಹೇಳಿದ ಪೀಠ, ಪಂಪಪಾಲ್ ಗೆ ನ್ಯಾಯಾಧಿಕರಣ ನೀಡಿದ್ದ ಮೊತ್ತಕ್ಕಿಂತ ಹೆಚ್ಚುವರಿಯಾಗಿ 1,96,800 ರು. ಪರಿಹಾರ ರು. ಘೋಷಿಸಿತು.
ಪಂಪಪಾಲ್ 2013ರ ಅ.19ರಂದು ಬೆಂಗಳೂರಿನಿಂದ ಮಡಿಕೇರಿಗೆ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಂಪಪಾಲ್ ತೀವ್ರವಾಗಿ ಗಾಯಗೊಂಡು ಶಾಶ್ವತ ದೈಹಿಕ ವೈಕಲ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆಗಾಗಿ 10 ಲಕ್ಷ ರು.ವರೆಗೂ ವ್ಯಯಿಸಿದ್ದರು. ನ್ಯಾಯಾಧಿಕರಣವು ವೈದ್ಯಕೀಯ ವೆಚ್ಚ ಸೇರಿ ಒಟ್ಟು 4,55,243 ರು. ಪರಿಹಾರ ಘೋಷಿಸಿತ್ತು. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾನು, ಅಪಘಾತಕ್ಕೂ ಮುನ್ನ ಅತಿಥಿ ಉಪನ್ಯಾಸಕರಾಗಿ ಉದ್ಯೋಗ ಮಾಡುತ್ತಿದ್ದೆ. ಜತಗೆ, ಮನೆ ಪಾಠವೂ ಮಾಡುತ್ತಿದ್ದೆ. ಆ ಮೂಲಕ ಮಾಸಿಕ 35 ಸಾವಿರ ರು. ಸಂಪಾದಿಸುತ್ತಿದ್ದೆ. ಘಟನೆ ನಡೆದ ದಿನ ಗೃಹಿಣಿಯಾಗಿದ್ದೆ. ಈ ಎಲ್ಲ ಅಂಶ ಪರಿಗಣಿಸಿ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ಹೈಕೋರ್ಟ್‌ಗೆ ಪಂಪ್‌ಪಾಲ್ ಮನವಿ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ