ಕಳೆದ 5 ವರ್ಷಗಳಲ್ಲಿ 468 ಹುಸಿ ಬಾಂಬ್ ಕರೆ, 14 ಆರೋಪಿಗಳ ಬಂಧನ, ಇಬ್ಬರಿಗೆ ಮಾತ್ರವೇ ಶಿಕ್ಷೆ!

Kannadaprabha News   | Kannada Prabha
Published : Apr 01, 2026, 10:57 AM IST
Hoax Bomb Threat Investigation in karnataka Police Arrest Suspect

ಸಾರಾಂಶ

ಕಳೆದ ಐದು ವರ್ಷಗಳಲ್ಲಿ ರಾಜ್ಯಾದ್ಯಂತ 468 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಬೆಂಗಳೂರು ನಗರ ಅತಿ ಹೆಚ್ಚು ಪ್ರಕರಣಗಳನ್ನು ಕಂಡಿದೆ. ಈ ಕರೆಗಳು ಸಾರ್ವಜನಿಕರಲ್ಲಿ ಮತ್ತು ಪೊಲೀಸರಲ್ಲಿ ತೀವ್ರ ಆತಂಕ ಸೃಷ್ಟಿಸಿದರೂ, ಬೆರಳೆಣಿಕೆಯಷ್ಟು ಆರೋಪಿಗಳನ್ನು ಮಾತ್ರ ಬಂಧಿಸಿ ಶಿಕ್ಷೆಗೆ ಗುರಿಪಡಿಸಲಾಗಿದೆ

ಬೆಂಗಳೂರು (ಏ.1): ಕಳೆದ ಐದು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 468 ಹುಸಿ ಬಾಂಬ್‌ ಬೆದರಿಕೆ ಕರೆಗಳು ಬಂದಿದ್ದು, ಬೆರಳೆಣಿಕೆಯಷ್ಟು ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ.

ದುಷ್ಕರ್ಮಿಗಳು ಶಾಲಾ- ಕಾಲೇಜು, ನ್ಯಾಯಾಲಯ, ಹೋಟೆಲ್‌, ದೇಗುಲ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ರಾಯಭಾರಿ ಕಚೇರಿ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ಬಾಂಬ್‌ ಇಟ್ಟಿರುವುದಾಗಿ ಕರೆ ಅಥವಾ ಇ- ಮೇಲ್‌ ಮೂಲಕ ಬೆದರಿಕೆ ಹಾಕಿ ಭಯದ ವಾತಾವರಣ ಉಂಟು ಮಾಡುತ್ತಾರೆ. ಇದು ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ತಲೆಬಿಸಿಯನ್ನುಂಟು ಮಾಡುತ್ತದೆ. ಕಿಡಿಗೇಡಿಗಳು ಈ ರೀತಿ ರಾಜ್ಯಾದ್ಯಂತ ಕಳೆದ 5.3 ವರ್ಷದಲ್ಲಿ 468 ಹುಸಿ ಬಾಂಬ್‌ ಬೆದರಿಕೆ ಹಾಕಿರುವುದು ಪೊಲೀಸರ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ.

ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ:

ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬ ಗಾದೆ ಮಾತಿನಂತೆ ದುಷ್ಕರ್ಮಿಗಳು ಅನಾಮಧೇಯರ ಹೆಸರಿನಲ್ಲಿ ಕರೆ ಅಥವಾ ಇ-ಮೇಲ್‌ ಮಾಡಿ ಬಾಂಬ್‌ ಬೆದರಿಕೆ ಹಾಕಿ ಮಜಾ ತೆಗೆದುಕೊಳ್ಳುತ್ತಾರೆ. ಬಾಂಬ್‌ ಬೆದರಿಕೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ, ವಿಧ್ವಂಸಕ ಕೃತ್ಯ ತಪಾಸಣಾ ತಂಡಗಳು ಮತ್ತು ಶ್ವಾನ ದಳದೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಯಾವುದೇ ಸ್ಫೋಟಕಗಳು ಪತ್ತೆಯಾಗದಿದ್ದಾಗ ಇದೊಂದು ಹುಸಿ ಬಾಂಬ್‌ ಕರೆ ಎಂಬ ನಿರ್ಧಾರಕ್ಕೆ ಬಂದು ನಿಟ್ಟುಸಿರು ಬಿಡುತ್ತಾರೆ.

ಇನ್ನು ಬಾಂಬ್‌ ಬೆದರಿಕೆ ವಿಚಾರ ತಿಳಿದ ಪಾಲಕರು ತಮ್ಮ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿರುವ ಶಾಲಾ-ಕಾಲೇಜುಗಳತ್ತ ಕೆಲಸ ಕಾರ್ಯ ಬಿಟ್ಟು ದೌಡಾಯಿಸುತ್ತಾರೆ. ದುಷ್ಕರ್ಮಿಗಳ ಒಂದು ಕರೆಯು ಹಲವು ಆತಂಕಕ್ಕೆ ಕಾರಣವಾಗುತ್ತದೆ.

ಬೆಂಗಳೂರಲ್ಲೇ ಅಧಿಕ ಕೇಸ್‌:

ಕಳೆದ 5.3 ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 468 ಪ್ರಕರಣ ದಾಖಲಾಗಿದ್ದರೆ ರಾಜಧಾನಿ ಬೆಂಗಳೂರಲ್ಲೇ 318 ಪ್ರಕರಣ ದಾಖಲಾಗಿವೆ. 2021ರಲ್ಲಿ 2, 2022 ರಲ್ಲಿ 8, 2023ರಲ್ಲಿ 144, 2024ರಲ್ಲಿ 59, 2025ರಲ್ಲಿ 86, 2026ರ ಮಾರ್ಚ್‌ವರೆಗೂ 19 ಪ್ರಕರಣ ಸೇರಿ ಒಟ್ಟು 318 ಪ್ರಕರಣ ದಾಖಲಾಗಿವೆ. ಬೆಂಗಳೂರು ಬಿಟ್ಟರೆ ಮಂಗಳೂರು 2ನೇ ಮತ್ತು ಮೈಸೂರು 3ನೇ ಸ್ಥಾನದಲ್ಲಿದೆ.

ಇಬ್ಬರಿಗೆ ಮಾತ್ರ ಶಿಕ್ಷೆ:

ರಾಜ್ಯದಲ್ಲಿ ದಾಖಲಾದ 468 ಬಾಂಬ್‌ ಬೆದರಿಕೆ ಪ್ರಕರಣದ ಪೈಕಿ ಕೇವಲ 14 ಆರೋಪಿಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ. ಆದರೆ ಅಚ್ಚರಿಯ ವಿಷಯವೇನೆಂದರೆ, ಇಬ್ಬರಿಗೆ ಮಾತ್ರ ಶಿಕ್ಷೆಯಾಗಿದೆ. 2020ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಬಾಂಬ್‌ ಬೆದರಿಕೆ ಪ್ರಕರಣ ದಾಖಲಿಸಲಾಗಿತ್ತು. ನಂತರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿತ್ತು. ಆ ಇಬ್ಬರು ಆರೋಪಿಗಳಿಗೂ ಶಿಕ್ಷೆಯಾಗಿದೆ.

1100 ಹುಸಿ ಬಾಂಬ್‌ ಕರೆ ಮಾಡಿದವನ ಬಂಧನ

ದೇಶದಾದ್ಯಂತ ಶಾಲಾ-ಕಾಲೇಜು, ನ್ಯಾಯಾಲಯಗಳು ಸೇರಿದಂತೆ ವಿವಿಧ ಸ್ಥಳಗಳಿಗೆ 1100 ಹುಸಿ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪಿ ಶ್ರೀನಿವಾಸ್‌ ಲೂಯಿಸ್‌(47) ಎಂಬಾತನನ್ನು ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೈಸೂರಿನಲ್ಲಿ ಬಂಧಿಸಿದ್ದರು. ಆರೋಪಿಯಿಂದ ಮೊಬೈಲ್‌ ಫೋನ್‌ ಮತ್ತು ಹಲವು ಸಿಮ್‌ ಕಾರ್ಡ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದಿದ್ದರು.

ಬಾಂಬ್‌ ಬೆದರಿಕೆ ಕರೆ: ಕಮಿಷನರೇಟ್‌ ಹಾಗೂ ಜಿಲ್ಲಾವಾರು ಅಂಕಿ ಅಂಶಗಳು

ಜಿಲ್ಲೆ 2020 2021 2022 2023 2024 2025 2026 ಒಟ್ಟು

ಬೆಂಗಳೂರು ನಗರ 02 08 144 59 86 19 318

ಮಂಗಳೂರು ನಗರ 02 01 02 09 17 03 34

ಮೈಸೂರು ನಗರ 05 03 04 03 04 11 03 33

ಬೆಂಗಳೂರು ಜಿಲ್ಲೆ 02 04 03 01 10

ಹಾಸನ 07 02 09

ಹುಬ್ಬಳಿ ನಗರ 04 02 01 07

ಬೆಂಗಳೂರು ಸೌತ್‌ 01 01 02 01 05

ಕಾರವಾರ 01 03 01 05

ಕಲಬುರ್ಗಿ ನಗರ 01 01 02 01 05

ಮಂಡ್ಯ 01 02 01 04

ಬೀದರ್‌ 04 04

ಉಡುಪಿ 03 03

ಬೆಳಗಾವಿ ನಗರ 02 01 03

ಮೈಸೂರು 03 03

ತುಮಕೂರು 01 01 03

ಕೋಲಾರ 02 02

ಬೆಳಗಾವಿ 01 01 02

ವಿಜಯಪುರ 01 01 02

ಹಾವೇರಿ 01 01 02

ಗದಗ 01 01 02

ಬಾಗಲಕೋಟೆ 01 01 02

ದಾವಣಗೆರೆ 01 01 02

ಬಳ್ಳಾರಿ

ರಾಯಚೂರು 01 01

ಧಾರವಾಡ 01 01

ಮಂಗಳೂರು 01 01

ಚಾಮರಾಜನಗರ 01 01

ಕೊಡಗು 01 01

ಕೆಜಿಎಫ್ 01 01

ಕಲಬುರ್ಗಿ 01 01

ಒಟ್ಟು 07 06 15 153 89 159 39 468

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

₹473 ಕೋಟಿ ತೆರಿಗೆ ಬಾಕಿ: ವಿಧಾನಸೌಧ, ರಾಜಭವನಕ್ಕೆ ಬೀಗ ಹಾಕಲು ಎನ್‌ಆರ್ ರಮೇಶ್ ಒತ್ತಾಯ
ಪೊಲೀಸರ ವಾಟ್ಸ್ಆ್ಯಪ್ ನೋಟಿಸ್‌ಗೆ ಬ್ರೇಕ್: ಹೈಕೋರ್ಟ್ ಮಹತ್ವದ ಆದೇಶ!