* ಗತವೈಭವ ಸಾರುವ ವೇದಿಕೆ ನಿರ್ಮಾಣ
* ವಿಜಯನಗರ ಜಿಲ್ಲೆಗೆ ಇಂದು ಸಿಎಂ ಚಾಲನೆ
* ಮಾಜಿ ಸಿಎಂ ಬಿಎಸ್‌ವೈಗೆ ಭವ್ಯ ಸ್ವಾಗತ
* ರಾಜ್ಯದ 31ನೇ ಜಿಲ್ಲೆಯಾಗಿ ಉದಯ
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಅ.02): ವಿಜಯನಗರ(Vijayanagara) ಸಾಮ್ರಾಜ್ಯದ ಗತವೈಭವ ಮರುಕಳಿಸುವ ಕನಸಿನೊಂದಿಗೆ ಉದಯವಾಗಿರುವ ನೂತನ ‘ವಿಜಯನಗರ ಜಿಲ್ಲೆ’(Vijayanagara District) ಅ. 2ರಂದು ಅಧಿಕೃತವಾಗಿ ಉದ್ಘಾಟನೆಯಾಗಲಿದೆ.
undefined
ಇಡೀ ವಿಜಯನಗರ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೊಸ ಜಿಲ್ಲೆಯ ಆರು ತಾಲೂಕುಗಳ ಮನೆ-ಮನೆಯಲ್ಲೂ ಹಬ್ಬದ ವಾತಾವರಣ. ಜಿಲ್ಲೆ ಉದ್ಘಾಟನೆ ನಿಮಿತ್ತ ಅ. 2 ಮತ್ತು 3ರಂದು ವಿಜಯನಗರ ಉತ್ಸವ ನಡೆಯಲಿದೆ. ಹಂಪಿಯ(Hampi) ಹೆಬ್ಬಾಗಿಲು ಆಗಿರುವ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಅ. 2ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommai) ಜಿಲ್ಲೆಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ವಿಜಯನಗರ ಜಿಲ್ಲೆ ಘೋಷಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಸೇರಿದಂತೆ ಸಚಿವರು ಮತ್ತು ಗಣ್ಯರಿಗೆ ಭವ್ಯ ಸ್ವಾಗತ ನೀಡಲು ಸಕಲ ಸಿದ್ಧತೆ ನಡೆದಿದೆ. ವಿಜಯನಗರ ಜಿಲ್ಲೆಯ ರೂವಾರಿ ಆನಂದ ಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ.
ರಾಜ್ಯದ 31ನೇ ಜಿಲ್ಲೆ:
ಬಳ್ಳಾರಿಯಿಂದ ಬೇರ್ಪಡಿಸಿ ವಿಜಯನಗರ ಜಿಲ್ಲೆಯನ್ನು ರಾಜ್ಯದ 31ನೇ ಜಿಲ್ಲೆಯಾಗಿ ರಾಜ್ಯ ಸರ್ಕಾರ 2021ರ ಫೆಬ್ರವರಿ 8ರಂದು ರಚನೆ ಮಾಡಿದೆ. ಕೊರೋನಾ ಹಿನ್ನೆಲೆಯಲ್ಲಿ ಅಧಿಕೃತವಾಗಿ ಜಿಲ್ಲೆಗೆ ಚಾಲನೆ ದೊರೆತಿರಲಿಲ್ಲ. ಈಗ ಚಾಲನೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಸಪೇಟೆ, ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಜನರಲ್ಲಿ ಉತ್ಸಾಹ ಹೆಚ್ಚಿದೆ. ಹಳ್ಳಿ, ಪಟ್ಟಣ, ತಾಂಡಾ, ಕ್ಯಾಂಪ್, ಕಾಲನಿಗಳಲ್ಲೂ ಜಿಲ್ಲಾ ಉದ್ಘಾಟನೆ ಸಂಭ್ರಮ ಕಳೆಗಟ್ಟಿದೆ.
ಭವ್ಯ ವೇದಿಕೆ:
ವಿಜಯನಗರದ ಗತ ವೈಭವ ಮರುಕಳಿಸುವ ಮಾದರಿಯಲ್ಲಿ ಶ್ರೀವಿದ್ಯಾರಣ್ಯ ವೇದಿಕೆ ನಿರ್ಮಿಸಲಾಗಿದೆ. ಮಾತಂಗ ಪರ್ವತದ ವಿಹಂಗಮ ನೋಟ ಹಾಗೂ ಶ್ರೀವಿರೂಪಾಕ್ಷೇಶ್ವರ ದೇಗುಲದ ರಾಜ ಗೋಪುರ (60 ಅಡಿ)ವನ್ನು ಕಲಾವಿದರು ವೇದಿಕೆಯಲ್ಲಿ ಸೃಜಿಸಿದ್ದಾರೆ. ಬೆಂಗಳೂರಿನ ಎಂ.ವಿ. ಕನ್ಸಲ್ಟಂಟ್ ಸಂಸ್ಥೆ ಈ ವೇದಿಕೆ ನಿರ್ಮಾಣ ಮಾಡಿದೆ. ನೆಲದಿಂದ ಏಳು ಅಡಿ ಎತ್ತರದಲ್ಲಿ ವೇದಿಕೆ ನಿರ್ಮಿಸಲಾಗಿದೆ. 180/70 ಅಡಿ ಉದ್ದಗಲವನ್ನು ವೇದಿಕೆ ಹೊಂದಿದೆ. ವೇದಿಕೆಯಲ್ಲಿ ಕಲ್ಲಿನರಥ, ಉಗ್ರನರಸಿಂಹ ವಿನ್ಯಾಸವನ್ನು ಸೃಜಿಸಲಾಗಿದ್ದು, ಮಹಾನವಮಿ ದಿಬ್ಬದ ಮಾದರಿಯಲ್ಲಿ ವೇದಿಕೆಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಹಂಪಿ ಸ್ಮಾರಕಗಳಿಗೆ ಕೈಗನ್ನಡಿಯಂತೆ ವೇದಿಕೆ ಬಳಿ ಸ್ಮಾರಕಗಳನ್ನು ಸೃಜಿಸಲಾಗಿದೆ.
ಎಲ್‌ಇಡಿ ಪರದೆ ಬಳಕೆ:
ಕೋವಿಡ್ ಹಿನ್ನೆಲೆಯಲ್ಲಿ ವೇದಿಕೆ ಮಧ್ಯಭಾಗದಲ್ಲಿ 400 ಅಡಿಯ ರಾರಯಂಪ್ ನಿರ್ಮಿಸಲಾಗಿದೆ. ಇದರ ಮೂಲಕವೇ ಗಣ್ಯರು ವೇದಿಕೆಗೆ ತೆರಳಲಿದ್ದಾರೆ. ಅಂತರ ಕಾಪಾಡಿಕೊಂಡೆ 2000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಉಳಿದೆಡೆ ಮ್ಯಾಟ್ ಅಳವಡಿಸಲಾಗಿದೆ. ಅಲ್ಲದೇ ಜನದಟ್ಟಣೆ ತಪ್ಪಿಸಲು ವಿಜಯನಗರದ ಆರು ತಾಲೂಕು ಕೇಂದ್ರಗಳಲ್ಲೂ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲೇ ಏಳೆಂಟು ಕಡೆಯಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲೂ ವೇದಿಕೆ ಕಾರ್ಯಕ್ರಮ ಲೈವ್ ಆಗಿ ಜನರು ವೀಕ್ಷಣೆ ಮಾಡಲಿದ್ದಾರೆ.
ವಿಜಯನಗರ ವೈಭವ:
ನಗರದ ವಡಕರಾಯ ದೇಗುಲದಿಂದ ಅ. 2ರ ಸಂಜೆ 4 ಗಂಟೆಗೆ ವಿಜಯನಗರ ವೈಭವ ಮೆರವಣಿಗೆ ನಡೆಯಲಿದೆ. 80 ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಆಳ್ವಾಸ್ ಸಂಸ್ಥೆಯ 25 ಕಲಾವಿದರೂ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ವಿಜಯನಗರದ ನೆಲದಲ್ಲಿ ಜಾನಪದ ಕಲಾಲೋಕವೇ ಸೃಷ್ಟಿಯಾಗಲಿದೆ.
ಭುವನೇಶ್ವರಿ ಮೂರ್ತಿ:
ಈ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಸಿಂಗರಿಸಿದ ನಾಡದೇವತೆ ಭುವನೇಶ್ವರಿ ಮೂರ್ತಿ ಹಾಗೂ ಇನ್ನೊಂದು ತೆರೆದ ವಾಹನದಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀಕೃಷ್ಣದೇವರಾಯ ಮತ್ತು ಅವರ ದರ್ಬಾರ್(ಆಸ್ಥಾನ ಕವಿಗಳು), ವಿದ್ಯಾರಣ್ಯ ಶ್ರೀಗಳ ವೇಷಧಾರಿಗಳಿರಲಿದ್ದಾರೆ.
ವಿಜಯನಗರ ಉತ್ಸವದಲ್ಲಿ ಖ್ಯಾತ ಡ್ರಮ್ಮರ್ ಶಿವಮಣಿ, ರಾಜೇಶ ವೈದ್ಯ ಮತ್ತು ಪ್ರವೀಣ ಗೋಡ್ಖಿಂಡಿ ಅವರು ಅ. 2ರಂದು ರಾತ್ರಿ 10ಕ್ಕೆ ವಾದ್ಯ ಸಂಗೀತ ರಸದೌತಣವನ್ನು ಸಂಗೀತ ಪ್ರೇಮಿಗಳಿಗೆ ಉಣಬಡಿಸಲಿದ್ದಾರೆ. ಅ. 3ರಂದು ಕಣ್ಣೆ ಅದಿರಿಂದಿ (ಕಣ್ಣು ಹೊಡಿಯಾಕ) ಹಾಡಿನ ಖ್ಯಾತಿಯ ಗಾಯಕಿ ಸತ್ಯವತಿ ಮಂಗ್ಲಿ ಅವರು ಜಾನಪದ ಮತ್ತು ಚಲನಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಖ್ಯಾತಗಾಯಕ ವಿಜಯಪ್ರಕಾಶ್ ಮತ್ತು ಅವರ ತಂಡವು ಚಲನಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಸಮಾರೋಪ:
ಅ. 3ರ ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಕೇಂದ್ರ ಸಚಿವ ಭಗವಂತ್ ಖೂಬಾ ಸೇರಿದಂತೆ ಸಚಿವರು ಹಾಗು ಗಣ್ಯರು ಭಾಗವಹಿಸಲಿದ್ದಾರೆ. ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ.