
ಬೆಂಗಳೂರು(ಜು.03): ಕಳೆದ ಸಾಲಿನ ಜಿಎಸ್‌ಟಿ ಪರಿಹಾರ ಬಾಕಿ 11800 ಕೋಟಿ ರುಪಾಯಿ ಬಿಡುಗಡೆ ಹಾಗೂ ಪ್ರಸಕ್ತ ವರ್ಷದ ಜಿಎಸ್‌ಟಿ ಪರಿಹಾರ 1800 ಕೋಟಿ ರುಪಾಯಿ ಹಣವನ್ನು ಕೇಂದ್ರ ಸರ್ಕಾರ ಸಾಲ ಪಡೆದು ರಾಜ್ಯಕ್ಕೆ ಒದಗಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಹಣಕಾಸು ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸಲಾಯಿತು ಎಂದರು.
ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಡಿ ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾಗಬೇಕಿರುವ ಹಣಕಾಸಿನ ನೆರವು ನೀಡುವಂತೆ ಕೇಂದ್ರ ಸಚಿವರನ್ನು ಕೋರಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ತ್ವರಿತಗತಿಯಲ್ಲಿ ಕೇಂದ್ರ ಪ್ರಯೋಜಿತ ಯೋಜನೆಗಳಿಗೆ ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.
'ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಕರ್ನಾಟಕಕ್ಕೆ ಹೆಚ್ಚಿನ ಸಹಕಾರ'
2021-22ನೇ ಸಾಲಿನ ಮೊದಲ ತ್ರೈ ಮಾಸಿಕ ಅವಧಿಯಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿ ಪಾಲಿನ ಮೊದಲ ಕಂತನ್ನು ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಅದಕ್ಕೂ ಅವರು ಒಪ್ಪಿಗೆ ನೀಡಿದ್ದಾರೆ ಎಂದರು.
ಕಳೆದ ವರ್ಷದ ಜಿಎಸ್‌ಟಿ ಪರಿಹಾರ ಬಾಕಿ 11800 ಕೋಟಿ ರುಪಾಯಿ ಹಣವನ್ನು ರಾಜ್ಯಕ್ಕೆ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕಳೆದ ಬಾರಿಯಂತೆ ಜಿಎಸ್‌ಟಿ ಪರಿಹಾರ 1800 ಕೋಟಿ ರು. ಹಣವನ್ನು ಕೇಂದ್ರ ಸರ್ಕಾರ ಸಾಲ ಪಡೆದು ರಾಜ್ಯಕ್ಕೆ ಒದಗಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಕೋವಿಡ್ ನಿರ್ವಹಣೆ ಮತ್ತು ಕೋವಿಡ್ ಮೂರನೇ ಅಲೆ ತಯಾರಿಗೆ ಅಗತ್ಯವಾದ ಹಣಕಾಸಿನ ವ್ಯವಸ್ಥೆಗಳ ಕುರಿತು ಚರ್ಚಿಸಲಾಯಿತು. ಕೋವಿಡ್ ನಿರ್ವಹಣೆಗೆ ಯಾವುದೇ ರೀತಿಯ ಹಣಕಾಸಿನ ಅಭಾವ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಕೇಂದ್ರ ಸಚಿವರು ಕೊಟ್ಟಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ