ದಾಂಧಲೆಯ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ

By Kannadaprabha News  |  First Published Aug 12, 2020, 7:12 AM IST

ಸೋಷಿಯಲ್‌ ಮೀಡಿಯಾ ಪೋಸ್ಟ್‌ ದಾಂಧಲೆಗೆ ನೆಪ ಅಷ್ಟೇ|ಈ ಹಿಂದೆ ಪಾದರಾಯನಪುರದ ಗಲಾಟೆ ವೇಳೆಯಲ್ಲೂ ಪೊಲೀಸರು ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಂಡಿದ್ದರು| ಅದರಂತೆ ಪ್ರಸ್ತುತ ಪ್ರಕರಣದಲ್ಲೂ ಪೊಲೀಸ್‌ ಇಲಾಖೆ ದಕ್ಷತೆಯಿಂದ ಕಾರ್ಯ ನಿರ್ವಹಿಸಲಿದೆ|


ಬೆಂಗಳೂರು(ಆ.12): ನಗರದ ಕಾವಲ್‌ಬೈರಸಂದ್ರದಲ್ಲಿ ಹಾಗೂ ಡಿ.ಜೆ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಮೇಲ್ನೋಟಕ್ಕೆ ಪೂರ್ವನಿಯೋಜಿತ ಎಂಬಂತೆ ಕಂಡು ಬಂದಿದೆ. ದಾಂಧಲೆ ಹಿಂದೆ ಯಾರ ಕೈವಾಡವಿದ್ದರೂ ಅವರ ವಿರುದ್ಧ ಕಾನೂನಾತ್ಮಕವಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಿತ್ಯ ಹಲವಾರು ಪೋಸ್ಟ್‌ಗಳು ಬರುತ್ತವೆ. ಸದ್ಯ ಕಾವಲ್‌ಬೈರಸಂದ್ರದಲ್ಲಿ ನಡೆದ ಘಟನೆಗೆ ಧರ್ಮದ ವಿರುದ್ಧ ಹಾಕಿದ್ದಾರೆ ಎನ್ನಲಾದ ಪೋಸ್ಟ್‌ ಒಂದು ನೆಪ ಅಷ್ಟೆ. ಗುಂಪಾಗಿ ಬಂದು ನಡೆಸಿರುವ ಈ ಗಲಾಟೆ ಹಿಂದೆ ಯಾರೇ ಪ್ರಭಾವಿಗಳಿದ್ದರೂ ಪೊಲೀಸ್‌ ಇಲಾಖೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Tap to resize

Latest Videos

ಘಟನೆ ಬಗ್ಗೆ ಮಂಗಳವಾರ ತಡರಾತ್ರಿ ಪ್ರತಿಕ್ರಿಯೆ ನೀಡಿದ ಅವರು, ತಪ್ಪಿತಸ್ಥರನ್ನು ಬಂಧಿಸಿ, ಕಾನೂನಿನ ಚೌಕಟ್ಟಿನಡಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಂತಹ ವಿಚಾರಗಳಾದರೂ ಕಾನೂನಿನಡಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಬೆಂಕಿ ಹಚ್ಚಿ, ಕಲ್ಲು ತೂರಾಡಿ ದಾಂಧಲೆ ನಡೆಸುವುದು ತಪ್ಪು ಎಂದಿದ್ದಾರೆ.

ಬೆಂಗ್ಳೂರಲ್ಲಿ ಪುಂಡರ ದಾಂಧಲೆ,  ಶಾಸಕರ ಮನೆ ಮೇಲೆ ದಾಳಿ,  ಸುವರ್ಣ ವರದಿಗಾರರ ಮೇಲೆ ಹಲ್ಲೆ

ಉದ್ವಿಗ್ನ ಪರಿಸ್ಥಿತಿ ನಿಭಾಯಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ. ಪೂರಕವಾಗಿ ಕೆಎಸ್‌ಆರ್‌ಪಿ ಸೇರಿದಂತೆ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ಕಳುಹಿಸಲಾಗಿದೆ. ಅಲ್ಲದೇ ಗಲಾಟೆ ನಿಯಂತ್ರಣಕ್ಕಾಗಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ ಎಂದಿದ್ದಾರೆ.

ಈ ಹಿಂದೆ ಪಾದರಾಯನಪುರದ ಗಲಾಟೆ ವೇಳೆಯಲ್ಲೂ ಪೊಲೀಸರು ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಂಡಿದ್ದರು. ಅದರಂತೆ ಪ್ರಸ್ತುತ ಪ್ರಕರಣದಲ್ಲೂ ಪೊಲೀಸ್‌ ಇಲಾಖೆ ದಕ್ಷತೆಯಿಂದ ಕಾರ್ಯ ನಿರ್ವಹಿಸಲಿದೆ. ಆದ್ದರಿಂದ ಇತರ ಪ್ರದೇಶಗಳ ನಿವಾಸಿಗಳು ಯಾರೂ ಕೂಡ ಉದ್ವೇಗಕ್ಕೆ ಒಳಗಾಗಬಾರದು ಎಂದು ಸಚಿವರು ಮನವಿ ಮಾಡಿಕೊಂಡಿದ್ದಾರೆ.

ದಾಂಧಲೆ ನಿಯಂತ್ರಣಕ್ಕೆ ಕಠಿಣ ಕ್ರಮ​ಕೈ​ಗೊ​ಳ್ಳಿ: ಸಿಎಂ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ತಡರಾತ್ರಿ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರಿಗೆ ಕರೆ ಮಾಡಿ ದಾಂಧಲೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪೊಲೀಸರಿಗೆ ಮುಕ್ತ ಅಧಿಕಾರ ನೀಡಿ ಪರಿಸ್ಥಿತಿ ಹತೋಟಿ ತರಬೇಕು. ಯಾವುದೇ ಕಾರಣಕ್ಕೂ ಈ ಘಟನೆ ನಗರದ ಇತರ ಭಾಗಗಳಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.
 

click me!