2 ಸಾವಿರ ಗೃಹ ರಕ್ಷಕರ ನಿಯೋಜನೆ ಸಚಿವರ ಮಾತು| ಸೋಂಕಿನಿಂದಾಗಿ ಹಲವು ಪೊಲೀಸರು ಕ್ವಾರಂಟೈನ್ ಹಿನ್ನೆಲೆ| ಅನಗತ್ಯ ಮನೆಯಿಂದ ಹೊರಬಂದು ಪರಿಸ್ಥಿತಿ ಕೈ ಮೀರಿದರೆ ಪೊಲೀಸ್ ಫೋರ್ಸ್ ಬಳಸಲಾಗುತ್ತದೆ. ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ: ಸಚಿವ ಬಸವರಾಜ್ ಬೊಮ್ಮಾಯಿ|
ಬೆಂಗಳೂರು(ಜು.16): ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಲುವಾಗಿ ಶೀಘ್ರವೇ ಬೆಂಗಳೂರಿಗೆ ಎರಡು ಸಾವಿರ ಗೃಹ ರಕ್ಷಕರನ್ನು ನಿಯೋಜಿಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊರೋನಾ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ ಎಂದರು.
ನಾಲ್ಕೈದು ತಿಂಗಳಿಂದ ಕೊರೋನಾ ವಿರುದ್ಧ ಹೋರಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಇದರಿಂದ ಹಲವು ಪೊಲೀಸರು ಸೋಂಕಿತರಾಗಿದ್ದಾರೆ. ಕೆಲವರು ಕ್ವಾರಂಟೈನ್‌ನಲ್ಲಿದ್ದಾರೆ. ಆದರೂ ಪೊಲೀಸರ ಗಟ್ಟಿಮನೋಬಲದಿಂದ ಬಂದೋಬಸ್‌್ತ ಕೆಲಸಗಳು ಅಭಾದಿತವಾಗಿ ಮುಂದುವರೆದಿವೆ. ಲಾಕ್‌ಡೌನ್ ಪರಿಸ್ಥಿತಿ ಕುರಿತು ಹಿರಿಯ ಅಧಿಕಾರಿಗಳ ಜತೆ ಸಮಾಲೋಚಿಸಿದ್ದೇನೆ. ಈಗ ಲಾಕ್‌ಡೌನ್ ವೇಳೆ ಪೊಲೀಸರ ಜೊತೆ ಕಾರ್ಯನಿರ್ವಹಿಸಲು 2 ಸಾವಿರ ಗೃಹ ರಕ್ಷದಳ ನೇಮಿಸಲಾಗುತ್ತಿದೆ. ಸ್ವಯಂ ಸೇವಕರ ನೇಮಕಾತಿಗೂ ಕೂಡಾ ಇಲಾಖೆ ಅರ್ಜಿ ಆಹ್ವಾನಿಸಿದೆ ಎಂದು ತಿಳಿಸಿದರು.
ರಸ್ತೆಗಿಳಿಯಬೇಡಿ, 12 ಗಂಟೆ ನಂತರ ಹೊರ ಬಂದ್ರೆ ಲಾಠಿ ಏಟು ಪಕ್ಕಾ; ಗೃಹ ಸಚಿವ
ಬೆಂಗಳೂರು ನಗರ ವ್ಯಾಪ್ತಿ ಸ್ವಚ್ಛತೆಗೆ ಸುಮಾರು ಅಗ್ನಿಶಾಮಕ ದಳದ 50 ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ. ಹಾಗೆಯೇ 200 ಆ್ಯಂಬುಲೆನ್ಸ್‌ಗಳನ್ನು ಸಿದ್ದಗೊಳಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ 100 ಆ್ಯಂಬುಲೆನ್ಸ್‌ಗಳು ಸೇವೆಗೆ ಲಭ್ಯವಿವೆ. ಈ ವಾಹನಗಳ ಬಳಕೆ ಕುರಿತು ಬಿಬಿಎಂಪಿ ತೀರ್ಮಾನಿಸುತ್ತದೆ ಎಂದು ವಿವರಿಸಿದರು.
ಲಾಕ್‌ಡೌನ್ ವೇಳೆ ಹಣ್ಣು, ತರಕಾರಿ, ಹಾಲು ಹಾಗೂ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಅಗತ್ಯ ಸೇವಾ ವಲಯ ಹೊರತುಪಡಿಸಿ ಬೇರೆ ಯಾರಿಗೂ ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ. ಹಾಗೆಯೇ ಕೃಷಿ ವಲಯದ ಕೈಗಾರಿಕಾ ಉತ್ಪನ್ನಗಳ ಸರಬರಾಜಿಗೆ ಸಹ ಅಡ್ಡಿ ಮಾಡುವುದಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಜನರಿಗೆ ಮೂಲಭೂತ ಸೌಲಭ್ಯಗಳಿಗೆ ತೊಂದರೆ ಉಂಟಾಗದಂತೆ ನಿಗಾವಹಿಸಲಾಗಿದೆ. ಪೊಲೀಸರು ಸಹ ಕೊರೋನಾಗೆ ತುತ್ತಾಗಿದ್ದಾರೆ. ಜನರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಲಾಕ್‌ಡೌನ್ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಆಯುಕ್ತ ಎಸ್.ಭಾಸ್ಕರ್ ರಾವ್, ಹೆಚ್ಚುವರಿ ಆಯುಕ್ತರಾದ ಸೌಮೆಂದು ಮುಖರ್ಜಿ, ಎಸ್.ಮುರುಗನ್ ಹಾಗೂ ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್.ರವಿಕಾಂತೇಗೌಡ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಇಂದಿನಿಂದ ಕಠಿಣ
ಬುಧವಾರ ಮೊದಲ ದಿನವಾದ ಕಾರಣ ಜನರಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಜನರು ಪರಿಸ್ಥಿತಿ ಅರಿತುಕೊಳ್ಳದೆ ಹೋದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಗುರುವಾರದಿಂದ ಲಾಕ್‌ಡೌನ್ ಮತ್ತಷ್ಟುಬಿಗಿಯಾಗಲಿದೆ. ಲಾಕ್‌ಡೌನ್ ಯಾಕೆ ಜಾರಿ ಮಾಡಲಾಗಿದೆ ಎಂದರಿತು ಜನರೇ ಸ್ವಯಂ ಪ್ರೇರಿತರಾಗಿ ನಿರ್ಬಂಧನಕ್ಕೊಳಗಾಬೇಕು. ಅನಗತ್ಯ ಮನೆಯಿಂದ ಹೊರಬಂದು ಪರಿಸ್ಥಿತಿ ಕೈ ಮೀರಿದರೆ ಪೊಲೀಸ್ ಫೋರ್ಸ್ ಬಳಸಲಾಗುತ್ತದೆ. ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.